2 ಜ್ಯುವೆಲ್ಲರಿಯಿಂದ ರು. 42 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕಳವು
ಬಂಟ್ವಾಳ: ಕಳ್ಳರ ತಂಡವೊಂದು ಚಿನ್ನಾಭರಣಗಳ 2 ಮಳಿಗೆಗೆ ನುಗ್ಗಿ ರು. 42 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣಗಳನ್ನು ದೋಚಿ ಪರಾರಿಯಾದ ಘಟನೆ ಬಂಟ್ವಾಳ-ಮೂಡುಬಿದಿರೆ ರಾಜ್ಯ ಹೆದ್ದಾರಿಯ ಸಿದ್ದಕಟ್ಟೆ ಪೇಟೆಯಲ್ಲಿ ನಡೆದಿದೆ.
ಇಲ್ಲಿನ ವಿಶ್ವಜ್ಯೋತಿ ಕಾಂಪ್ಲೆಕ್ಸ್ನಲ್ಲಿರುವ ಸ್ವರ್ಣಪ್ರಭಾ ಹಾಗೂ ವಿಜಯಬ್ಯಾಂಕ್ ಕೆಳ ಅಂತಸ್ತಿನಲ್ಲಿರುವ ಧನಲಕ್ಷ್ಮೀ ಜ್ಯುವೆಲ್ಲರಿಯಲ್ಲಿ ಕಳವು ಘಟನೆ ನಡೆದಿದೆ. ಗುರುವಾರ ಬೆಳಗ್ಗಿನ ಜಾವ 3 ಗಂಟೆ ಹೊತ್ತಿಗೆ ಕೃತ್ಯ ಎಸಗಿದ ಗುಂಪು, ಬಳಿಕ ಸಮೀಪದ ನವರಂಗ್ ವೈನ್ ಶಾಪ್ನಿಂದಲೂ ಕಳವು ಮಾಡಲು ನಡೆಸಿದ ಯತ್ನ ವಿಫಲವಾಗಿದೆ.
ಘಟನೆ ವಿವರ: ವಿಶ್ವಜ್ಯೋತಿ ಕಾಂಪ್ಲೆಕ್ಸ್ನಲ್ಲಿರುವ ಸ್ವರ್ಣಪ್ರಭಾ ಜ್ಯುವೆಲ್ಲರಿಗೆ ಲಗ್ಗೆ ಹಾಕಿದ ಕಳ್ಳರು, ಅದರ ಶೆಟರ್ ಮುರಿದು ಲಾಕರ್ನ್ನು ಮೆಷಿನ್ ಕಟ್ಟಿಂಗ್ ಸಹಾಯದಲ್ಲಿ ಕತ್ತರಿಸಿ ಚಿನ್ನ, ಬೆಳ್ಳಿ, ವಜ್ರದ ಆಭರಣಗಳನ್ನು ಪೂರ್ತಿ ದೋಚಿದ್ದಾರೆ. ಬಳಿಕ ರಸ್ತೆಯ ಇನ್ನೊಂದು ಬದಿಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಧನಲಕ್ಷ್ಮಿ ಜ್ಯುವೆಲ್ಲರಿಯ ಶೆಟರ್ ಸೆಂಟರ್ಲಾಕ್ ಮುರಿದಿದ್ದಾರೆ. ಈ ವೇಳೆ ಸದ್ದು ಕೇಳಿದ ಬ್ಯಾಂಕ್ನ ಎಟಿಎಂ ಕಾವಲುಗಾರ ಪ್ರಭಾಕರ ಪೂಜಾರಿ ಕೆಳಗಡೆ ಧಾವಿಸಿ ಬಂದಿದ್ದು, ಈ ಸಂದರ್ಭ ಕಳ್ಳನೋರ್ವ ಚೂರಿ ತೋರಿಸಿ ಬೆದರಿಕೆಯೊಡ್ಡಿ ಹತ್ತಿರ ಬಾರದಂತೆ ತಡೆದಿದ್ದಾನೆ ಎನ್ನಲಾಗಿದೆ. ಬಳಿಕ ಉಳಿದವರು ಅಂಗಡಿಯೊಳಗೆ ನುಗ್ಗಿ ಸೇಫ್ಲಾಕರನ್ನು ಮೆಷಿನ್ ಕಟ್ಟಿಂಗ್ ಯಂತ್ರದ ಮೂಲಕ ಒಡೆದು ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಬಳಿಕ ಕಾವಲುಗಾರ ಪ್ರಭಾಕರ, ಅಲ್ಲೇ ಪಕ್ಕದ ಬೇಕರಿಯೊಂದರ ಮಾಲೀಕರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ಹಾಗೂ ಜ್ಯುವೆಲ್ಲರಿ ಮಾಲೀಕರಿಗೆ ಸುದ್ದಿ ಮುಟ್ಟಿಸಿದರು. ಬಂಟ್ವಾಳ ಗ್ರಾಮಾಂತರ ಹಾಗೂ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ಗಳಾದ ನಾಗೇಶ್, ಜಯಾನಂದ ಮತ್ತು ಬಂಟ್ವಾಳ ಸಿ.ಐ. ಅನಿಲ್ ಎಸ್. ಕುಲಕರ್ಣಿ ಮತ್ತು ಅವರ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು, ಶ್ವಾನದಳವನ್ನು ಸ್ಥಳಕ್ಕೆ ಕರೆಸಲಾಗಿದೆ. ಜಿಲ್ಲಾ ಎಸ್ಪಿ ಅಭಿಷೇಕ್ ಗೋಯಲ್ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ, ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.
