ಸುದ್ದಿ ಸಂಕ್ಷೇಪ
ಇಂದು ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ
ಮೂಲ್ಕಿ: ಕಿನ್ನಿಗೋಳಿ ಯುಗಪುರುಷದ ಶ್ರೀಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಆ.21ರಿಂದ 23ರವರೆಗೆ ನಡೆಯಲಿದೆ. ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ, ಸಂಜೆ ತ್ರಿಕಾಲ ಪೂಜೆ, ಬೆಳಗ್ಗೆ ಮತ್ತು ಸಂಜೆ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. 21ರಂದು ಬೆಳಗ್ಗೆ ಕಟೀಲಿನ ಭ್ರಾಮರಿ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಸಂಜೆ ಮೆನ್ನಬೆಟ್ಟು ಭ್ರಾಮರಿ ಮಹಿಳಾ ಸಮಾಜದಿಂದ ಭಜನೆ, 22ರಂದು ಬೆಳಗ್ಗೆ ಶ್ರೀದೇವಿ ಭಜನಾ ಮಂಡಳಿ ಕಟೀಲು ಇವರಿಂದ ಭಜನೆ, ಸಂಜೆ ಪುನರೂರಿನ ಶ್ರೀವಿಶ್ವನಾಥ ಭಜನಾ ಮಂಡಳಿಯಿಂದ ಭಜನೆ, ಧಾರ್ಮಿಕ ಸಭಾ ಕಾರ್ಯಕ್ರಮ, 23ರಂದು ಬೆಳಗ್ಗೆ ಕಿನ್ನಿಗೋಳಿಯ ವಾಗ್ದೇವಿ ಭಜನಾ ಮಂಡಳಿಯಿಂದ ಭಜನೆ, ಸಂಜೆ ಕಟೀಲಿನ ಲಿಂಗಪ್ಪ ಶೇರಿಗಾರ್‌ರಿಂದ ನಾಗಸ್ವರ ವಾದನ ಹಾಗೂ 30ನೇ ವರ್ಷದ ಸಾರ್ವಜನಿಕ ಸಾಮೂಹಿಕ ಅಷ್ತೋತ್ತರ ಶತ ಶ್ರೀಸತ್ಯನಾರಾಯಣ ಪೂಜೆ ಜರುಗಲಿದೆ ಎಂದು ಕಿನ್ನಿಗೋಳಿಯ ಯುಗಪುರುಷದ ಕೆ. ಭುವನಾಭಿರಾಮ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು, ನಾಳೆ ನಾರಾಯಣಗುರು ಜನ್ಮದಿನೋತ್ಸವ
ಮೂಲ್ಕಿ: ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 159ನೇ ಜನ್ಮ ದಿನಾಚರಣೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಆ. 21 ಮತ್ತು 22ರಂದು ನಡೆಯಲಿದೆ. 21ರಂದು ಬೆಳಗ್ಗೆ ಭಜನಾ ಜ್ಯೋತಿಯನ್ನು ಸಮಾಜ ಸೇವಕ ಪೂವಪ್ಪ ಎ. ಕಾರ್ನಾಡು ಉದ್ಘಾಟಿಸಲಿದ್ದು ರಾತ್ರಿ ಭಜನಾ ಮಂಗಲೋತ್ಸವ ಜರುಗಲಿದೆ. 22ರಂದು ಬೆಳಗ್ಗೆ ಶ್ರೀ ನಾರಾಯಣ ಗುರು ಮಹಿಳಾ ಮಂಡಳಿ ಮತ್ತು ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಬಳಿಕ ಸಭಾ ಕಾರ್ಯಕ್ರಮ ಜರುಗಲಿದೆ.