ಸುಳ್ಯ: ಇಲಿಜ್ವರಕ್ಕೆ ಮಹಿಳೆ ಬಲಿ
ಸುಳ್ಯ: ತೀವ್ರ ತೆರನಾದ ಕಾಮಾಲೆ ಕಾಯಿಲೆ ಹಾಗೂ ಇಲಿಜ್ವರದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಸುಳ್ಯ ಗಾಂಧಿನಗರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗೌರವ ಉಪನ್ಯಾಸಕಿಯಾಗಿದ್ದ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗಾಂಧಿನಗರದ ಪ್ರಸೀತಾ ಮೃತಪಟ್ಟವರು. ತೀವ್ರ ಜಾಂಡೀಸ್ ಹಾಗೂ ಇಲಿಜ್ವರದ ಕಾರಣ ಬುಧವಾರ ರಾತ್ರಿ ಮಂಗಳೂರಿನ ಕೆಎಂಸಿ ಆಸ್ಪತ್ರೆ ಇವರು ದಾಖಲಾಗಿದ್ದರು.
ಗಾಂಜಾ ಮಾರಾಟ; ಅಪರಾಧಿಗೆ 6 ತಿಂಗಳ ಸಜೆ
ಮಂಗಳೂರು: ವಾಮಂಜೂರು ತಿರುವೈಲು ಗ್ರಾಮದ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು ಬಳಿ ಮಾದಕ ವಸ್ತುಗಳನ್ನು ಮಾರಲು ಯತ್ನಿಸಿದ್ದ ಮೂಡುಶೆಡ್ಡೆ ಶಿವನಗರ ನಿವಾಸಿ ಅಬ್ದುಲ್ ಹಮೀದ್‌ಗೆ ನ್ಯಾಯಾಲಯ 6 ತಿಂಗಳ ಕಠಿಣ ಸಜೆ ಹಾಗೂ 5 ಸಾವಿರ ದಂಡ ವಿಧಿಸಿದೆ. ಆರೋಪಿ ಕಾಲೇಜು ಬಳಿ 200 ಗ್ರಾಂ ಗಾಂಜಾ ಮಾರಲು ತನ್ನ ಬಳಿ ಇಟ್ಟುಕೊಂಡಿದ್ದ. ಮಂಗಳೂರು ಗ್ರಾ. ಠಾಣೆ ಉಪನಿರೀಕ್ಷಿಕ ಪ್ರಕಾಶ್ ಕೆ. ದಸ್ತಗಿರಿ ನಡೆಸಿ, ನಂತರ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಈಗ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ದಂಡ ತೆರದಿದ್ದರೆ, 1 ತಿಂಗಳ ಸಾದಾ ಸೆರೆಮನೆ ವಾಸ ಶಿಕ್ಷೆ ಹೆಚ್ಚುವರಿ ಅನುಭವಿಸಬೇಕು ಎಂದು ಕೋರ್ಟ್ ಆದೇಶಿಸಿದೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಮೋಹನ್ ಕುಮಾರ್ ವಾದಿಸಿದ್ದರು.
ಕರ್ಣಾಟಕ ಬ್ಯಾಂಕ್‌ಗೆ ನೂತನ ಸಿಜಿಎಂ
ಮಂಗಳೂರು: ಕರ್ಣಾಟಕ ಬ್ಯಾಂಕಿನ ಚೀಫ್ ಜನರಲ್ ಮೆನೇಜರ್‌ರಾಗಿ ಎಂ.ಎಸ್. ಮಹಾಬಲೇಶ್ವರ ಭಟ್ ನೇಮಕಗೊಂಡಿದ್ದಾರೆ. ಅಸಿಸ್ಟೆಂಟ್ ಮ್ಯಾನೇಜರ್‌ರಾಗಿ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿದ್ದ ಅವರು, ದೆಹಲಿಯ ರೀಜನಲ್ ಕಚೇರಿ ಮುಖ್ಯಸ್ಥರಾಗಿ ಉತ್ತರ ಭಾರತದಲ್ಲಿ ಬ್ಯಾಂಕಿನ ಶಾಖೆ ತೆರೆಯುವಲ್ಲಿ ಶ್ರಮ ವಹಿಸಿದರು. 2011ರಲ್ಲಿ ಜನರಲ್ ಮೆನೇಜರ್‌ರಾಗಿ ಭಡ್ತಿ ಹೊಂದಿದರು. ಕೃಷಿ ವಿಜ್ಞಾನ ಪದವೀಧರರಾದ ಮಹಾಬಲೇಶ್ವರ ಭಟ್ಟ ಅವರು 29 ವರ್ಷಗಳಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಡಳಿತ ಅನುಭವ ಹೊಂದಿದ್ದಾರೆ.