ರೈಲ್ವೆ ಯೋಜನೆ ತ್ವರಿತ ಜಾರಿಗೆ ಸಚಿವ ಖರ್ಗೆಗೆ ನಳಿನ್ ಮನವಿ
ಮಂಗಳೂರು: ನೈಋತ್ಯ ರೇಲ್ವೆ ಮತ್ತು ಕೊಂಕಣ ರೇಲ್ವೆ ಸೇರಿಸಿ ಮಂಗಳೂರು ವಿಭಾಗ ರಚನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಂಸದ ನಳಿನ್ ಕುಮಾರ್ ಕಟೀಲ್ ಗುರುವಾರ ದೆಹಲಿಯಲ್ಲಿ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಗೆ ಮನವಿ ಸಲ್ಲಿಸಿದರು.
ಹಾಸನ-ಮಂಗಳೂರು ರೇಲ್ವೆ ಅಭಿವೃದ್ಧಿ ನಿಗಮ(ಎಚ್‌ಎಂಆರ್‌ಡಿಸಿ)ಒಪ್ಪಂದ ಪ್ರಕಾರ ಈ ಮಾರ್ಗದಲ್ಲಿ ಹಾಲಿ 3 ರೈಲಿಗಿಂತ ಹೆಚ್ಚಿನ ರೈಲು ಸಂಚಾರಕ್ಕೆ ಅವಕಾಶವಿಲ್ಲ. ಆದ್ದರಿಂದ ಈ ಒಪ್ಪಂದಕ್ಕೆ ತಿದ್ದುಪಡಿ ತರಬೇಕು. ಬೆಂಗಳೂರು-ಮಂಗಳೂರು ವಯಾ ಅರಸೀಕೆರೆ ಮಾರ್ಗವಾಗಿ 21 ಕೋಚ್‌ಗಳ ಹೊಸ ರೈಲು ಪ್ರಾರಂಭಿಸಬೇಕು. ಬಜೆಟ್‌ನಲ್ಲಿ ಘೋಷಿಸಿದ ಯಶವಂತಪುರ-ಮಂಗಳೂರು ಹೊಸ ರೈಲು ಸಂಚಾರವನ್ನು ವಯಾ ಸೇಲಂ ಬದಲು ಅರಸೀಕೆರೆ ಮಾರ್ಗವಾಗಿ ಪ್ರಾರಂಭಿಸಬೇಕು. ಯಶವಂತಪುರ-ಕಾರವಾರ ನಿತ್ಯ ರೈಲು ಸಂಚಾರ, ಮಂಗಳೂರು-ಪುತ್ತೂರು-ಸುಬ್ರಹ್ಮಣ್ಯ ಮಾರ್ಗದಲ್ಲಿ ಡೆಮು ರೈಲು ಶುರುವಾಗಬೇಕು, ಪ್ರತಿನಿತ್ಯ ಕಬಕ ಪುತ್ತೂರು ಹಾಗೂ ಚೆರ್ವತ್ತೂರು ರೈಲು ಬೆಳಗ್ಗೆ 9ಕ್ಕೆ ಮಂಗಳೂರು ತಲುಪುವಂತಾಗಬೇಕು. ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ 4 ಮತ್ತು 5ನೇ ಫ್ಲಾಟ್‌ಫಾರಂ ರಚಿಸಬೇಕು ಇತ್ಯಾದಿ ಬೇಡಿಕೆಯನ್ನು ಸಚಿವರಿಗೆ ಸಲ್ಲಿಸಿದರು. ಈ ಕುರಿತು ರೇಲ್ವೆ ಸಲಹಾ ಸಮಿತಿ ಸದಸ್ಯ ಸುದರ್ಶನ ಪುತ್ತೂರು ಈಗಾಗಲೇ ರೇಲ್ವೆ ಸಚಿವರಿಗೆ, ಸಂಸದರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ನಿಡ್ಡೋಡಿಗೆ ತಂಡ ಕಳುಹಿಸಿ: ಮೂಡುಬಿದಿರೆಯ ನಿಡ್ಡೋಡಿಯಲ್ಲಿ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸುವ ಮೊದಲು ಸ್ಥಳೀಯರ ಅಭಿಪ್ರಾಯ ಸಂಗ್ರಹಕ್ಕೆ ತಜ್ಞರ ತಂಡ ಕಳುಹಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಇಂಧನ ಸಚಿವರ ಗಮನ ಸೆಳೆದಿದ್ದು, ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಎಲ್ಲರ ವಿರೋಧವಿದೆ. ಯುಪಿಸಿಎಲ್‌ನಂತೆ ಇಲ್ಲಿಯೂ ತೊಂದರೆ ತಲೆದೋರಲಿದೆ. ಆದ್ದರಿಂದ ಯೋಜನೆ ಜಾರಿಗೊಳಿಸುವ ವಿಚಾರದಲ್ಲಿ ಮರು ಪರಿಶೀಲನೆ ನಡೆಸಬೇಕು ಎಂದು ಹೇಳಿದ್ದಾರೆ.