ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಎಸ್‌ಸಿಡಿಸಿಸಿ ಬ್ಯಾಂಕ್: 17.76 ಕೋಟಿ ಲಾಭ

Mainashree
Updated On : 1 Sept 2013, 10:29 am

ಮಂಗಳೂರು: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕಳೆದ ಸಾಲಿನಲ್ಲಿ ಗರಿಷ್ಠ ರು. 17.76 ಕೋಟಿ ಲಾಭಗಳಿಸಿದ್ದು, ಸದಸ್ಯ ಸಂಘಗಳಿಗೆ ಶೇ.10.50 ಲಾಭಾಂಶ ಪ್ರಕಟಿಸಿದೆ.
 ಶನಿವಾರ ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
 ವರದಿ ವರ್ಷದಲ್ಲಿ ರು. 2710 ಕೋಟಿ ಗುರಿ ದಾಟಿ ರು. 2925.55 ಕೋಟಿ ವ್ಯವಹಾರ ನಡೆಸಿದ್ದು, ಒಟ್ಟು ರು. 1566.23 ಕೋಟಿ ಠೇವಣಿ ಸಂಗ್ರಹಿಸಿ ರಾಜ್ಯದಲ್ಲಿ ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ಯಾಂಕ್ ರು. 2,083.13 ಕೋಟಿ ಮುಂಗಡ ನೀಡಿದ್ದು, 902 ಸಹಕಾರಿ ಸಂಘಗಳ ಸದಸ್ಯತ್ವವನ್ನು ಹೊಂದಿದೆ. ಬ್ಯಾಂಕಿನ ದುಡಿಯುವ ಬಂಡವಾಳ ರು. 2,306.76 ಕೋಟಿಯಾಗಿದ್ದು, ಅನುತ್ಪಾದಕ ಆಸ್ತಿ ಶೇ.3.18 ಆಗಿದೆ. ಇದು ಕಳೆದ ವರ್ಷಕ್ಕಿಂತ ಶೇ.1.03ರಷ್ಟು ಇಳಿದಿದೆ. ಕೃಷಿ ಸಾಲ ಶೇ.ನೂರು ವಸೂಲಾಗಿದೆ. ಇದನ್ನು ಕಳೆದ 18 ವರ್ಷಗಳಿಂದ ನಿರಂತರವಾಗಿ ಮಾಡಿರುವುದು ರಾಷ್ಟ್ರೀಯ ದಾಖಲೆಯಾಗಿದೆ. ಅವಿಭಜಿತ ಜಿಲ್ಲೆಯಲ್ಲಿ 23 ಪತ್ತಿನ ಸಹಕಾರಿ ಸಂಘಗಳು ಕೃಷಿ ಸಾಲ ವಸೂಲಾತಿಯಲ್ಲಿ ಶೇ. ನೂರು ಸಾಧನೆ ಮಾಡಿವೆ ಎಂದರು.
 ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಸತತ 14 ವರ್ಷದಿಂದ ದೊರಕುತ್ತಿದ್ದು, ಕಳೆದ 11 ವರ್ಷಗಳಿಂದ ಸ್ವಸಹಾಯ ಗುಂಪುಗಳ ನಿರ್ವಹಣೆಗೆ ನಬಾರ್ಡ್ ಪ್ರಶಸ್ತಿ ಲಭಿಸಿದೆ ಎಂದರು. ರೈತರಿಗೆ ಕೃಷಿ ಸಾಲ ವಿತರಿಸಲು ಸ್ಮಾರ್ಟ್ ಕಾರ್ಡ್ ಯೋಜನೆ ಹೊಂದಿದೆ ಎಂದರು.
ಕೊಳೆರೋಗ ಪರಿಹಾರ: 3 ತಿಂಗಳಿಂದ ಕರಾವಳಿಯಲ್ಲಿ ನಿರಂತರ ಮಳೆಯಿಂದ ಅಡಕೆ ತೋಟಕ್ಕೆ ಕೊಳೆರೋಗ ತಟ್ಟಿದೆ. ಇದರಿಂದ ಶೇ.50 ಅಡಕೆ ಫಸಲು ನಷ್ಠವಾಗಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಕಾರಿ ಸಂಘಗಳ ಮೂಲಕ ಬೆಳೆಗಾರರಿಗೆ ಪರಿಹಾರ ಮೊತ್ತ ನೀಡುವಂತೆ ಆಗ್ರಹಿಸಿದರು.
ಸಂಘಗಳಿಗೆ ಗೌರವ: ಕಳೆದ ಸಾಲಿನಲ್ಲಿ ಶೇ.ನೂರು ಸಾಲ ವಸೂಲಾತಿಯಲ್ಲಿ ಸಾಧನೆ ಮಾಡಿದ 23 ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಛಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಲೆಕ್ಕಪರಿಶೋಧನೆಯಲ್ಲಿ ಎ ಮತ್ತು ಬಿ ವರ್ಗದ ಅತ್ಯುತ್ತಮ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಲ್ಲಿ ಆಯ್ದ 3 ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲಾ ಬ್ಯಾಂಕ್‌ನ ಪ್ರೋತ್ಸಾಹಕ ಪ್ರಶಸ್ತಿಯನ್ನು 10 ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಿಗೆ, ಪತ್ತಿನ ಸಹಕಾರಿ ಸಂಘಗಳ ಪ್ರಶಸ್ತಿಯನ್ನು 2 ಸಂಘ ಮತ್ತು ಪಟ್ಟಣ ಸಹಕಾರಿ ಬ್ಯಾಂಕ್‌ಗಳಿಗೆ ನೀಡುವ ಪ್ರಶಸ್ತಿಯನ್ನು 2 ಬ್ಯಾಂಕ್‌ಗಳಿಗೆ, 2 ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಪ್ರಶಸ್ತಿ, ಉಡುಪಿ ಜಿಲ್ಲೆಯಿಂದ 2 ಸಂಘಗಳು ಪ್ರಶಸ್ತಿ ಪಡೆದಿವೆ. ದ.ಕ. ಹಾಗೂ ಉಡುಪಿ ಜಿಲ್ಲೆಯ ತಲಾ 2 ಮಹಿಳಾ ಹಾಲು ಉತ್ಪಾದಕರ ಸಂಘಗಳು ಪ್ರಶಸ್ತಿ ಸ್ವೀಕರಿಸಿವೆ.
 ನಿವೃತ್ತಿ ಹೊಂದಿದ ಸಹಕಾರಿ ಸಂಘಗಳ 17 ಮಂದಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಬ್ಯಾಂಕಿನಿಂದ ತಲಾ ರು. 50 ಸಾವಿರ ನಗದು ನೀಡಿ ಸನ್ಮಾನಿಸಲಾಯಿತು.
ಉಪಾಧ್ಯಕ್ಷ ವಿನಯ ಕುಮಾರ್ ಸೂರಂಜೆ, ನಿರ್ದೇಶಕರಾದ ನಿರಂಜನ್, ಟಿ.ಜಿ. ರಾಜಾರಾಮ ಭಟ್, ವಾದಿರಾಜ ಶೆಟ್ಟಿ, ಭಾಸ್ಕರ ಕೋಟ್ಯಾನ್, ವ್ಯವಸ್ಥಾಪನಾ ನಿರ್ದೇಶಕ ಗೋಪಾಲಕೃಷ್ಣ ಭಟ್, ಸಹಕಾರಿ ಸಂಘಗಳ ಉಪನಿಬಂಧಕರಾದ ವಿಜಯ ಕುಮಾರ್, ಕಾಂತರಾಜು, ಸಹಾಯಕ ನಿಬಂಧಕರಾದ ಬಿ.ಕೆ.ಸಲೀಂ, ನರಸಿಂಹ ಸ್ವಾಮಿ, ವಿಶೇಷಾಧಿಕಾರಿ ಲಕ್ಷ್ಮಣ್ ಮಲ್ಲೂರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement