ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುದ್ದಿಸಂಕ್ಷೇಪ

Mainashree
Updated On : 30 Aug 2013, 10:17 am

ಲಾಡ್ಜ್‌ನಲ್ಲಿ ಆತ್ಮಹತ್ಯೆ
ಕಾರ್ಕಳ: ನಗರದ ಬಸ್ ನಿಲ್ದಾಣ ಬಳಿಯ ಲಾಡ್ಜ್‌ವೊಂದರಲ್ಲಿ ವ್ಯಕ್ತಿಯೊಬ್ಬನ ಶವ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದೆ. ಈ ವ್ಯಕ್ತಿ ತೀರ್ಥಹಳ್ಳಿಯ ಪೂರ್ಣೇಶ (ತಂದೆ ವೆಂಕಪ್ಪ ಗೌಡ) ಎಂಬ ವಿಳಾಸ ನೀಡಿ ಗುರುವಾರ ಸಂಜೆ ವೇಳೆಗೆ ಕೊಠಡಿ ಪಡೆದುಕೊಂಡಿದ್ದ ಎನ್ನಲಾಗಿದೆ. ಶುಕ್ರವಾರ ಮಧ್ಯಾಹ್ನ ನೇಣು ಬಿಗಿದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ.

ವ್ಯಕ್ತಿಗೆ ತಂಡ ಹಲ್ಲೆ
ವಿಟ್ಲ: ಫೈನಾನ್ಸ್ ವ್ಯವಹಾರ ನಡೆಸುತ್ತಿರುವ ವ್ಯಕ್ತಿಯೊಬ್ಬರ ಸಹೋದರನಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಕನ್ಯಾನ ಗ್ರಾಮದ ಕೆಳಗಿನಪೇಟೆ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ಕನ್ಯಾನ ಕರೋಪಾಡಿ ಗ್ರಾಮದ ಗುಬ್ಯ ನಿನಾಸಿ ಕೃಷ್ಣ ಶೆಟ್ಟಿ ಎಂಬವರ ಪುತ್ರ ರಮೇಶ್ ಶೆಟ್ಟಿ (31) ಗಾಯಗೊಂಡವರು. ಇವರು ಕನ್ಯಾನದ ಕೆಳಗಿನಪೇಟೆ ಎಂಬಲ್ಲಿ ನಿಂತಿದ್ದ ವೇಳೆ ಒಂಭತ್ತು ಜನರ ತಂಡ ಅವರಿಗೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳು ರಮೇಶ್ ಶೆಟ್ಟಿ ಆರೋಪಿಸಿದ್ದಾರೆ. ಹಣದ ವಿಚಾರವಾಗಿ ಈ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ. ಗಂಭೀರವಾಗಿ ಹಲ್ಲೆಗೊಳಗಾದ ರಮೇಶ್ ಶೆಟ್ಟಿ ಅವರನ್ನು ಸ್ಥಳೀಯರು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಕ್ರಮ ಚಿನ್ನಾಭರಣ, ಗುಟ್ಕಾ ಸಾಗಾಟ ಪತ್ತೆ: ಇಬ್ಬರ ಸೆರೆ
ಮಂಗಳೂರು: ದುಬೈನಿಂದ ಅಕ್ರಮವಾಗಿ ತರುತ್ತಿದ್ದ ಚಿನ್ನಾಭರಣ, ಸಿಗರೇಟು ಮತ್ತು ಗುಟ್ಕಾವನ್ನು ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.   ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ದುಬೈನಿಂದ ಆಗಮಿಸಿದ ಅಬ್ದುಲ್ ರಹಿಮಾನ್ ಕುಂಞಯನ್ನು ತಪಾಸಣೆ ನಡೆಸಿದಾಗ, ಆತನದಲ್ಲಿ ರು. 4,23,850 ಮೌಲ್ಯದ 173 ಚಿನ್ನದ ಸರ ಪತ್ತೆಯಾಗಿತ್ತು.
