ವಿವಿ ಮಟ್ಟದ ಗುಡ್ಡಗಾಡು ಓಟ ಸ್ಪರ್ಧೆ: ಆಳ್ವಾಸ್ ಕಾಲೇಜು ತಂಡಕ್ಕೆ ಸಮಗ್ರ ಪ್ರಶಸ್ತಿ
ಮೂಲ್ಕಿ: ಐಕಳ ಪೊಂಪೈ ಕಾಲೇಜಿನಲ್ಲಿ ಜರಗಿದ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಗುಡ್ಡಗಾಡು ಓಟದ ಸ್ಫರ್ಧೆಯಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ತಂಡ ಪ್ರಥಮ ಸ್ಥಾನವನ್ನು ಪಡೆದು ಪುರುಷರ ವಿಭಾಗದ ಕುರುಂಜಿ ವಿಶ್ವನಾಥ ಗೌಡ ಸ್ಮಾರಕ ರೋಲಿಂಗ್ ಟ್ರೋಫಿ ಹಾಗೂ ಮಹಿಳೆಯರ ವಿಭಾಗದ ಕೈಕುರೆ ರಾಮಣ್ಣ ಗೌಡ ಸ್ಮಾರಕ ರೋಲಿಂಗ್ ಟ್ರೋಫಿ ಸೇರಿದಂತೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಪುರುಷರ ವಿಭಾಗದಲ್ಲಿ ಕೆ.ಎಸ್.ಎಸ್. ಕಾಲೇಜು ಸುಬ್ರಹ್ಮಣ್ಯ ದ್ವಿತೀಯ ಹಾಗೂ ಎಸ್.ಡಿ.ಎಂ ಉಜಿರೆ ಕಾಲೇಜು ತ್ರತೀಯ ಸ್ಥಾನವನ್ನು ಮಹಿಳೆಯರ ವಿಭಾಗದಲ್ಲಿ ಡಾ.ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ದ್ವಿತೀಯ ಹಾಗೂ ಕೆ.ಎಸ್.ಎಸ್. ಕಾಲೇಜು ಸುಬ್ರಹ್ಮಣ್ಯ ತಂಡ ತೃತೀಯ ಸ್ಥಾನವನ್ನು ಪಡೆದಿದ್ದು ಪುರುಷರ ವೈಯಕ್ತಿಕ ವಿಭಾಗದಲ್ಲಿ ಎಸ್.ಡಿ.ಎಂ. ಉಜಿರೆ ಕಾಲೇಜಿನ ಕೃಷ್ಣಪ್ಪ ಪ್ರಥಮ, ಮೂಡಬಿದಿರೆಯ ಆಳ್ವಾಸ್ನ ಶಿವಾನಂದ ಭಾಸ್ಕರ ನಾಯಕ್ ದ್ವಿತೀಯ, ಹರೀಶ್ ಜೆ. ತೃತೀಯ, ಮಹಿಳೆಯರ ವಿಭಾಗದಲ್ಲಿ ಮೂಡಬಿದಿರೆಯ ಆಳ್ವಾಸ್ನ ಸುಪ್ರೀತಾ ಆರ್. ಪ್ರಥಮ, ಅರ್ಚನ ಕೆ.ಎಂ. ದ್ವಿತೀಯ ಹಾಗೂ ಸುಜಾತ ಎ.ಎಸ್. ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ದ.ಕ., ಉಡುಪಿ, ಕೊಡಗು ಜಿಲ್ಲೆ ಸೇರಿದಂತೆ ಮಂಗಳೂರು ವಿವಿ ವ್ಯಾಪ್ತಿಯ 30 ಕಾಲೇಜುಗಳಿಂದ 176 ಪುರುಷರು ಹಾಗೂ 78 ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಸ್ಪರ್ಧೆಯನ್ನು ಪೊಂಪೈ ಕಾಲೇಜಿನ ಹಿರಿಯ ಹಳೆ ವಿದ್ಯಾಥಿಗಳಾದ ಜೊಯಿಸನ್ ಪ್ರಶಾಂತ್ ಅಬೆವೋ ಹಾಗೂ ರೇಣುಕಾ ಆಚಾರ್ಯ ಉದ್ಘಾಟಿಸಿದ್ದು ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಕಾಲೇಜಿನ ಹಿರಿಯ ಹಳೆ ವಿದ್ಯಾರ್ಥಿ ಐವನ್ ಸ್ಕಿತ್ ಬಹುಮಾನ ವಿತರಿಸಿದರು.
ಕಾಲೇಜಿನ ಸಂಚಾಲಕ ವಂದನೀಯ ಪೌಲ್ ಪಿಂಟೋ, ಪ್ರಾಚಾರ್ಯ ಡಾ.ಜೋನ್ ಕ್ಲಾರೆನ್ ಮಿರಾಂದಾ, ದೈಹಿಕ ಶಿಕ್ಷಣ ನಿರ್ದೇಶಕ ಜೇಮ್ಸ್ ಒಲಿವರ್ ಮತ್ತಿತರರು ಉಪಸ್ಥಿತರಿದ್ದರು.