ವೃದ್ಧೆ ಹೊರಟಿದ್ದು ಮಗಳ ಮನೆಗೆ ಸೇರಿದ್ದು ಕಾಡು
ಉಪ್ಪಿನಂಗಡಿ: ಇಳಿ ವಯಸ್ಸಿನ ಅರಳು ಮರಳು ಮನೋಭಾವಕ್ಕೆ ತುತ್ತಾದ ಅಜ್ಜಿಯೊಬ್ಬರು ತನ್ನ ಮಗಳ ಮನೆಗೆಂದು ಹೋದವರು ದಾರಿ ತಿಳಿಯದೆ, 2 ದಿನ ಕಾಡಿನಲ್ಲೇ ಕಳೆದ ಘಟನೆ ಶಿರಾಡಿಯಲ್ಲಿ ನಡೆದಿದೆ. 90ರ ವಯೋವೃದ್ಧೆ ತ್ರೇಸಿ ಶಿರಾಡಿ ಗ್ರಾಮದ ಶಿರ್ವತ್ತಡ್ಕ ನಿವಾಸಿ. ಕಿರಿಯ ಪುತ್ರ ಪತ್ರೋಸ್ ಎಂಬವರ ಆಶ್ರಯದಲ್ಲಿದ್ದ ಇವರು ಆ.17ರಂದು ತನ್ನ ಮಗಳನ್ನು ನೋಡಬೇಕೆಂದು ಬಯಸಿ ಹೊರಟಿದ್ದರು. ಮಗನ ಮನೆಯಿಂದ ಅನತಿ ದೂರದಲ್ಲಿದ್ದ ಮಗಳ ಮನೆಗೆ ಸಹಜವಾಗಿ ಹೋಗಿ ಬರುತ್ತಿದ್ದ ತಮ್ಮ ತಾಯಿ ಅಲ್ಲೇ ಇದ್ದಾರೆಂದು ಮಗ ತಿಳಿದಿದ್ದರೆ, ತ್ರೇಸಿ ಮಾತ್ರ ದಾರಿ ತಪ್ಪಿ ಕಾಡಿನೊಳಕ್ಕೆ ಹೋಗಿದ್ದಾರೆ. ಮರಳಿ ಬರಲು ದಾರಿ ತಿಳಿಯದೇ ಅಲ್ಲೇ 2 ದಿನ ಕಳೆಯಬೇಕಾಯಿತು. ಆ.18ರಂದು ವೃದ್ಧೆ ಕಾಣೆಯಾಗಿರುವುದು ಮನೆಯವರ ಗಮನ ಬಂದು ಹುಡುಕಾಟ ನಡೆಸಲಾಯಿತು. ಕೆರೆ- ಬಾವಿ ಜಾಲಾಡಿದರೂ ಪತ್ತೆಯಾಗಿರಲಿಲ್ಲ. ಬಳಿಕ ಕಾಡಿನೊಳಗೆ ಹುಡುಕಾಟ ಆರಂಭಿಸಿದಾಗ ಕಾಡಿನ ಮಧ್ಯೆ ಮರದ ಬುಡವೊಂದರಲ್ಲಿ ಕುಳಿತುಕೊಂಡಿರುವುದು ಪತ್ತೆಯಾಗಿದೆ. ಎರಡು ದಿನದಲ್ಲಿ ಆಹಾರವಿಲ್ಲದೆ ಕಾಡಿನಲ್ಲಿದ್ದರೂ ಆರೋಗ್ಯಪೂರ್ಣರಾಗಿರುವುದು ಮನೆ ಮಂದಿಗೆ ನೆಮ್ಮದಿ ತಂದಿದೆ.