ಇದಲ್ಲದೆ ದುಬಾರಿ ಬೆಲೆಯ 50 ಸಿಗರೇಟು ಪ್ಯಾಕ್, 5 ಸಾವಿರ ಗುಟ್ಕಾ ಪ್ಯಾಕೆಟ್ ಪತ್ತೆಯಾಯಿತು. ಗುರುವಾರ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ದುಬೈನಿಂದ ಮಂಗಳೂರಿಗೆ ಆಗಮಿಸಿದ ಇನ್ನೊಬ್ಬ ಆರೋಪಿ ಕಾಸರಗೋಡು ಕೊಲ್ಲಂಬಾಡಿ ನಿವಾಸಿ ಅನ್ವರ್ ಸಾದತ್ ಬಳಿ ರು. 3.83 ಲಕ್ಷ ಮೌಲ್ಯದ ಚಿನ್ನ ಪತ್ತೆಯಾಗಿತ್ತು. ಇಬ್ಬರು ಆರೋಪಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಕಸ್ಟಮ್ಸ್ ಪ್ರಕಟಣೆ ತಿಳಿಸಿದೆ.

ಉದ್ಯೋಗ ಕೊಡಿಸುವುದಾಗಿ ವಂಚನೆ; ಯುವತಿ ಆರೋಪ
ಪುತ್ತೂರು: ಸವಣೂರು ಗ್ರಾಮ ಪಂಚಾಯಿತಿಗೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತೆಯಾಗಿ ನಾಮಪತ್ರ ಸಲ್ಲಿಸಿದ್ದ, ದಲಿತ ಸಮುದಾಯಕ್ಕೆ ಸೇರಿದ ತನಗೆ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ನಾಮಪತ್ರವನ್ನು ಹಿಂದಕ್ಕೆ ತೆಗೆಸಿಕೊಂಡು ಬಳಿಕ ಮೋಸಗೊಳಿಸಲಾಗಿದೆ ಎಂದು ಪುತ್ತೂರು ತಾಲೂಕು ಪಾಲ್ತಾಡಿ ಗ್ರಾಮದ ಜ್ಯೋತಿ ಎಂಬವರು ಆರೋಪಿಸಿದ್ದಾರೆ.  
ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಆರೋಪ ಮಾಡಿದರು. ತಾನು ಸವಣೂರು ಗ್ರಾಪಂನ ವಾರ್ಡ್ ನಂಬರ್1ರಲ್ಲಿ ನಡೆದ ಉಪಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದೆ. ಕೆಲ ನಾಯಕರು ತನ್ನನ್ನು ಕರೆದೊಯ್ದು ನಾಮಪತ್ರ ಹಿಂಪಡೆಯುವಂತೆ ಒತ್ತಡ ಹೇರಿದ್ದರು. ನಿರುದ್ಯೋಗಿಯಾಗಿದ್ದ ತನಗೆ ಸಂಸ್ಥೆಯೊಂದರಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದರು. ಬಳಿಕ ಉದ್ಯೋಗ ನೀಡದೆ ಮೋಸ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಸ್ಥಳೀಯಾರದ ಸುದರ್ಶನ್, ತಾಪಂ ಮಾಜಿ ಸದಸ್ಯ ಅತ್ತಿಕೆರೆ ಅಬ್ದುಲ್ ರಹಮಾನ್ ಹಾಜಿ, ಜಯಂತ ಪೂಜಾರಿ ಮತ್ತು ಜ್ಯೋತಿ ಅವರ ತಂದೆ ಗಂಗಾಧರ ಇದ್ದರು.

