ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಾಟ್ಸ್ ಆ್ಯಪ್‌ನಿಂದ ಸಮಾಜಮುಖಿಯಾದ ಎಂ.ಫ್ರೆಂಡ್ಸ್ ಗ್ರೂಪ್

Mainashree
Updated On : 1 Sept 2013, 10:31 am

ಬಂಟ್ವಾಳ: ಮೊಬೈಲ್‌ನಲ್ಲಿರುವ ಸಾಮಾಜಿಕ ತಾಣಗಳಿಂದ ಅನುಕೂಲಕ್ಕಿಂತ ಅಪಾಯಗಳೇ ಹೆಚ್ಚು ಎನ್ನುವವರೂ ಕೂಡ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಕಾಲ ಬಂದಿದೆ.
ಇಂಟರ್‌ನೆಟ್ ಬಳಸುವವರಿಗೆ ವಾಟ್ಸ್ ಆ್ಯಪ್ ಸಾಮಾಜಿಕ ತಾಣದ ಬಗ್ಗೆ ಅರಿವು ಇದ್ದೇ ಇರುತ್ತದೆ. ಸದ್ಯದ ಮಟ್ಟಿಗೆ ಫೇಸ್ ಬುಕ್‌ಗಿಂತಲೂ ವೇಗದ ಪ್ರಚಾರ ಪಡೆಯುತ್ತಿರುವ ವಾಟ್ಸ್ ಆ್ಯಪ್ ಸಾಮಾಜಿಕ ನೆಟ್‌ವರ್ಕ್ ಇಲ್ಲದ ಮೊಬೈಲ್ ಇರುವುದೇ ವಿರಳ. ಈ ವಾಟ್ಸ್ ಆ್ಯಪ್‌ನಲ್ಲಿ ಗರಿಷ್ಠ 50 ಸದಸ್ಯರ ಗ್ರೂಪ್ ಒಂದನ್ನು ರಚನೆ ಮಾಡಲಿಕ್ಕೆ ಆಗುತ್ತದೆ. ಗ್ರೂಪ್ ಅಡ್ಮಿನ್ ಸೇರಿ 51 ಸದಸ್ಯರನ್ನು ಮಾಡಬಹುದು. ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಮೆಸೇಜ್, ವಿಡಿಯೊ, ಆಡಿಯೊ ಅಥವಾ ಫೋಟೋ ಕಳುಹಿಸಿದರೆ ಎಲ್ಲ ಸದಸ್ಯರಿಗೆ ಏಕಕಾಲಕ್ಕೆ ಸಿಗುತ್ತದೆ.
ಎಂ. ಫ್ರೆಂಡ್ಸ್ ಗ್ರೂಪ್: ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಅಂದ್ರೆ ವಿಟ್ಲದ ಯುವ ಉದ್ಯಮಿಯೊಬ್ಬರು ಇಂತಹ ವಾಟ್ಸ್ ಆ್ಯಪ್‌ನಲ್ಲಿ ಎಂ. ಫ್ರೆಂಡ್ಸ್ ಎಂಬ ಹೆಸರಿನ ಗ್ರೂಪ್‌ನ್ನು 2013 ಜನವರಿ 23ರಂದು ಪ್ರಾರಂಭಿಸಿ, ಆ ಮೂಲಕ ಮುಸ್ಲಿಂ ಸಮುದಾಯದ ಬಡವರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಅವರ ಹೆಸರು ರಶೀದ್ ವಿಟ್ಲ. ಪತ್ರಿಕಾ ರಂಗದಲ್ಲೂ ಕೆಲಸ ನಿರ್ವಹಿಸಿದ ಅನುಭವವಿರುವ ರಶೀದ್ ವಿಟ್ಲ ಅವರು ವಿಟ್ಲ ರೋಟರಿ ಕ್ಲಬ್‌ನ ಕಾರ್ಯದರ್ಶಿಯಾಗಿದ್ದು, ಜಮೀಯತ್ತುಲ್ ಫಲಾಹ್ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಇವರು ವಾಟ್ಸ್ ಆ್ಯಪ್‌ನಲ್ಲಿ ಆರಂಭಿಸಿದ ಎಂ.ಫ್ರೆಂಡ್ಸ್ ಗ್ರೂಪ್ ಪ್ರಾರಂಭದಲ್ಲಿ ಬೆರಳೆಣಿಕೆಯ ಸದಸ್ಯರನ್ನು ಹೊಂದಿದ್ದು, ಈಗ ಭರ್ತಿ 51 ಉತ್ತಮ ಸದಸ್ಯರ ಸಂಪೂರ್ಣ ತಂಡವನ್ನು ಹೊಂದಿದೆ.
ಕರಾವಳಿ ಜಿಲ್ಲೆಯ ಮುಸ್ಲಿಂ ಸಹೋದರರಲ್ಲದೆ ಹಾಸನ, ಮಡಿಕೇರಿ, ಬೆಂಗಳೂರು, ಕೇರಳದ ಕಣ್ಣೂರು ಜಿಲ್ಲೆಯಲ್ಲದೆ ಕರಾವಳಿಯಿಂದ ಉದ್ಯೋಗ ಅರಸಿ ಯುಎಇ, ಕೆಎಸ್‌ಎ, ಒಮಾನ್, ಕುವೈಟ್, ಬಹರೈನ್ ದೇಶದಲ್ಲಿರುವ ಮುಸ್ಲಿಂ ಸಹೋದರರು ಈ ಎಂ. ಫ್ರೆಂಡ್ಸ್ ಗ್ರೂಪ್‌ನಲ್ಲಿದ್ದಾರೆ.
