ನಿಡ್ಡೋಡಿ ಸ್ಥಾವರ ಚುನಾವಣೆ ಬಳಿಕ?
ಮಂಗಳೂರು: ಮೂಡುಬಿದಿರೆ ನಿಡ್ಡೋಡಿಯಲ್ಲಿ ಪ್ರಸ್ತಾವನೆ ಹಂತದಲ್ಲಿರುವ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ(ಆಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್) ಸ್ಥಾಪನೆ ಸದ್ಯದ ಮಟ್ಟಿಗೆ ಮುಂದೂಡಿದೆ.
ನಿಡ್ಡೋಡಿ ಪ್ರದೇಶದಲ್ಲಿ ಕಂಡುಬಂದಿರುವ ತೀವ್ರ ವಿರೋಧ ಹಿನ್ನಲೆಯಲ್ಲಿ ಲೋಕಸಭಾ ಚುನಾವಣೆ ವರೆಗೆ ಸುಮ್ಮನಿರಲು ಕೇಂದ್ರ ಉದ್ದೇಶಿಸಿದ್ದು, ಎಲ್ಲವೂ ಸರಿಹೋದರೆ ಮತ್ತೆ ದಾಪುಗಾಲು ಹಾಕಬಹುದು ಇಲ್ಲವೇ ಕಾಲ್ಕೀಳಬಹುದು.
ಉತ್ತರ ಕನ್ನಡದ ತದಡಿಯಲ್ಲಿ ನಾಲ್ಕು ವರ್ಷ ಹಿಂದೆ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಪವರ್ ಫೈನಾನ್ಸ್ ಕಾರ್ಪೊರೇಷನ್(ಪಿಎಫ್ಸಿ) ಮತ್ತು ಕೇಂದ್ರೀಯ ವಿದ್ಯುತ್ ಪ್ರಾಧಿಕಾರ ಮುಂದಾಗಿತ್ತು. ಸ್ಥಾವರ ನಿರ್ಮಾಣ ಹೊಣೆ ಕರಾವಳಿ ವಿದ್ಯುತ್ ಕಂಪನಿ(ಕೆಪಿಸಿಎಲ್)ಗೆ. ಆದರೆ ಸ್ಥಳೀಯರ, ಜನಪ್ರತಿನಿಧಿಗಳ, ಮಠಾಧಿಪತಿಗಳ ವಿರೋಧದಿಂದ ಆರಂಭಿಕ ಹಂತದಲ್ಲೇ ಯೋಜನೆ ತದಡಿ ದಡ ಹತ್ತಿತ್ತು.
ಬಳಿಕ ದೇಶದ ವಿವಿಧ ಭಾಗಗಳಲ್ಲಿ ಸ್ಥಾವರ ನಿರ್ಮಾಣಕ್ಕೆ ಜಾಗ ಅರಸಿದ ಕೇಂದ್ರ ಕರಾವಳಿಯ ನಿಡ್ಡೋಡಿಯನ್ನು ಆರಿಸಲು ಉದ್ದೇಶಿಸಿತ್ತು. 6 ತಿಂಗಳ ಹಿಂದೆ ನಿಡ್ಡೋಡಿಗೆ ಆಗಮಿಸಿದ ಕೇಂದ್ರ ಹೈಪವರ್ ಕಮಿಟಿ ತಂಡ ಅಧ್ಯಯನಕ್ಕೆ ಮುಂದಾಯಿತು. ಆಗಲೇ ಸ್ಥಳೀಯರ ವಿರೋಧವನ್ನು ಎದುರಿಸಲಾಗದೆ ಹಿಂದಕ್ಕೆ ಹೋಯಿತು.
ಚುನಾವಣೆ ಬಳಿಕ ಹೆಜ್ಜೆ: ಕೇಂದ್ರ ಉನ್ನತಾಧಿಕಾರ ತಂಡ ಭೇಟಿ ನೀಡುವಾಗ ಪರಿಸರ ಮಾಲಿನ್ಯ ಮಂಡಳಿ, ಕೆಪಿಟಿಸಿಎಲ್, ಸಹಾಯಕ ಆಯುಕ್ತರು ಹೊರತುಪಡಿಸಿದರೆ ಬೇರೆ ಯಾರೂ ಇರಲಿಲ್ಲ. ಸ್ಥಳೀಯರ ವಿರೋಧದಿಂದ ತಂಡ ವಾಪಾಸ್ ಹೋದ ಬಳಿಕ ಯೋಜನೆ ಏನಾಗಿದೆ ಎಂದು ಯಾರಿಗೂ ತಿಳಿದಿಲ್ಲ. ಈಗ ಲಭ್ಯ ಮಾಹಿತಿ ಪ್ರಕಾರ, ಉಷ್ಣ ವಿದ್ಯುತ್ ಯೋಜನೆ ಲೋಕಸಭಾ ಚುನಾವಣೆ ಬಳಿಕ ಮುಂದಿನ ಹೆಜ್ಜೆ ಇಡಲಿದೆ.