ದರೋಡೆಗೆ ಯತ್ನ: ಬೈಕ್ ಬಿಟ್ಟು ಪರಾರಿ
ವಿಟ್ಲ: ಮನೆಯಲ್ಲಿ ಯಾರೂ ಇಲ್ಲದಾಗ ದರೋಡೆಗೆ ಯತ್ನಿಸಿದ ಕಳ್ಳರು ಜನ ಸೇರಿದ್ದನ್ನು ನೋಡಿ ಬೈಕ್ ಬಿಟ್ಟು ಪರಾರಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ. ವಿಟ್ಲದ ಉಕ್ಕುಡ ಸಮೀಪದ ಕಾಂತಡ್ಕ ನಿವಾಸಿ ಶರೀಫ್ ಎಂಬವರು ಮನೆಯವರೊಂದಿಗೆ ಬೆಳಗ್ಗೆ 11ಗಂಟೆಗೆ ಮಂಳೂರು ಆಸ್ಪತ್ರೆಗೆ ತೆರಳಿದ್ದರು. ರಾತ್ರಿ 7.30ರ ಸುಮಾರಿಗೆ ಮನೆಯೊಳಗಿಂದ ಸದ್ದು ಬರುವುದನ್ನು ಗಮನಿಸಿ ಸ್ಥಳೀಯ ವ್ಯಕ್ತಿಯೊಬ್ಬ ಅಸುಪಾಸಿನವರಿಗೆ ಮಾಹಿತಿ ನೀಡಿದ. ಸಾಕಷ್ಟ ಜನ ಸೇರಿಕೊಂಡರು ಮಾತ್ರವಲ್ಲದೆ ಪೊಲೀಸರಿಗೆ ದೂರು ನೀಡಲಾಯಿತು. ಆದರೆ, ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಕಳ್ಳರು ಮನೆಯಿಂದ ಪರಾರಿಯಾಗಿದ್ದಾರೆ. ಮನೆಯ ಹಿಂಬದಿಯ ಕಾಂಪೌಂಡ್ ಹತ್ತಿ ಮುಂಬಾಗಿಲು ಮುರಿದು ಒಳ ನುಗ್ಗಿದ್ದ ಕಳ್ಳರು ಮನೆಯೊಳಗಿದ್ದ ಕಪಾಟುಗಳನ್ನು ಜಾಲಾಡಿದ್ದಾರೆ. ಮನೆಯೊಳಗಿದ್ದ ಚಿನ್ನಾಭರಣ ಅದೃಷ್ಟವಶಾತ್ ಕಳ್ಳರ ವಶವಾಗದೆ ಉಳಿದಿದೆ. ಕೇರಳ ಮೂಲದ ಬೈಕನ್ನು ಅವರು ಬಿಟ್ಟು ಹೋಗಿದ್ದು, ವಿಟ್ಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ನಾಪತ್ತೆಯಾಗಿದ್ದ ಯುವತಿ ವಿವಾಹವಾಗಿ ಪತ್ತೆ
ಸುಬ್ರಹ್ಮಣ್ಯ: ಇತ್ತೀಚೆಗೆ ನಾಪತ್ತೆಯಾಗಿದ್ದ ಬಳ್ಪ ಗ್ರಾಮದ ಅಜ್ಜಿಮನೆ ಎಂಬಲ್ಲಿನ ಯುವತಿ ದಿವ್ಯ (23) ಇದೀಗ ದಾವಣಗೆರೆ ಜಿಲ್ಲೆಯ ಹೊನ್ನಹಳ್ಳಿ ಮಹೇಂದ್ರ ಎಂಬವರೊಂದಿಗೆ ವಿವಾಹವಾಗಿ ಪತ್ತೆಯಾಗಿದ್ದಾರೆ. ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಿವ್ಯ  ಆ.15ರಂದು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಾಲೆಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋದವರು ಮನೆಗೂ ಬಾರದೆ, ಶಾಲೆಗೂ ಹೋಗದೆ ನಾಪತ್ತೆಯಾಗಿದ್ದರು.  ಇವರಿಬ್ಬರು ಪರಸ್ಪರ ದೂರವಾಣಿ ಮೂಲಕ ಪರಿಚಯವಾಗಿ ಬಳಿಕ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಇದೀಗ ಹೊನ್ನಹಳ್ಳಿಯಲ್ಲಿ ವಿವಾಹವಾಗಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಎಎಸ್‌ಐ ಕುಶಾಲಪ್ಪ ಗೌಡ ಮತ್ತು ಮಹಿಳಾ ಸಿಬ್ಬಂದಿ ಸಂಧ್ಯಾಮಣಿ ದಾವಣಗೆರೆಗೆ ತೆರಳಿ ಇವರಿಬ್ಬರನ್ನು ಪತ್ತೆ ಹಚ್ಚಿ, ಎರಡೂ ಮನೆಯ ಹೆತ್ತವರನ್ನು ಒಪ್ಪಿಸಿ ಅವರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ನೆರವೇರಿಸಲಾಗಿದೆ.

ಕತ್ತಿಯಿಂದ ಕಡಿದು ವೃದ್ಧೆಯ ಕೊಲೆ
ಕಡಬ: ಇಲ್ಲಿನ ಠಾಣಾ ವ್ಯಾಪ್ತಿಯ ಕೋರಿಜಾಲು ಎಂಬಲ್ಲಿ ವೃದ್ಧೆಯೊಬ್ಬರನ್ನು ಕತ್ತಿಯಿಂದ ಕುತ್ತಿಗೆಗೆ ಕಡಿದು ಕೊಲೆ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದ್ದು, ಗುರುವಾರ ಸಂಜೆ ಬೆಳಕಿಗೆ ಬಂದಿದೆ. ಕೊಲೆಯಾದವರನ್ನು ನೂಜಿಬಾಳ್ತಿಲ ಗ್ರಾಮದ ಕೋರಿಜಾಲು ನಿವಾಸಿ ದಿ. ಚಾಕೋ ಎಂಬವರ ಪತ್ನಿ ಚೆನ್ನಮ್ಮ(60) ಎಂದು ಗುರುತಿಸಲಾಗಿದೆ.  ಗುರುವಾರ ಸಂಜೆ ವೇಳೆಗೆ ಯಾರೋ ದಾರಿಹೋಕರು ಈಕೆ ತನ್ನದೇ ಮನೆ ಸಮೀಪದಲ್ಲಿ ಬಿದ್ದಿರುವುದನ್ನು ಕಂಡು ಪರಿಸರದವರಿಗೆ ತಿಳಿಸಿ, ಠಾಣೆಗೆ ಮಾಹಿತಿ ನೀಡಿದ್ದಾರೆ. ಮೂವರು ಮಕ್ಕಳನ್ನು ಹೊಂದಿರುವ ಈಕೆ ಮನೆಯಲ್ಲಿ ಒಂಟಿಯಾಗಿರುತ್ತಿದ್ದರು. ಮನೆಯಲ್ಲಿನ ಕೃಷಿಯಿಂದಲೇ ಜೀವನ ನಿರ್ವಹಿಸುತ್ತಿದ್ದ ಈಕೆ, ಪರಿಸರದವರಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಹಿರಿಯ ಮಗ ವಿದೇಶದಲ್ಲಿದ್ದರೆ, ಇನ್ನೋರ್ವ ಪುತ್ರ ಕಾರ್ಕಳದಲ್ಲಿ ತನ್ನ ಸಂಸಾರದೊಂದಿಗೆ ವಾಸವಾಗಿದ್ದಾರೆ. ಪುತ್ರಿಯೊಬ್ಬಳು ಸಮೀಪದಲ್ಲೇ ಇನ್ನೊಂದು ಮನೆಯಲ್ಲಿ ವಾಸವಾಗಿದ್ದು, ಘಟನಾ ಸಮಯದಲ್ಲಿ ಮನೆಯಲ್ಲಿ ವೃದ್ಧೆಯೊಬ್ಬರೇ ಇದ್ದರು ಎನ್ನಲಾಗಿದೆ. ಮೃತರ ಶರೀರದಲ್ಲಿರುತ್ತಿದ್ದ ಚಿನ್ನದ ಸರವೊಂದು ನಾಪತ್ತೆಯಾಗಿದ್ದು, ಕಿವಿಯಲ್ಲಿದ್ದ ಬೆಂಡೋಲೆ ಹಾಗೇ ಉಳಿದಿದೆ. ಸ್ಥಳಕ್ಕೆ ಉಪ್ಪಿನಂಗಡಿ ವೃತ್ತ ನಿರೀಕ್ಷಕ ಸುರೇಶ್ ಕುಮಾರ್, ಕಡಬ ಠಾಣಾಧಿಕಾರಿ ಎಚ್.ಈ. ನಾಗರಾಜ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳವನ್ನು ಕರೆಯಿಸಲಾಗಿದ್ದು, ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ಶವದ ವಾರಸುದಾರರ ಪತ್ತೆಗೆ ಕ್ರಮ
ಬೆಳ್ತಂಗಡಿ: ಮುಂಡಾಜೆ ಮೂಲಾರು ಸಮೀಪ ಮೃತ್ಯುಂಜಯ ನದಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಶವದ ಮೇಲಿನ ಗಾಯಗಳನ್ನು ನೋಡಿ ಇದು ಇಲ್ಲಿ ನಿವಾಸಿ ರಾಜನ್ ನಾಯರ್ ಆಗಿದ್ದು, ಮನೆಮಂದಿಯೂ ಗುರುತಿಸಿದ್ದರು. ಆದರೆ ಕೊನೆಗಳಿಗೆಯಲ್ಲಿ ನದಿಯಲ್ಲಿ ಸಿಕ್ಕಿದ್ದ ಶವವು ರಾಜನ್ ನಾಯರ್ ಅವರದ್ದಲ್ಲ, ದೇಹದ ಮೇಲೆ ಗಾಯದ ಗುರುತುಗಳು ಇಲ್ಲವೆಂದು ಸಂಬಂಧಪಟ್ಟವರು ತಿಳಿಸಿದ್ದರಿಂದ ಶವವನ್ನು ಗ್ರಾಪಂ ಸುಪರ್ದಿಗೆ ನೀಡಿ ದಫನ ಮಾಡಲಾಗಿತ್ತು. ವಾರಸುದಾರರ ಪತ್ತೆಗಾಗಿ ಡಿಎನ್‌ಎ ಪರೀಕ್ಷೆಗೆ ವೈದ್ಯರಲ್ಲಿ ಬೇಕಾದ ಪುರಾವೆಗಳಿಗಾಗಿ ಬೆಳ್ತಂಗಡಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಜಾತಿ ನಿಂದನೆ
ಬೆಳ್ತಂಗಡಿ: ಇಂದಬೆಟ್ಟು ಗ್ರಾಮದ ಪರಿಯಾರ ಎಂಬಲ್ಲಿ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಜಾತಿ ನಿಂದನೆಗೈದು ಬೆದರಿಕೆ ಹಾಕಿದ್ದು ದಲಿತ ದೌರ್ಜನ್ಯ ಕಾಯ್ದೆಯಡಿ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ರಮೇಶ ಎಂಬವರ ಜಮೀನಿಗೆ ಆ. 18ರಂದು ಆಶಾ ಪಾಲೆಲೆ ಮತ್ತು ಕ್ಷೇವಿಯರ್ ಪಾಲೆಲೆ ಎಂಬವರು ಅಕ್ರಮ ಪ್ರವೇಶಗೈದು ಜೆಸಿಬಿಯಿಂದ ಗುಡಿಸಲನ್ನು ನಾಶಗೈದು ಮನೆ ಮಂದಿಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆಗೈದು ಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಆಶಾ ಮತ್ತು ಕ್ಷೇವಿಯರ್ ಮೇಲೆ ಪ್ರಕರಣ ದಾಖಲಾಗಿದೆ.

ಬೈಕ್, ಕಾರು ಕಳವು
ವಿಟ್ಲ: ಇಲ್ಲಿಗೆ ಸಮೀಪದ ಉಕ್ಕುಡದ ಕಾಂತಡ್ಕ ಎಂಬಲ್ಲಿ ಬುಧವಾರ ರಾತ್ರಿ ಒಮ್ನಿ ಕಾರು ಮತ್ತು ಬೈಕೊಂದು ಕಳವಾಗಿದೆ. ವಿಟ್ಲದ ಕಾಂತಡ್ಕ ಮಸೀದಿ ಬಳಿ ನಿವಾಸಿ ಅಬೂಬಕ್ಕರ್ ಅವರ ಮನೆಯ ಹಿಂಬದಿಯ ಕಿಟಕಿಯನ್ನು ಮುರಿದು ಒಳನುಗ್ಗಿದ ಕಳ್ಳರು ಮನೆಯೊಳಗಿದ್ದ ಕಾರಿನ ಕೀಯನ್ನು ಕದ್ದು ಹೊರಗಡೆ ನಿಲ್ಲಿಸಲಾಗಿದ್ದ ಕಾರನ್ನು ಕದ್ದಿದ್ದಾರೆ. ಮನೆಯವರು ಬೆಳಗ್ಗೆ 5 ಗಂಟೆ ಸುಮಾರಿಗೆ ನಮಾಜ್‌ಗೆಂದು ಎದ್ದು ಹೊರಗೆ ಬಂದು ನೋಡಿದಾಗ ಕಾರು ಕಳವಾಗಿರುವುದು ಬೆಳಕಿಗೆ ಬಂದಿದೆ. ಬಳಿಕ ಅವರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದೇ ಪರಿಸರದ ದಿನೇಶ್ ಎಂಬವರು ಮಂಗಳೂರಿಗೆ ಹೋಗಿ ಬಂದುಬೈಕನ್ನು ಮನೆಯ ಅಂಗಳದಲ್ಲಿ ನಿಲ್ಲಿಸಿದ್ದು, ಬೆಳಗ್ಗೆ ಬೈಕ್ ಇರಲಿಲ್ಲ. ಸ್ಥಳಕ್ಕೆ ವಿಟ್ಲ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಯ: ಇಲಿಜ್ವರಕ್ಕೆ ಮಹಿಳೆ ಬಲಿ
ಸುಳ್ಯ: ತೀವ್ರ ತೆರನಾದ ಕಾಮಾಲೆ ಕಾಯಿಲೆ ಹಾಗೂ ಇಲಿಜ್ವರದಿಂದಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.  ಸುಳ್ಯ ಗಾಂಧಿನಗರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗೌರವ ಉಪನ್ಯಾಸಕಿಯಾಗಿದ್ದ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗಾಂಧಿನಗರದ ಪ್ರಸೀತಾ ಮೃತರು. ತೀವ್ರ ಜಾಂಡಿಸ್ ಹಾಗೂ ಇಲಿಜ್ವರದ ಕಾರಣ ಬುಧವಾರ ರಾತ್ರಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು. ಗಾಂಧಿನಗರದ ದಿ. ಕುಂಞರಾಮನ್ ಅವರ ಪುತ್ರಿ ಪ್ರಸೀತಾ, ಪತಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಗಾಂಧಿನಗರದ ಮನೆಗೆ ತಂದು ಅಂತ್ಯ ಸಂಸ್ಕಾರಕ್ಕಾಗಿ ಹುಟ್ಟೂರಾದ ಕೇರಳದ ಪಯ್ಯನೂರಿಗೆ ಕೊಂಡೊಯ್ಯಲಾಯಿತು. ಗಾಂಧಿನಗರ ಶಾಲೆ ಅಧ್ಯಾಪಕರು, ವಿದ್ಯಾರ್ಥಿಗಳು ಅಂತಿಮದರ್ಶನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement