ಅಕ್ರಮ ಇರಾನಿ ಕೇಸರಿ ವಶ
ಮಂಗಳೂರು: ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರು. 12 ಲಕ್ಷ ಮೌಲ್ಯದ 12 ಕೆ.ಜಿ ಬೆಗೊನಿಯಾ ಬ್ರಾಂಡ್ ಇರಾನಿ ಕೇಸರಿಯನ್ನು ಗುರುವಾರ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿ ಓರ್ವನನ್ನು ಬಂಧಿಸಿದ್ದಾರೆ. ಬಂಧಿತನನ್ನು ಕೇರಳ ಕಣ್ಣೂರು ಜಿಲ್ಲೆಯ ಮತ್ತನ್ನೂರು ನಿವಾಸಿ ಅಬ್ದುಲ್ ರಶೀದ್ ಕರೀಂ ಎಂದು ಗುರ್ತಿಸಲಾಗಿದೆ. ಜೆಟ್ ಏರ್ವೇಸ್ ಮೂಲಕ ದುಬೈನಿಂದ ಆಗಮಿಸಿದ ಈತ ತನ್ನ ಲಗೇಜಿನಲ್ಲಿ ಬಟ್ಟೆ ಮತ್ತಿತರರ ವಸ್ತುಗಳ ನಡುವೆ ಕೇಸರಿಯನ್ನು ಬಚ್ಚಿಟ್ಟುಕೊಂಡಿದ್ದ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಕಸ್ಟಮ್ಸ್ ಪ್ರಕಟಣೆ ತಿಳಿಸಿದೆ.
ಅಪರಿಚಿತ ಶವ ಪತ್ತೆ
ಮಂಗಳೂರು: ಉಳ್ಳಾಲ-ತೊಕ್ಕೊಟ್ಟಿನ ಮಧ್ಯೆ ರೇಲ್ವೆ ಹಳಿ ಮೇಲೆ ಅಪರಿಚಿತ ಗಂಡಸಿನ ಶವ ಗುರುವಾರ ಪತ್ತೆಯಾಗಿದೆ. ಸುಮಾರು 35-40 ಹರೆಯದ ಈ ವ್ಯಕ್ತಿ ಗೋಧಿ ಮೈಬಣ್ಣ, ಗುಂಗುರು ಕೂದಲು ಹಾಗೂ ಬೋಳು ತಲೆ ಹೊಂದಿದ್ದಾರೆ. ಆಕಾಶನೀಲಿ ಬಣ್ಣದ ಫುಲ್ಕೈ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಅಂಗಿ ಜೇಬಿನಲ್ಲಿ ಯಾವುದೇ ಗುರುತು ಪತ್ತೆಯಾಗಿಲ್ಲ. ಶವವನ್ನು ವೆನ್ಲಾಕ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದ್ದು, ರೇಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸರ ಸೆಳೆದು ಪರಾರಿ
ಮಂಗಳೂರು: ಮಣ್ಣಗುಡ್ಡ ಪ್ರಥಮ ಕ್ರಾಸ್ನ ತೃಪ್ತಿ ಅಪಾರ್ಟ್ಮೆಂಟ್ ನಿವಾಸಿ ವತ್ಸಲಾ ಗೋಖಲೆ(59)ಕೊರಳಿನಿಂದ ಚಿನ್ನದ ಸರ ಎಗರಿಸಿದ ಘಟನೆ ಗುರುವಾರ ವರದಿಯಾಗಿದೆ. ಬೆಳಗ್ಗೆ 7.45ರ ಸುಮಾರಿಗೆ ತರಕಾರಿ ತರಲು ಪಾದಚಾರಿಯಾಗಿ ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದ ಅಪರಿಚಿತರಿಬ್ಬರು ಶೀಲಾ ಮೇಡಂ ಮನೆ ಎಲ್ಲಿ ಎಂದು ವಿಚಾರಿಸಿದ್ದಾರೆ. ವತ್ಸಲಾ ಆಲೋಚಿಸುತ್ತಿದ್ದಂತೆ ಕುತ್ತಿಗೆಗೆ ಕೈಹಾಕಿ ಚಿನ್ನದ ಸರ ಹಾಗೂ ಕರಿಮಣಿ ಸರ ಎಗರಿಸಿ ಪರಾರಿಯಾಗಿದ್ದಾರೆ. ಇವುಗಳ ಮೌಲ್ಯ ರು. 1 ಲಕ್ಷ ಎಂದು ಬರ್ಕೆ ಪೊಲೀಸರಿಗೆ ದೂರು ನೀಡಲಾಗಿದೆ.
ಮಾನಸಿಕ ಅಸ್ವಸ್ಥೆ ಸಾವು
ಮಂಗಳೂರು: ಕೊಣಾಜೆಯ ಮಿಶನ್ ಕಂಪೌಂಡ್ ನಿವಾಸಿ ಮಥಾಲಿಯಾ ಮೊಂತೆರೊ(60)ಬಾವಿಗೆ ಬಿದ್ದು ಸಾವಿಗೀಡಾದ ಘಟನೆ ಗುರುವಾರ ವರದಿಯಾಗಿದೆ. 3 ತಿಂಗಳಿಂದ ಮಾನಸಿಕ ಅಸ್ವಸ್ಥರಾಗಿ ತಿರುಗುತ್ತಿದ್ದ ಈಕೆ ಬುಧವಾರ ಸಂಜೆ ನಾಪತ್ತೆಯಾಗಿದ್ದರು. ಮರುದಿನ ಬೆಳಗ್ಗೆ ಈಕೆಯ ಶವ ತೋಟದ ಬಾವಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಸಹೋದರ ಇಲಿಯಾಸ್ ಮೊಂತೆರೊ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.
ರಸ್ತೆ ಬದಿ ಗದ್ದೆಗೆ ಉರುಳಿದ ಲಾರಿ
ಮೂಲ್ಕಿ: ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಗದ್ದೆಗೆ ಉರುಳಿಬಿದ್ದ ಘಟನೆ ಕೊಲ್ನಾಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಲಾರಿ ಜಖಂಗೊಂಡಿದ್ದು, ಸುಮಾರು ರು. 1.5 ಲಕ್ಷ ಮೌಲ್ಯದ ಪೈಂಟ್ ಡಬ್ಬಿಗಳು ಹಾನಿಗೊಂಡಿವೆ. ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.