ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಂಗಡಿ ತೆರವಿಗೆ ಬಂದ ಜೆಸಿಬಿ ಏರಿ ನಿಂತ ಮಾಲೀಕ

Mainashree
Updated On : 1 Sept 2013, 10:31 am

ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದಲ್ಲಿರುವ ಅನಧಿಕೃತ ಅಂಗಡಿಯೊಂದನ್ನು ತೆರವುಗೊಳಿಸಲು ಪಂಚಾಯಿತಿ ಆಡಳಿತ ಮುಂದಾಗುತ್ತಿದ್ದಂತೆಯೇ ಅಂಗಡಿ ಮಾಲೀಕ ಯೋಗೀಶ್ ಪ್ರಭು ಜೆಸಿಬಿ ಯಂತ್ರವನ್ನೇ ಅಪ್ಪಿ ಹಿಡಿದು, ನನ್ನನ್ನು ಕೊಂದು ಬಳಿಕ ಅಂಗಡಿಯನ್ನು ತೆರವುಗೊಳಿಸಿ ಎಂದು ಕಟ್ಟಡ ತೆರವಿಗೆ ಅಡ್ಡಿಯನ್ನುಂಟು ಮಾಡಿದ ಘಟನೆ ಶನಿವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.
 ಈ ಹಿಂದೆ ಯೋಗೀಶ್ ಪ್ರಭು ಅವರು ನಂದಿನಿ ಹಾಲಿನ ಬೂತ್ ನಿರ್ಮಾಣಕ್ಕಾಗಿ ಬಸ್ ನಿಲ್ದಾಣದಲ್ಲಿ ಅಂಗಡಿಯನ್ನು ನಿರ್ಮಿಸಿದ್ದಾಗಲೂ ಎರಡು ಬಾರಿ ಉಪ್ಪಿನಂಗಡಿ ಪಂಚಾಯಿತಿ ಆಡಳಿತ ಅದನ್ನು ತೆರವುಗೊಳಿಸಿ ಅಂಗಡಿ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಬಳಿಕ ಮೂರನೇ ಬಾರಿ ಅಂಗಡಿ ನಿರ್ಮಿಸಿ ಅದನ್ನು ತೆರವುಗೊಳಿಸದಂತೆ ಹೈಕೋರ್ಟ್‌ನಿಂದ ತಡೆ ತಂದು ಪಂಚಾಯಿತಿ ಆಡಳಿತಕ್ಕೇ ಸೆಡ್ಡು ಹೊಡೆದಿದ್ದರು. ಈ ಮಧ್ಯೆ ಅಂಗಡಿಯು ಹಾಲಿನ ಬೂತ್‌ಗೆ ಬದಲಾಗಿ ಹಣ್ಣಿನ ಅಂಗಡಿಯಾಗಿ, ತರಕಾರಿ ಅಂಗಡಿಯಾಗಿ ಬಳಿಕ ಹೂವಿನ ಅಂಗಡಿಯಾಗಿ ಪರಿವರ್ತನೆಯಾಗಿತ್ತು.
 ಈ ಎಲ್ಲ ಬೆಳವಣಿಗೆಗಳ ನಡುವೆ, ಕೋರ್ಟ್ ನೀಡಿದ್ದ ತಡೆಯಾಜ್ಞೆಯ ಅವಧಿ ಮುಗಿದಿದ್ದರಿಂದ ಶನಿವಾರ ಉಪ್ಪಿನಂಗಡಿ ಗ್ರಾಪಂ ಆಡಳಿತ ಪೊಲೀಸ್ ಸಿಬ್ಬಂದಿ ಭದ್ರತೆಯೊಂದಿಗೆ ಅನಧಿಕೃತವಾಗಿರುವ ಈ ಅಂಗಡಿಯನ್ನು ತೆರವುಗೊಳಿಸಲು ಜೆಸಿಬಿ ಸಮೇತ ಆಗಮಿಸಿತ್ತು. ಸುದ್ದಿ ತಿಳಿದ ಮಾಲೀಕ ಯೋಗೀಶ್ ಪ್ರಭು ತನ್ನ ಪತ್ನಿಯೊಂದಿಗೆ ಸ್ಥಳಕ್ಕಾಗಮಿಸಿ ಪತ್ನಿಯನ್ನು ಅಂಗಡಿಯಲ್ಲಿ ಕೂರಿಸಿ ಜೆಸಿಬಿ ಯಂತ್ರದ ಮೇಲೇರಿ ಜೆಸಿಬಿಯ ಕೊಕ್ಕೆಯನ್ನು  ಬಲವಾಗಿ ಅಪ್ಪಿ ಹಿಡಿದು 'ನನ್ನ ಅಂಗಡಿ ತೆರವಿಗೆ ಮುನ್ನ ನನ್ನ ಜೀವ ತೆಗೆಯಿರಿ. ಉಪ್ಪಿನಂಗಡಿಯಲ್ಲಿ ಪಂಚಾಯಿತಿ ಅಧಿಕಾರಿಗಳಿಗೆ ಮಾಮೂಲು ಹಣ ನೀಡುತ್ತಾ ಇದೇ ಬಸ್ ನಿಲ್ದಾಣದಲ್ಲಿ ಹಲವು ಅನಧಿಕೃತ ಅಂಗಡಿಗಳಿವೆ. ಅದನ್ನು ತೆರವುಗೊಳೀಸದೇ ನನ್ನ ಅಂಗಡಿಯನ್ನು ಮಾತ್ರ ತೆರವುಗೊಳಿಸಲು ಬಿಡಲಾರೆ' ಎನ್ನುತ್ತ ಜೆಸಿಬಿ ಅಪ್ಪಿಕೊಂಡು ನಿಂತರು.
ತೆರವಿಗೆ ಕಾಲಾವಕಾಶ: ಸ್ಥಳಕ್ಕೆ ಪೊಲೀಸರು, ಪಂಚಾಯಿತಿ ಆಡಳಿತ ಅಧಿಕಾರಿಗಳು ಕಾನೂನುಬದ್ಧವಾಗಿ ನಡೆಸುವ ಕಾರ್ಯಾಚರಣೆಗೆ ತಡೆಯೊಡ್ಡಬಾರದು, ಜೆಸಿಬಿಯಿಂದ ಇಳಿಯುವಂತೆ ಯೋಗೀಶ್ ಪ್ರಭು ಅವರನ್ನು ಮನವಿ ಮಾಡಿದರು. ಆದರೆ ಪಟ್ಟುಬಿಡದ ಯೋಗೀಶ್ ಪ್ರಭು ಉಳಿದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿದರೆ ತನ್ನ ಅಂಗಡಿಯ ತೆರವಿಗೆ ಅವಕಾಶ ಮಾಡಿಕೊಡುವುದಾಗಿ ವಾದಿಸುತ್ತ ಜೆಸಿಬಿಯನ್ನು ಅಪ್ಪಿಕೊಂಡು ನಿಂತೇಬಿಟ್ಟರು. ಸುಮಾರು ಮಧ್ಯಾಹ್ನ 1 ಗಂಟೆಯವರಗೆ ಎಲ್ಲರನ್ನು ಕಾಯುವಂತೆ ಮಾಡಿದ ಯೋಗೀಶ್ ಪ್ರಭು ಹಠಕ್ಕೆ ಮಣಿದ ಅಧಿಕಾರಿಗಳು ಪರಿಸ್ಥಿತಿಯನ್ನು ಮನವರಿಕೆ ಮಾಡಿ ಅಂಗಡಿಯನ್ನು   ತೆರವುಗೊಳಿಸಲು ಸ್ವತಃ ಮಾಲೀಕರಿಗೆ ಕಾಲಾವಕಾಶ ನೀಡಿದರು.
ಪೂರ್ವ ಮಾಹಿತಿ ನೀಡಲಾಗಿತ್ತು: ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಪಿಡಿಒ ರವಿಚಂದ, ಅನಧಿಕೃತ ಅಂಗಡಿಯ ತೆರವು ಕಾರ್ಯಾಚರಣೆ ಬಗ್ಗೆ ಯೋಗೀಶ್ ಅವರಿಗೆ ಪೂರ್ವ ಮಾಹಿತಿ ನೀಡಿ, ಸ್ವತಃ ನೀವೇ ಅಂಗಡಿ ತೆರವುಗೊಳಿಸುವಂತೆ ತಿಳಿಸಲಾಗಿತ್ತು.  ಆದರೆ ಇದನ್ನು ದುರಪಯೋಗ ಪಡಿಸಿಕೊಂಡ ಯೋಗೀಶ್, ತನಗೆ ಜೀವ ಬೆದರಿಕೆಯೊಡ್ಡಿದ್ದಾರೆಂದು ತನ್ನ ವಿರುದ್ಧ ಪೊಲೀಸರಿಗೆ ಸುಳ್ಳು ದೂರು ನೀಡಿದ್ದಾರೆ ಎಂದು ಪಿಡಿಒ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement