ಉಪವಾಸ ಸತ್ಯಾಗ್ರಹ 7ನೇ ದಿನಕ್ಕೆ; ವಿವಿಧ ಕಡೆಗಳ ಕಾರ್ಮಿಕರ ಬೆಂಬಲ
ಮಂಗಳೂರು: ಇಎಸ್ಐ ಕಾರ್ಮಿಕ ಆಸ್ಪತ್ರೆಯಲ್ಲಿ ಕೇಂದ್ರ ಸರ್ಕಾರದ ಸ್ವಾಧೀನಕ್ಕೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಇಎಸ್ಐ ಆಸ್ಪತ್ರೆ ಎದುರು ಅಖಿಲ ಭಾರತ ಕಾರ್ಮಿಕ ಸಂಘ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಭಾನುವಾರ 7ನೇ ದಿನಕ್ಕೆ ಕಾಲಿರಿಸಿದೆ. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುದತ್ ಜೈನ್ ಮತ್ತಿತರರು ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ಸತ್ಯಾಗ್ರಹ ಬೆಂಬಲಿಸಿ ಗಂಜಿಮಠ, ಅತ್ತಾವರ, ಸುರತ್ಕಲ್, ಬಿ.ಸಿ.ರೋಡ್ಗಳಿಂದ ಕಾರ್ಮಿಕರು ಪಾದಯಾತ್ರೆಯಲ್ಲಿ ಭಾನುವಾರ ಆಗಮಿಸಿ ಸತ್ಯಾಗ್ರಹ ಸ್ಥಳದಲ್ಲಿ ತಾವೂ ಉಪವಾಸ ಕೂತಿದ್ದಾರೆ. ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ನಡೆಸುತ್ತಿರುವ ಸುದತ್ ಜೈನ್ರ ಆರೋಗ್ಯ ಹದಗೆಡುತ್ತಿದ್ದು, ಗ್ಲುಕೋಸ್ ಸೇವಿಸಲು ನಿರಾಕರಿಸುತ್ತಿದ್ದಾರೆ. ದೇಹದಲ್ಲಿ ಶುಗರ್ ಕಡಿಮೆಯಾಗಿದ್ದು, ರಕ್ತದೊತ್ತಡ ಸಹಜ ಸ್ಥಿತಿಯಲ್ಲಿದೆ. ಶುಗರ್ ಇನ್ನೂ ವ್ಯತ್ಯಾಸವಾದರೆ ಆರೋಗ್ಯಕ್ಕೆ ಹಾನಿ ಇದೆ ಎಂದು ಆರೋಗ್ಯ ತಪಾಸಣೆ ನಡೆಸಿದ ಡಾ.ಅಶೋಕ್ ಕುಮಾರ್ ತಿಳಿಸಿದ್ದಾರೆ. ಇದುವರೆಗೆ ಸ್ಥಳಕ್ಕೆ ಯಾವುದೇ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಿ ಆಗಮಿಸಿಲ್ಲ.