ಮೊದಲ ಪತ್ನಿ ಆಕ್ಷೇಪ: ಮರುಮದುವೆ ರದ್ದು
ಮಂಗಳೂರು: ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಮರು ಮದುವೆಗೆ ಯತ್ನಿಸಿದ ಸಂಬಂಧ ಮದುವೆ ನಡೆಯಬೇಕಿದ್ದ ಸ್ಥಳಕ್ಕೆ ಆಗಮಿಸಿದ ಮೊದಲ ಪತ್ನಿ ಕಡೆಯವರು ತಗಾದೆ ನಡೆಸಿ 2ನೇ ಮದುವೆ ರದ್ದಾದ ಘಟನೆ ಬಜ್ಪೆಯಲ್ಲಿ ಭಾನುವಾರ ಸಂಭವಿಸಿದೆ.
ಅಬ್ದುಲ್ ಸಮದ್ ಎಂಬಾತ ಫಾತಿಮಾತ್ ನೇಹಾಳನ್ನು ವಿವಾಹವಾಗಿದ್ದ. ಕೌಟುಂಬಿಕ ಹಿನ್ನಲೆಯಲ್ಲಿ ಪತಿ ಮತ್ತು ಪತ್ನಿ ಇಬ್ಬರಲ್ಲೂ ವಿರಹ ಮೂಡಿತ್ತು. ಆದರೆ ಸಮದ್ ಮೂರು ಸಲ ಪತ್ನಿಗೆ ತಲಾಖ್ ಹೇಳದೆ, ಕಾನೂನು ಪ್ರಕಾರ ವಿಚ್ಛೇದನ ಪಡೆಯದೆ ಮರು ಮದುವೆಗೆ ತೀರ್ಮಾನಿಸಿದ್ದ. ಅದರಂತೆ ಬಜ್ಪೆ ಜುಮಾ ಮಸೀದಿಯಲ್ಲಿ ಭಾನುವಾರ ವಿವಾಹ ನಡೆಯಬೇಕಿತ್ತು. ಇನ್ನೊಬ್ಬಳ ಜತೆ ವಿವಾಹಕ್ಕೆ ಸಮದ್‌ನ ಮನೆಯವರು ಸಿದ್ಧತೆ ನಡೆಸಿದ್ದರು.
ವಿವಾಹ ನೆರವೇರುವ ಹೊತ್ತಿಗೆ ಫಾತಿಮಾತ್ ನೇಹಾ ಕುಟುಂಬಿಕರು ಆಗಮಿಸಿ 2ನೇ ವಿವಾಹಕ್ಕೆ ಆಕ್ಷೇಪ ವ್ಯ.ಕ್ತಪಡಿಸಿದ್ದರು. ಮೂರು ಕಡೆಯ ಕುಟುಂಬಸ್ಥರ ಮಧ್ಯೆ ವಾಗ್ವಾದ, ಮಾತಿನ ಚಕಮಿಕಿ ನಡೆದಿದ್ದು, ಸಮದ್ ಮದುವೆಯಾದ ವಿಚಾರ ಇನ್ನೊಂದು ಯುವತಿ ಮನೆಯವರಿಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಇದರಿಂದ ವಿವಾಹ ಸ್ಥಳ ಗಲಿಬಿಲಿಗೊಂಡಿತು. ಸ್ಥಳದಲ್ಲಿ ಉದ್ನಿಗ್ನ ಪರಿಸ್ಥಿತಿ ತೆಲೆದೋರಿತ್ತು. ಅಷ್ಟರಲ್ಲಿ ಮೊದಲ ಪತ್ನಿ ಕಡೆಯವರು ಬಜ್ಪೆ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿದರು. ಪ್ರಕರಣದ ವಿವರ ಪಡೆದ ಪೊಲೀಸರು ಪಾಂಡೇಶ್ವರ ಮಹಿಳಾ ಠಾಣೆಗೆ ದೂರು ವರ್ಗಾಯಿಸಿದ್ದಾರೆ. ಇದೇ ವೇಳೆ ಪ್ರಕರಣವನ್ನು ಮಾತುಕತೆಯಲ್ಲಿ ಇತ್ಯರ್ಥಗೊಳಿಸಬೇಕು ಎಂದು ಮೂರು ಕಡೆಯವರು ಮಾತುಕತೆ ನಡೆಸಿದರೂ ಅದು ಫಲಪ್ರದವಾಗದೆ ಮರು ಮದುವೆ ರದ್ದುಗೊಂಡಿತು. ಈ ಬಗ್ಗೆ ಮೊದಲ ಪತ್ನಿ ನೇಹಾ ಮಹಿಳಾ ಪೊಲೀಸರಿಗೆ ದೂರು ನೀಡಿದ್ದಾರೆ.