ಮೊದಲು ಸ್ಥಳ ಗುರುತಿಸಬೇಕು, ನಂತರ ಯೋಜನಾ ವರದಿ ತಯಾರಿಸಬೇಕು. ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕು. ಪರಿಸರ, ಅರಣ್ಯ ಸೇರಿದಂತೆ ಅನುಮತಿ ಪತ್ರ ಪಡೆಯಬೇಕು. ಬಳಿಕವಷ್ಟೇ ಯೋಜನೆ ಕಾರ್ಯಗತಗೊಳ್ಳಲು ಸಾಧ್ಯ.
ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಸದ್ಯದ ಮಟ್ಟಿಗೆ ಯೋಜನೆ ಮುಂದಕ್ಕೆ ಹಾಕಲು ಒಳ್ಳೆ ನೆಪ ಸಿಕ್ಕಿದೆ. ಈಗಲೇ ಜನರ ವಿರೋಧ ಕಟ್ಟಿಕೊಂಡರೆ ಚುನಾವಣೆಗೆ ಕಷ್ಟವಾದೀತು. ಆದ್ದರಿಂದ ಚುನಾವಣೆ ಮುಕ್ತಾಯವರೆಗೆ ಈ ಪ್ರಸ್ತಾಪವನ್ನು ತಡೆಹಿಡಿಯಲು ಉನ್ನತ ಮಟ್ಟದಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ.
ಉಡುಪಿಯಲ್ಲಿ 3 ವರ್ಷ ಹಿಂದೆ ಸ್ಥಾಪನೆಯಾದ ಯುಪಿಸಿಎಲ್ ಲ್ಯಾಂಕೋ ಸ್ಥಾವರದ 3ನೇ ಹಂತ ವಿರುದ್ಧ ಈಗಾಗಲೇ ಹೋರಾಟ ನಡೆದಿದೆ. ಇದೇ ವೇಳೆ ನಿಡ್ಡೋಡಿಯಲ್ಲೂ ಪ್ರತಿಭಟನೆ ವ್ಯಕ್ತವಾಗಿದ್ದು, ಇದು ಉದ್ದೇಶಿತ ಸ್ಥಾವರ ಸ್ಥಾಪನೆಗೆ ಅಡ್ಡಿಯಾಗಿದೆ. ಹಾಗಾಗಿ ಜನಪ್ರತಿನಿಧಿಗಳನ್ನು ಎದುರು ಹಾಕಿಕೊಳ್ಳದೆ ಲೋಕಸಭಾ ಚುನಾವಣೆ ಮುಗಿಯುವ ವರೆಗೆ ಮೌನ ವಹಿಸಲು ಕೇಂದ್ರ ತೀರ್ಮಾನಿಸಿದೆ.
4 ಸಾವಿರ ಮೆ.ವ್ಯಾ.ಗೆ 4 ಸಾವಿರ ಎಕರೆ: ನಿಡ್ಡೋಡಿಯಲ್ಲಿ ಸ್ಥಾಪಿಸಲುದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರ 4 ಸಾವಿರ ಮೆಗಾವ್ಯಾಟ್ನದ್ದು. ಇದಕ್ಕೆ ಬೇಕಾದ ಭೂಮಿ 4 ಸಾವಿರ ಎಕರೆ. ನಿಡ್ಡೋಡಿಯ ಕೊಲತ್ತಾರು ಕೇಂದ್ರಿತವಾಗಿ ಬಡಗಮಿಜಾರು, ತೆಂಕಮಿಜಾರು, ಮುಚ್ಚೂರು, ನೀರುಡೆ, ಕಲ್ಲಮುಂಡ್ಕೂರು, ಪುತ್ತಿಗೆ, ಕಟೀಲು ಹಾಗೂ ಕಿನ್ನಿಗೋಳಿ ವಲಯ ಯೋಜನೆ ವ್ಯಾಪ್ತಿಗೆ ಸೇರ್ಪಡೆ ಭೀತಿಯಲ್ಲಿದೆ.
ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಗೆ(ಕೆಐಡಿಬಿಎ) ಭೂಸ್ವಾಧೀನ ಪ್ರಸ್ತಾಪ ಇದುವರೆಗೆ ಬಂದಿಲ್ಲ. ಸುವರ್ಣ ಕಾರಿಡಾರ್ಗೆ ಭೂಸ್ವಾಧೀನಕ್ಕೆ ತೀರ್ಮಾನ ಜನರ ವಿರೋಧ ಬಳಿಕ ಕೈಬಿಟ್ಟಿದ್ದಾಗಿ ಅಧಿಕಾರಿಗಳು ಹೇಳುತ್ತಾರೆ.
- ಆತ್ಮಭೂಷಣ್