ರಾಜ್ಯಕ್ಕೆ ಮೇಲ್ಪಂಕ್ತಿ ಮೂಡುಬಿದಿರೆ ಪುರಸಭೆ
ಮಂಗಳೂರು: 31 ಸಾವಿರ ಜನಸಂಖ್ಯೆ, 9 ಸಾವಿರ ಕುಟುಂಬ, 2,400 ವಾಣಿಜ್ಯ ಸಂಕೀರ್ಣ... ತರಕಾರಿ ಮಾರುಕಟ್ಟೆ, ಬಸ್ ನಿಲ್ದಾಣ ಹೀಗೆ ಪ್ರತಿನಿತ್ಯ ಜನ ಜಂಗುಳಿ. ಇಷ್ಟಾದರೂ ಇಲ್ಲಿ ಹುಡುಕಿದರೂ ಕಸ ರಾಶಿ ಕಾಣಸಿಗದು. ಕಸ ಎಸೆದಲ್ಲಿ ದಂಡ, ಪ್ರತಿ ಮನೆಗಳಿಂದ ನಿತ್ಯ ಕಸವಿಲೇವಾರಿ ಆಗುತ್ತಿದೆ.
ರಾಜ್ಯಕ್ಕೆ ಮಾದರಿಯಾಗಿರುವ ದ.ಕ. ಜಿಲ್ಲೆಯ ಮೂಡುಬಿದಿರೆ ಪುರಸಭೆಯಲ್ಲಿ ಶೇ.ನೂರರಷ್ಟು ಘನತ್ಯಾಜ್ಯ ವಿಲೇವಾರಿ ಶುರುವಾಗಿ ಈಗ ಒಂದು ವರ್ಷ ಕಳೆಯಿತು.
ಈಚೆಗೆ ಇಲ್ಲಿಗೆ ಆ.12ರಂದು ಭೇಟಿ ನೀಡಿದ ಪೌರಾಡಳಿತ ಸಚಿವಾಲಯದ ಸೀಮ್ಯಾಕ್ಸ್ ಪರಿಶೀಲನಾ ತಂಡ ಶೇ.ನೂರರಷ್ಟು ಘನತ್ಯಾಜ್ಯ ವಿಲೇವಾರಿ ಆಗುತ್ತಿರುವ ಏಕೈಕ ಪುರಸಭೆ ಎಂದು ಹೊಗಳಿದೆ.
ಸಂಪೂರ್ಣ ಸ್ವಚ್ಛತೆಯ ನೈಜತೆ ತಿಳಿಯಲು ಶುಕ್ರವಾರ ತೆರಳಿದ ಮಾಧ್ಯಮ ತಂಡ ಸಾಕ್ಷಾತ್ ಪರಿಸ್ಥಿತಿ ಕಂಡು ಅಚ್ಚರಿಗೊಂಡಿತು.
ಮುಖ್ಯಾಧಿಕಾರಿಯೇ ಪಾಠ: 2 ವರ್ಷ ಹಿಂದೆ ಇಲ್ಲಿಗೆ ಮುಖ್ಯಾಧಿಕಾರಿಯಾಗಿ ಆಗಮಿಸಿದ ರಾಯಪ್ಪ ಖಡಕ್ ಅಧಿಕಾರಿಯಾಗಿ ಈಗ ಜನರ ಮನಸ್ಸು ಗೆದ್ದಿದ್ದಾರೆ. ನಿತ್ಯ ಬೆಳಗ್ಗೆ 7.30ಕ್ಕೆ ಮೂಡುಬಿದಿರೆ ಪೇಟೆಗೆ ಆಗಮಿಸುತ್ತಾರೆ. ಅಷ್ಟೊತ್ತಿಗೆ ಕಸ ವಿಲೇವಾರಿ ವಾಹನ ಆಗಮಿಸುತ್ತದೆ. ಪ್ರತಿ ಮನೆಯಿಂದ ಕಸ ಸಂಗ್ರಹವೂ ಆಗಲೇ ಶುರು. ಪೌರ ಕಾರ್ಮಿಕರಿಗೆ ಕಸ ತೆಗೆಯಲು ಸೂಚಿಸುವ ಜತೆ ತಾನೇ ಸ್ವತಃ ಕೈಗೆ ಗ್ಲೌಸ್ ಹಾಕಿಕೊಂಡು ಕಸ ಎತ್ತುತ್ತಾರೆ.
