ಸುದ್ದಿ ಸಂಕ್ಷೇಪ
ಆಧಾರ್ ನೋಂದಣಿ ಕೇಂದ್ರ ಇಂದಿನಿಂದ ಆರಂಭ
ಮೂಲ್ಕಿ: ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಇಲ್ಲಿನ ಕಾರ್ನಾಡು ಗಾಂಧಿ ಮೈದಾನದ ಬಳಿಯಿರುವ ಸಮುದಾಯ ಭವನದಲ್ಲಿ ಶನಿವಾರದಿಂದ ಆಧಾರ್ ಕಾರ್ಡ್ ನೋಂದಾವಣೆಯು ಆರಂಭಗೊಳ್ಳಲಿದೆ.
ಎಎಂಆರ್ ಡ್ಯಾಂ ಮಟ್ಟ ಏರಿಕೆಗೆ ಕ್ರಮ: ರೈ
ಮಂಗಳೂರು: ಬಂಟ್ವಾಳ ಶಂಭೂರಿನಲ್ಲಿರುವ ಎಎಂಆರ್ ಯೋಜನೆಗಾಗಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಡ್ಯಾಂ ಮಟ್ಟವನ್ನು ಸುತ್ತಮುತ್ತಲಿನ ಪರಿಸರದ ಅನುಕೂಲಕ್ಕೆ ತಕ್ಕಂತೆ ಏರಿಸಲಾಗುವುದು ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಯೋಜನೆಯ ಡ್ಯಾಂ ಮಟ್ಟ ಹೆಚ್ಚಿಸಿರುವುದರಿಂದ ಆ ಭಾಗದ ಗ್ರಾಮಗಳಿಗೆ ರೈತರ ಜಮೀನುಗಳಿಗೆ ಆಗಬಹುದಾದ ಕಷ್ಟನಷ್ಟಗಳ ಬಗ್ಗೆ, ನೈಜ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯ ನಿರ್ವಹಿಸಲು ಸೂಚಿಸಿದರು.
ಮೇ 31 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ನಿರ್ಣಯ ಹಾಗೂ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ 18 ಜನರಿಗೆ ಪಂಪ್‌ಸೆಟ್ ನೀಡಲಾಗುವುದು. ಅಜಿಲಮೊಗರು ಮತ್ತು ಪೆರ್ಲ ಮಸೀದಿಗಳು ನೆರೆಯಿಂದ ತೊಂದರೆಗೊಳಗಾಗಿದ್ದು, ಅವುಗಳ ದುರಸ್ತಿಗೆ ಆರ್ಥಿಕ ನೆರವು ಒದಗಿಸಲಾಗುವುದು ಎಂದು ತಿಳಿಸಿದರು.
ನರಿಕೊಂಬು ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಮೂಲಕ ಕುಡಿಯುವ ನೀರು ಸರಬರಾಜಿಗೆ ಕ್ರಮ ವಹಿಸಿರುವುದರಿಂದ ಆ ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಎಎಂಆರ್ ಪವರ್ ಪ್ರಾಜೆಕ್ಟ್‌ನಿಂದ ನೀಡಲು ಉದ್ದೇಶಿದ ರು. 30 ಲಕ್ಷವನ್ನು ಇತರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ಹೇಳಿದರು.
ಮೂಲ್ಕಿ: ಇಂದು ಶಿಕ್ಷಕರ ಪ್ರತಿಭಾ ಸ್ಪರ್ಧೆ
ಮೂಲ್ಕಿ: ಇಲ್ಲಿನ ರೋಟರಿ ಕ್ಲಬ್ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಶನಿವಾರ ಮಧ್ಯಾಹ್ನ ಮೂಲ್ಕಿಯ ಬಿಲ್ಲವ ಸಂಘದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಮೂಲ್ಕಿ ವಲಯ ಹಾಗೂ ಇಂಟರ್ಯಾಕ್ಟ್ ಕ್ಲಬ್ ಶಾಲಾ ಶಿಕ್ಷಕರ ಪ್ರತಿಭಾ ಸ್ಪರ್ಧೆ ವೈವಿಧ್ಯ- 2013 ಕಾರ್ಯಕ್ರಮ ಜರಗಲಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಮಲ್ಪೆ ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರೋಟರಿಯ ಸಹಾಯಕ ಗವರ್ನರ್ ಮಾಧವ ಸುವರ್ಣ ಹಾಗೂ ವಲಯ ಸೇನಾನಿ ಎನ್.ಪಿ. ಶೆಟ್ಟಿ ಭಾಗವಹಿಸಲಿದ್ದಾರೆ.
ಇಂದು ಯುವಜನ ಒಕ್ಕೂಟದ ಮಹಾಸಭೆ
ಪುತ್ತೂರು; ತಾಲೂಕು ಯುವಜನ ಒಕ್ಕೂಟದ ಮಹಾಸಭೆಯು 31ರಂದು ಪುತ್ತೂರು ತಾಪಂ ಸಭಾಂಗಣದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ದಿನೇಶ್ ಮೆದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾಳೆ ಕ್ರೀಡಾಕೂಟ
ಬಂಟ್ವಾಳ: ಇಲ್ಲಿನ ವಿಶ್ವಕರ್ಮ ಸಮಾಜ ಸೇವಾ ಸಂಘ ಹಾಗೂ ವಿಶ್ವಜ್ಯೋತಿ ಮಹಿಳಾ ಮಂಡಳಿ ಇದರ ಜಂಟಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಕ್ರೀಡಾಕೂಟ ಸೆ. 1 ರಂದು ಬೆಳಗ್ಗೆ 8.30 ರಿಂದ ಬಂಟ್ವಾಳ ಎಸ್‌ವಿಎಸ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ರೀಡಾ ಕಾರ್ಯದರ್ಶಿ ಜಯಚಂದ್ರ ಸರಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.