ಪಾಳು ಬಿದ್ದಿದೆ ರಾಜ್ಯದ 2ನೇ ಅನಿಲ ಚಿತಾಗಾರ
ಮಂಗಳೂರು: ಮನುಷ್ಯನ ದೇಹ ಬೂದಿ ಮಾಡೋ ಕಾರ್ಯಕ್ಕೂ ಇಲ್ಲಿ ನೂರೆಂಟು ವಿಘ್ನ. ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಗಳ ನಿರ್ಲಕ್ಷ್ಯಕ್ಕೆ ಲಕ್ಷಾಂತರ ಮೌಲ್ಯದ ಮಂಗಳೂರಿನ ಬೋಳಾರದಲ್ಲಿರುವ ಅನಿಲ ಚಿತಾಗಾರ 1 ವರ್ಷದಿಂದ ಹಾಳಾಗಿದ್ದು ತುಕ್ಕು ಹಿಡಿದಿದೆ.
2006 ರಲ್ಲಿ ನಿರ್ಮಲ ನಗರ ಯೋಜನೆಯ 12ನೇ ಹಣಕಾಸು ಆಯೋಗ ನೆರವಲ್ಲಿ ವಿದ್ಯುತ್ ಚಿತಾಗಾರ ಮಾರ್ಪಡಿಸಿ ಸುಮಾರು ರು. 15 ಲಕ್ಷ ವೆಚ್ಚದಲ್ಲಿ ಅನಿಲ ಚಿತಾಗಾರ ನಿರ್ಮಾಣಗೊಳಿಸಲಾಗಿತ್ತು. ಸರ್ಕಾರ ಬಡವರಿಗೆ ಉಪಯೋಗವಾಗಲಿ ಎಂದು ಸೇವಾ ಮನೋಭಾವದಿಂದ ಅನಿಲ ಬರ್ನರ್ ಬಳಸಿ ದೇಹವನ್ನು ದಹನ ಮಾಡಲು ವ್ಯವಸ್ಥೆ ಕಲ್ಪಿಸಿದೆ.
ಇದು ರಾಜ್ಯದಲ್ಲಿರುವ ಎರಡನೇ ಅನಿಲ ಚಿತಾಗಾರ. ಬೆಂಗಳೂರಿನಲ್ಲಿ ಬಿಟ್ಟರೆ ಮಂಗಳೂರಿನಲ್ಲಿ ಮಾತ್ರ ಈ ಸೌಲಭ್ಯವಿದೆ. ಇದರಿಂದ ಸಾಕಷ್ಟು ಕುಟುಂಬಗಳು ಪ್ರಯೋಜನ ಪಡೆದಿವೆ. ಕಟ್ಟಿಗೆಗೆ ದರ ಏರಿರುವ ಪರಿಣಾಮ ಬಡಕುಟುಂಬಗಳಿಗೆ ಅನಿಲ ಚಿತಾಗಾರ ಉಪಯೋಗವಾಗಿತ್ತು.
ಅನಿಲ ಚಿತಗಾರದ ನಾಲ್ಕು ಬರ್ನರ್ಗಳು ಹಾಳಾದ ಪರಿಣಾಮ ಕಳೆದ 1 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಚಿತಾಗಾರಕ್ಕೆ ಬಳಸುವ ಕಬ್ಬಿಣದ ಬಾಗಿಲು, ಶವವಿಡುವ ಟ್ರೇಗಳು ತುಕ್ಕು ಹಿಡಿಯುತ್ತಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಇವುಗಳನ್ನು ಸುರಕ್ಷಿತವಾಗಿ ಇಡಲು ಪ್ರಯತ್ನಿಸುತ್ತಿದ್ದಾರೆ.
ಈಗ ಕಟ್ಟಿಗೆಯಲ್ಲಿ ಸುಡೋದು: ತಿಂಗಳಿಗೆ 15 ರಿಂದ 20 ದೇಹಗಳು ದಹನ ಮಾಡಲು ಇಲ್ಲಿಗೆ ಬರುತ್ತಿದ್ದು, ಪಾಲಿಕೆ ಇದಕ್ಕಾಗಿ ಕೇವಲ ರು. 100 ಮೊತ್ತ ನಿಗದಿಪಡಿಸಿತ್ತು. ಆದರೆ ಈಗ ಕಟ್ಟಿಗೆಯಿಂದ ಶವ ಸುಡುತ್ತಿದ್ದು, ಸುಮಾರು ರು. 2,700 ಮೊತ್ತ ಖರ್ಚು ಮಾಡಬೇಕಾಗಿದೆ.
ಅನಿಲ ಚಿತಾಗಾರದಲ್ಲಿ ಶವ ಸುಡಲು ಹೆಚ್ಚೆಂದರೆ ಮುಕ್ಕಾಲರಿಂದ ಒಂದು ಗಂಟೆ ಸಮಯ ತಗುಲುತ್ತಿದ್ದರೆ, ಕಟ್ಟಿಗೆಯಲ್ಲಿ 2-3 ಗಂಟೆ ಅವಧಿಯಾಗುತ್ತದೆ. ಅಲ್ಲದೆ ಕಟ್ಟಿಗೆಯಿಂದ ಸುಡುವ ಶವಾಗಾರ ತೆರೆದ ಛಾವಣಿಯಲ್ಲಿದ್ದು, ಮಳೆಗಾಲದಲ್ಲಿ ನಾಗರಿಕರು ಪಾಡುಪಡುವಂತಾಗಿದೆ.
ವಿದ್ಯುತ್ ಚಿತಾಗಾರದಿಂದ ಹೆಚ್ಚು ವಿದ್ಯುತ್ ಖರ್ಚಾಗುತ್ತಿದ್ದನ್ನು ಮನಗಂಡ ಪಾಲಿಕೆ ಅನಿಲ ಚಿತಾಗಾರ ನಿರ್ಮಿಸಲು ತೀರ್ಮಾನಿಸಿತ್ತು. ಅನಿಲ ಚಿತಾಗಾರದಲ್ಲಿ ಒಟ್ಟು 6 ಸಿಲಿಂಡರ್ಗಳಿದ್ದು, ಕೆಲವೊಂದು ಬಾರಿ 3 ಸಿಲಿಂಡರ್ಗಳು ಖಾಲಿಯಾಗುತ್ತದೆ.
ಅಧಿಕಾರಿಗಳ ಬೇಜಾಬ್ದಾರಿಯಿಂದ ಲಕ್ಷಾಂತರ ಮೌಲ್ಯದ ಅನಿಲ ಚಿತಾಗಾರ ಪಾಳು ಬೀಳುತ್ತಿದೆ. ಮತ್ತೆ ಅಧಿಕಾರಿಗಳು ಇದನ್ನು ಕೆಡವಿ ವಿದ್ಯುತ್ ಶವಾಗಾರ ನಿರ್ಮಿಸಲು ತೀರ್ಮಾನಿಸಿವೆ. ಒಟ್ಟಿನಲ್ಲಿ ವಿದ್ಯುತ್ ಅಭಾವ ಉಂಟಾಗುತ್ತಿರುವ ಇಂಥ ಸಮಯದಲ್ಲಿ ಮತ್ತೆ ವಿದ್ಯುತ್ ಶವಾಗಾರ ನಿರ್ಮಾಣಗೊಂಡರೆ ಇದರ ಪರಿಣಾಮ ಎದುರಿಸುವವರು ಸಾರ್ವಜನಿಕರು.
ದುರಸ್ತಿಗೆ ರು. 14.50 ಲಕ್ಷ ವೆಚ್ಚ
ಅನಿಲ ಚಿತಾಗಾರವನ್ನು ಮತ್ತೆ ಸರಿಪಡಿಸಲು ಒಟ್ಟು ರು. 14.50 ಲಕ್ಷ ವೆಚ್ಚ ತಗಲುತ್ತದೆ ಎಂದು ಮೈಸೂರು ಮೂಲದ ಎಂಜಿನಿಯರ್ ತಿಳಿಸಿದ್ದಾರೆ. ಆದ್ದರಿಂದ ಮತ್ತೆ ವಿದ್ಯುತ್ ಚಿತಾಗಾರ ನಿರ್ಮಿಸಲು ಬೇಕಾಗುವ ವೆಚ್ಚವನ್ನು ಸಮದೂಗಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಸಿಲಿಂಡರ್ ಸಿಗುವುದು ಕಷ್ಟವಾಗಿದೆ. ಚಿತಾಗಾರದ ಪುನರ್ ನಿರ್ಮಾಣದ ಜೊತೆಗೆ ಕಟ್ಟಡದ ದುರಸ್ತಿ ಮಾಡಬೇಕಾಗಿದ್ದು, ಒಟ್ಟು ತಗುಲುವ ವೆಚ್ಚವನ್ನು ಪರಿಗಣಿಸಿ 2 ತಿಂಗಳೊಳಗೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸಿವಿಲ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
-ವಜ್ರಾಕ್ಷಿ ಬಂಟ್ವಾಳ