ಶಿರಾಡಿ: ಮಗಳ ಮನೆಗೆ ಹೊರಟು ಕಾಡು ಸೇರಿದ ಅಜ್ಜಿ!
ಉಪ್ಪಿನಂಗಡಿ: ಇಳಿ ವಯಸ್ಸಿನ ಅರಳು ಮರಳು ಮನೋಭಾವಕ್ಕೆ ತುತ್ತಾದ ಅಜ್ಜಿಯೊಬ್ಬರು ತನ್ನ ಮಗಳ ಮನೆಗೆಂದು ಹೋದವರು ದಾರಿ ತಿಳಿಯದೆ 2 ದಿನ ಕಾಡಿನಲ್ಲೇ ರಾತ್ರಿ- ಹಗಲು ಕಳೆದ ಘಟನೆ ಶಿರಾಡಿಯಲ್ಲಿ ನಡೆದಿದೆ. ಆಕೆ 90ರ ಹರೆಯದ ವೃದ್ಧೆ. ಹೆಸರು ತ್ರೇಸಿಯ, ಶಿರಾಡಿ ಗ್ರಾಮದ ಶಿರ್ವತ್ತಡ್ಕ ನಿವಾಸಿ. ಕಿರಿಯ ಪುತ್ರ ಪತ್ರೋಸ್ ಎಂಬವರ ಆಶ್ರಯದಲ್ಲಿದ್ದ ಈಕೆ ಆ.17ರಂದು ತನ್ನ ಮಗಳನ್ನು ನೋಡಬೇಕೆಂದು ಬಯಸಿ ಹೊರಟಿದ್ದರು. ಮಗನ ಮನೆಯಿಂದ ಅನತಿ ದೂರದಲ್ಲಿದ್ದ ಮಗಳ ಮನೆಗೆ ಸಹಜವಾಗಿ ಹೋಗಿ ಬರುತ್ತಿದ್ದ ಅಜ್ಜಿ ಅಲ್ಲೇ ಇದ್ದಾರೆಂದು ಮಗ ತಿಳಿದಿದ್ದರೆ, ಅಜ್ಜಿ ಮಾತ್ರ ಮಗಳ ಮನೆಗೆಂದು ಹೋದವರು ಕಾಡಿನೊಳಕ್ಕೆ ನುಗ್ಗಿ ದಾರಿ ಕಾಣದೆ ಅಲ್ಲೇ 2 ದಿನ ಕಳೆಯಬೇಕಾಯಿತು. ಆ.18ರಂದು ಅಜ್ಜಿ ಕಾಣೆಯಾಗಿರುವುದು ಮನೆಯವರ ಗಮನ ಬಂದು ಹುಡುಕಾಟ ನಡೆಸಿದರಾದರೂ, ಕೆರೆ- ಬಾವಿ ಜಾಲಾಡಿದರೂ ಅಜ್ಜಿ ಪತ್ತೆಯಾಗಿರಲಿಲ್ಲ. ಬಳಿಕ ಕಾಡಿನೊಳಗೆ ಹುಡುಕಾಟ ಆರಂಭಿಸಿದಾಗ ಕಾಡಿನ ಮಧ್ಯೆ ಮರದ ಬುಡವೊಂದರಲ್ಲಿ ಅಜ್ಜಿ ಕುಳಿತುಕೊಂಡಿದ್ದರು. ಎರಡು ದಿನದಲ್ಲಿ ಅನ್ನಾಹಾರವಿಲ್ಲದೆ ಕಾಡಿನಲ್ಲಿದ್ದರೂ ಆರೋಗ್ಯಪೂರ್ಣರಾಗಿ ಪತ್ತೆಯಾಗಿರುವುದು ನೆಮ್ಮದಿ ತಂದಿದೆ.