ರಿಲೀಫ್ ಫಂಡ್: ಸಾಮಾಜಿಕ ತಾಣ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಬಾರದು ಎಂಬ ನಿಟ್ಟಿನಲ್ಲಿ ಎಂ. ಫ್ರೆಂಡ್ಸ್, ಮೆಡಿಕಲ್ ರಿಲೀಫ್ ಫಂಡ್ ಎಂಬ ಯೋಜನೆಯೊಂದನ್ನು ಸ್ಥಾಪಿಸಿದೆ. ತೀರ ಬಡ, ಅಶಕ್ತರು ಅಕಸ್ಮತ್ತಾಗಿ ಅನಾರೋಗ್ಯಕ್ಕೀಡಾಗಿ ಹಣ ಹೊಂದಿಸಲಾಗದೆ ಪರಿತಪಿಸುವುದನ್ನು ತಪ್ಪಿಸಿ ಅವರಿಗೆ ಸಹಾಯ ಹಸ್ತ ನೀಡಲು ಈ ಗ್ರೂಪ್ ಸದಸ್ಯರು ರಿಲೀಫ್ ಫಂಡ್ ಸ್ಥಾಪಿಸಿದ್ದಾರೆ. ಈಗಾಗಲೇ ಉತ್ತಮ ಪ್ರತಿಕ್ರಿಯೆ ಪಡೆದಿರುವ ಈ ಯೋಜನೆ ರು. 1,16,001 ನ್ನು ಸದಸ್ಯರಿಂದ ಸಂಗ್ರಹಿಸಿದೆ. ಎಂ. ಫ್ರೆಂಡ್ಸ್ ಮೆಡಿಕಲ್ ರಿಲೀಫ್ ಫಂಡ್ ಹೆಸರಿನಲ್ಲಿ ವಿಟ್ಲ ಕಾರ್ಪೋರೇಶನ್ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆದಿದೆ. ಖಾತೆ ನಂಬ್ರ- 120000101008292, ಐಎಫ್‌ಎಸ್‌ಸಿ ಕೋಡ್ ಸಿಒಆರ್‌ಪಿ 0001200.
ಈಗಾಗಲೇ ಪ್ರಥಮ ಕಂತಿನ ಮೊತ್ತವನ್ನು ಇತ್ತೀಚೆಗೆ ಉದನೆಯಲ್ಲಿ ಟಾಟಾ ಸುಮೋ ಅಪಘಾತಕ್ಕೀಡಾಗಿ 9 ಜನ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ ಆಸ್ಪತ್ರೆ ವೆಚ್ಚಕ್ಕೆ ನೀಡಿದೆ.
ಆರೋಗ್ಯ ಜಾಗೃತಿಗೆ ಯೋಜನೆ: ಎಂ. ಫ್ರೆಂಡ್ಸ್ ಗ್ರೂಪ್ ಆರೋಗ್ಯದ ವಿಚಾರದಲ್ಲಿ ವಿಶೇಷ ಆಸಕ್ತಿ ಹೊಂದಿದೆ. ಕರಾವಳಿ ಜಿಲ್ಲೆಯ ಬಡವರು ವಾಸವಿರುವ ಒಂದು ಊರನ್ನು ಈ ಗ್ರೂಪ್ ಮಾದರಿಯಾಗಿ ತೆಗೆದುಕೊಳ್ಳಲಿದೆ. ಆ ಊರಿನ ಪ್ರತಿ ಮನೆಗೆ ತೆರಳಿ ದಾಖಲೆ ಸಂಗ್ರಹಿಸಿ ಅವರ ಆರೋಗ್ಯದ ವಿಚಾರವಾಗಿ ಮಹಿಳೆ ಹಾಗೂ ಪುರುಷ ವೈದ್ಯರಿಂದ ತಪಾಸಣೆ ನಡೆಸಿ ಅನಾರೋಗ್ಯ ಮುಕ್ತರನ್ನಾಗಿಸಲು ಪ್ರಯತ್ನಿಸಿ ಯಶಸ್ವಿಯಾಗಲು ಕಾರ್ಯಯೋಜನೆ ಹಮ್ಮಿಕೊಂಡಿದೆ.
 ಮಂಗಳೂರು ಕೆರಿಯರ್ ಗೈಡನ್ಸ್ ಮತ್ತು ಇನ್‌ಫಾರ್ಮೇಶನ್ ಸೆಂಟರ್‌ನ ಮುಖ್ಯಸ್ಥ ಉಮರ್ ಯು.ಎಚ್. ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.
ಕನ್ವೀನರ್‌ಗಳ ಆಯ್ಕೆ: ಶುಕ್ರವಾರ ಬಿ.ಸಿ. ರೋಡ್‌ನ ಖಾಸಗಿ ಹಾಲ್ ಒಂದರಲ್ಲಿ ಎಂ.ಫ್ರೆಂಡ್ಸ್ ಗ್ರೂಪ್‌ನ ಸಭೆ ನಡೆಯಿತು. ಮೆಡಿಕಲ್ ರಿಲೀಫ್ ಫಂಡ್‌ನ ಕಾರ್ಯಯೋಜನೆಯನ್ನು ಕಾರ್ಯಗತಗೊಳಿಸಲು ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ರಶೀದ್ ವಿಟ್ಲ, ಮಹಮ್ಮದ್ ಮುಸ್ತಫಾ ಇರುವೈಲ್, ಕೆ.ಪಿ. ಮುಹಮ್ಮದ್ ಸಾದಿಕ್ ಪುತ್ತೂರು, ಅಬ್ದುಲ್ ಸಮದ್ ಸೋಂಪಾಡಿ ಅವರನ್ನೊಳಗೊಂಡ 5 ಮಂದಿ ಸದಸ್ಯರನ್ನು ಆರಿಸಲಾಯಿತು.

 ಮೌನೇಶ್ ವಿಶ್ವಕರ್ಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement