ಪಶು ವೈದ್ಯಕೀಯ ವ್ಯಾಸಂಗಕ್ಕೆ ಆರ್ಥಿಕ ನೆರವು: ಅರ್ಜಿ ಆಹ್ವಾನ
ಮಂಗಳೂರು: ದ.ಕ. ಹಾಲು ಉತ್ಪಾದಕರ ಒಕ್ಕೂಟದ ಡೈರಿ ರೈತರ ಕಲ್ಯಾಣ ಟ್ರಸ್ಟಿನಿಂದ ಪಶು ವೈದ್ಯಕೀಯ ಹಾಗೂ ಕೃಷಿ ಸಂಬಂಧಿಸಿದ ವ್ಯಾಸಂಗಕ್ಕೆ ಆರ್ಥಿಕ ನೆರವಿನ ಯೋಜನೆ ನೀಡಲಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಜಿಲ್ಲೆಯ ಹಾಲು ಒಕ್ಕೂಟದಲ್ಲಿ ರೈತರ ಜಾನುವಾರುಗಳ ತಪಾಸಣೆಗೆ ಹಾಗೂ ಪಶು ವೈದ್ಯಕೀಯ ಚಟುವಟಿಕೆಗಳ ನಿರ್ವಹಣೆಗೆ ಪಶು ವೈದ್ಯಕೀಯರ ಕೊರತೆ ಕಂಡು ಬರುತ್ತಿದೆ. ಆದ್ದರಿಂದ ದ.ಕ. ಮತ್ತು ಉಡುಪಿ ಜಿಲ್ಲೆಯ ರೈತರ ಮಕ್ಕಳು ಪಶು ವೈದ್ಯಕೀಯ ಕೋರ್ಸ್ ಮಾಡಲು ಇಚ್ಛಿಸಿದ್ದಲ್ಲಿ 5 ವರ್ಷ ವ್ಯಾಸಂಗದ ವೆಚ್ಚ ರು. 3 ಲಕ್ಷ ಮೊತ್ತವನ್ನು ಟ್ರಸ್ಟ್ ವತಿಯಿಂದ ನೀಡಲಾಗುವುದು ಎಂದು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ್ ಹೆಗ್ಡೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಿಬಂಧನೆಗಳು: ವ್ಯಾಸಂಗದ ನಂತರ ಕನಿಷ್ಟ 5 ವರ್ಷ ಕಾಲ ಕಡ್ಡಾಯವಾಗಿ ಒಕ್ಕೂಟದ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುವ ಕುರಿತು ಟ್ರಸ್ಟ್ನೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ಒಪ್ಪಂದದ ಉಲ್ಲಂಘನೆಯಾದಲ್ಲಿ ಟ್ರಸ್ಟ್ ನೀಡಿದ ನೆರವಿನ ಪೂರ್ಣ ಮೊಬಲಗಿನೊಂದಿಗೆ ಟ್ರಸ್ಟ್ ನಿಗದಿಪಡಿಸಿದ ದಂಡ ಶುಲ್ಕ ಮರುಪಾವತಿ ಮಾಡಬೇಕು. ಪ್ರಸ್ತುತ ವರ್ಷ 5 ಮಂದಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ರೈತರ ಮಕ್ಕಳಿಗೆ ಮೊದಲ ಆದ್ಯತೆ.
ರಾಜ್ಯದ ಎಲ್ಲ ಒಕ್ಕೂಟದಲ್ಲಿಯೂ ಪಶುವೈದ್ಯಾಧಿಕಾರಿಗಳ ಕೊರತೆಯಿದೆ. ಒಟ್ಟು 750 ಪಶು ವೈದ್ಯಾಧಿಕಾರಿಗಳ ಕೊರತೆ ಇದೆ. ದ.ಕ. ಜಿಲ್ಲೆಯ ಒಕ್ಕೂಟಕ್ಕೆ 3-4 ಮಂದಿ ಪಶು ವೈದ್ಯಾಧಿಕಾರಿಗಳು ಬೇಕಾಗಿದ್ದು, ಪ್ರಸ್ತುತ 16 ಮಂದಿ ಗುತ್ತಿಗೆ ಆಧಾರದಲ್ಲಿ ಹೊರರಾಜ್ಯದಿಂದ ಆಗಮಿಸಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. ಪಶು ವೈದ್ಯಕೀಯ ವ್ಯಾಸಂಗಕ್ಕೆ ಮಾತ್ರವಲ್ಲದೆ ಹೈನುಗಾರಿಕೆಗೆ ಪೂರಕ ಶಿಕ್ಷಣವಾದ ಕೃಷಿ ವಿಜ್ಞಾನ, ಡೈರಿ ತಂತ್ರಜ್ಞಾನ ಮತ್ತು ತೋಟಗಾರಿಕೆ ವ್ಯಾಸಂಗಕ್ಕೂ ನಿರ್ದಿಷ್ಟ ಮೊತ್ತದಲ್ಲಿ ಆರ್ಥಿಕ ಸಹಾಯ ಒದಗಿಸಲಾಗುತ್ತದೆ ಎಂದರು.