ಸಿದ್ದರಾಮಯ್ಯ ಮೋದಿ ಆಗಲು ಸಾಧ್ಯವಿಲ್ಲ: ಸಚಿವ ರಮಾನಾಥ ರೈ
ಮಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೋದಿ ಆಗಲು ಸಾಧ್ಯವಿಲ್ಲ. ನರೇಂದ್ರ ಮೋದಿ ಮನುಷ್ಯ ದ್ವೇಷಿ. ಸಿದ್ಧರಾಮಯ್ಯ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಅರಣ್ಯ ಸಚಿವ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ ಆದ ರಮಾನಾಥ ರೈ ಪ್ರತಿಕ್ರಿಯಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸ್ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರಲ್ಲಿ ಮಾತನಾಡಿದರು.
ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದಾಕ್ಷಣದಿಂದ ಪ್ರಣಾಳಿಕೆಯಲ್ಲಿದ್ದ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಹಸಿವು ನೀಗಿಸುವ ಅನ್ನಭಾಗ್ಯ, ಪೌಷ್ಟಿಕಾಂಶ ಹೆಚ್ಚಿಸುವ ಕ್ಷೀರಭಾಗ್ಯ, ಶಾಲಾ ಹೆಣ್ಮಕ್ಕಳಿಗೆ ರು. 2 ಪಾವತಿ ಯೋಜನೆ, ಅಲ್ಪಸಂಖ್ಯಾತರ ಸಾಲ ಮನ್ನಾ, ಭಾಗ್ಯಜ್ಯೋತಿ, ಪಿಂಚಣಿ ಅದಾಲತ್, ಆಶ್ರಯ ಯೋಜನೆ ಸೇರಿದಂತೆ ಇತರ ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಮುಖ್ಯಮಂತ್ರಿಯನ್ನು ಮೋದಿಗೆ ಹೊಲಿಸುವುದು ಸರಿಯಲ್ಲ ಎಂದರು.