ಕಸವಿಲೇವಾರಿಗೆ 4 ವಾಹನ, 2 ಆಟೋ, 2 ಟ್ರ್ಯಾಕ್ಟರ್, 11 ಮಂದಿ ಕಾರ್ಮಿಕರಿದ್ದಾರೆ. ಒಂದೊಂದು ಗಲ್ಲಿಗೆ ಒಂದೊಂದು ವಾಹನ. ವಾಹನ ಗಲ್ಲಿ ರಸ್ತೆಯನ್ನು ಪ್ರವೇಶಿಸುತ್ತಲೇ ಕಸ ವಿಲೇವಾರಿ, ವಿಂಗಡಣೆಯ ಅಗತ್ಯವನ್ನು ಧ್ವನಿವರ್ಧಕದಲ್ಲಿ ಬಿತ್ತರಿಸುತ್ತದೆ. ಮನೆ ಮಂದಿ ಬಂದು ವಾಹನಕ್ಕೆ ಕಸ ಪ್ರತ್ಯೇಕಿಸಿ ಕೊಡುತ್ತಾರೆ. ಪೇಟೆಯಲ್ಲೂ ಇದೇ ಕ್ರಮ. ಕಸ ನೀಡದಿದ್ದರೆ ಕಾರ್ಮಿಕರು ನೇರವಾಗಿ ಮುಖ್ಯಾಧಿಕಾರಿಗೆ ಫೋನಾಯಿಸುತ್ತಾರೆ.
ಕೂಡಲೇ ಸ್ಥಳಕ್ಕೆ ಹಾಜರಾಗುವ ಮುಖ್ಯಾಧಿಕಾರಿ ರಾಯಪ್ಪ ತಿಳುವಳಿಕೆ ಮೂಡಿಸುತ್ತಾರೆ, ಬಗ್ಗದೇ ಇದ್ದರೆ ದಂಡ ವಿಧಿಸುತ್ತಾರೆ. ಹಾಗಾಗಿ ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಈಗ ಎಲ್ಲರಲ್ಲೂ ಕಸದ ಬಗ್ಗೆ ಜಾಗೃತಿ ಮೂಡಿರುವುದು ಕಂಡುಬಂದಿದೆ.
ತ್ಯಾಜ್ಯ ಸೋನ್ಸ್ ಫಾರ್ಮ್‌ಗೆ: ಪುರಸಭಾ ವ್ಯಾಪ್ತಿಯಲ್ಲಿ ದಿನಂಪ್ರತಿ ಸಂಗ್ರಹವಾಗುವ ಕಸ 13 ರಿಂದ 15 ಟನ್. ಇದರಲ್ಲಿ ಒಣ ಕಸವನ್ನು ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ ಶುಲ್ಕ ನೀಡಿ ಎರಡು ದಿನಕ್ಕೊಮ್ಮೆ ಸಾಗಿಸುತ್ತಾರೆ. ಉಳಿದ ತ್ಯಾಜ್ಯವನ್ನು ಪ್ರತ್ಯೇಕವಾಗಿ ಬೇರ್ಪಡಿಸಿ ಮೂಡುಬಿದಿರೆ ಸಮೀಪದ ಸೋನ್ಸ್ ಫಾರ್ಮ್‌ಗೆ ಒಯ್ಯುತ್ತಾರೆ. ಎರಡು ಮಹಿಳಾ ಸ್ವಸಹಾಯ ಸಂಘ ಸದಸ್ಯರು ಕಸವಿಲೇವಾರಿಯಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲಿ ತ್ಯಾಜ್ಯವನ್ನು ಗೊಬ್ಬರವಾಗಿ ಮಾರ್ಪಡಿಸಿ ತೋಟಕ್ಕೆ ಬಳಸುತ್ತಾರೆ. ಮಾಂಸವನ್ನು ಜ್ಯೋತಿ ನಗರದಲ್ಲಿ ವಿಲೇವಾರಿ ಮಾಡುತ್ತಾರೆ.
ಲ್ಯಾಂಡ್‌ಫಿಲ್ ಸೈಟ್ ಸಿದ್ಧ: ಪುರಸಭೆ ವತಿಯಿಂದ ಕಲಿಂಜೆಯಲ್ಲಿ ರು. 1.50 ಕೋಟಿ ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಲ್ಯಾಂಡ್‌ಫಿಲ್ ಸೈಟ್ ನಿರ್ಮಾಣವಾಗುತ್ತಿದ್ದು, ಕಸ ವರ್ಗೀಕರಣಕ್ಕೆ ಪ್ರತ್ಯೇಕ ಯಂತ್ರ ಆಗಮಿಸಲಿದೆ. ಅಕ್ಟೋಬರ್‌ಗೆ ಈ ಘಟಕ ಸಿದ್ಧಗೊಳ್ಳಲಿದೆ. ಕಳೆದ ಏಪ್ರೀಲ್‌ನಿಂದ ಪುರಸಭಾ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಶುರುವಾಗಿದ್ದು, ಈವರೆಗೆ ಸಮರ್ಪಕವಾಗಿ ನಡೆಯುತ್ತಿದೆ. ಜನತೆ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ ಎನ್ನುತ್ತಾರೆ ಮುಖ್ಯಾಧಿಕಾರಿ ರಾಯಪ್ಪ.