ಕಳವು ಮೌಲ್ಯ ರು. 42 ಲಕ್ಷಕ್ಕೂ ಹೆಚ್ಚು: ಪ್ರಭಾಕರ ಆಚಾರ್ಯ ಎಂಬವರಿಗೆ ಸೇರಿದ ಸ್ವರ್ಣಪ್ರಭಾ ಜ್ಯುವೆಲ್ಲರಿಯಿಂದ 15 ಕೆ.ಜಿ ಬೆಳ್ಳಿ, 130 ಗ್ರಾಂ. ಚಿನ್ನದ ಆಭರಣಗಳನ್ನು ಕಳವುಗೈದಿದ್ದು, ಇದರ ಮೌಲ್ಯ ಸುಮಾರು ರು. 10 ಲಕ್ಷ ಎಂದು ಅಂದಾಜಿಸಲಾಗಿದೆ. ಪುಂಜಾಲಕಟ್ಟೆ ನಿವಾಸಿ ಚಿದಾನಂದ ಅವರಿಗೆ ಸೇರಿದ ಧನಲಕ್ಷ್ಮಿ ಜ್ಯುವೆಲ್ಲರಿಯಿಂದ 35 ಕೆ.ಜಿ ಬೆಳ್ಳಿ, 370 ಗ್ರಾಂ ಚಿನ್ನದ ಆಭರಣಗಳನ್ನು ಕಳವುಗೈಯಲಾಗಿದೆ. ಇದರ ಒಟ್ಟು ಮೌಲ್ಯ ಸುಮಾರು ರು. 32.22 ಲಕ್ಷ ಎಂದು ಅಂದಾಜಿಸಲಾಗಿದೆ.
ತನಿಖೆಗೆ ಮೂರು ತಂಡ: ಬಂಟ್ವಾಳ ಹಾಗೂ ಪೂಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಕಳವು ಪ್ರಕರಣದ ತನಿಖೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಬಂಟ್ವಾಳ ವೃತ್ತನಿರೀಕ್ಷಕ ಅನಿಲ್ ಎಸ್. ಕುಲಕರ್ಣಿ ತಿಳಿಸಿದ್ದಾರೆ. ಕೆಲ ದಿನಗಳ ಅಂತರದಲ್ಲಿಯೇ ಕುಂದಾಪುರ, ಮೂಡುಬಿದಿರೆಯಲ್ಲೂ ಇದೇ ರೀತಿಯ ಕಳವು ಘಟನೆ ನಡೆದಿದ್ದು, ಇದೊಂದು ಪರಿಣತ ದರೋಡೆಕೋರರ ಕೃತ್ಯ ಎಂದವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾವಲುಗಾರ ಪ್ರಭಾಕರ ಪೂಜಾರಿ, ಕಳ್ಳರ ಗುಂಪಿನಲ್ಲಿ 7 ಅಥವಾ 8 ಮಂದಿ ಇದ್ದರೆಂದು ಪೊಲೀಸರಿಗೆ ಮಾಹಿತಿ ನೀಡಿದ್ದು, ಓಮ್ನಿ ಹಾಗೂ ಮಾರುತಿ ಕಾರಿನಲ್ಲಿ ಬಂದು ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.
ಅಕ್ಕಪಕ್ಕವೇ ಆದರೂ ಠಾಣೆ ಎರಡು..
ಸಿದ್ದಕಟ್ಟೆ ಪೇಟೆಯ ಹೃದಯ ಭಾಗದಲ್ಲೇ ಕಳವು ಕೃತ್ಯ ನಡೆದ ಎರಡು ಜ್ಯುವೆಲ್ಲರಿ ಹಾಗೂ ವೈನ್ಶಾಪ್ ಇವೆ. ಆದರೆ ಈ ಎರಡು ಅಭರಣ ಮಳಿಗೆಗಳು ರಸ್ತೆಯ ಇಕ್ಕೆಲಗಳಲ್ಲಿವೆ. ಈ ಕಾರಣಕ್ಕೆ ಸ್ವರ್ಣಪ್ರಭಾ ಜ್ಯುವೆಲ್ಲರಿ ಅಂಗಡಿ ಮತ್ತು ನವರಂಗ್ ವೈನ್ಶಾಪ್ ಸಂಗಬೆಟ್ಟು ಗ್ರಾಮಕ್ಕೆ ಒಳಪಟ್ಟರೆ, ಧನಲಕ್ಷ್ಮಿ ಜ್ಯುವೆಲ್ಲರಿ ಕುಕ್ಕಿಪಾಡಿ ಗ್ರಾಮಕ್ಕೆ ಒಳಪಟ್ಟಿದೆ. ಸಂಗಬೆಟ್ಟು ಗ್ರಾಮ ಬಂಟ್ವಾಳ ಗ್ರಾಮಾಂತರ, ಕುಕ್ಕಿಪಾಡಿ ಗ್ರಾಮ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಸೇರಿದೆ. ಹಾಗಾಗಿ ಈ ಕಳವು ಪ್ರಕರಣ ಎರಡೂ ಠಾಣೆಗೂ ಹಂಚಿಹೋಗಿದೆ.