'ಹದ್ದೆ ತ್ಯಜಿಸಿಯಾದರೂ ಪ್ರಾ. ಸಹಕಾರಿ ಸಂಘ ಉಳಿಸಲು ಹೋರಾಡುತ್ತೇನೆ'
ಅಜೆಕಾರು: ಯಾವುದೇ ಕಾರಣಕ್ಕೂ ಪ್ರಾಥಮಿಕ ಸಹಕಾರಿ ಸಂಘಗಳನ್ನು ಮುಚ್ಚುವುದಿಲ್ಲ. ಅಂಥ ಸಂದರ್ಭ ಏನಾದರೂ ಬಂದರೆ ನಾನು ನನ್ನ ಹುದ್ದೆಯನ್ನು ತ್ಯಜಿಸಿಯಾದರೂ ಬೀದಿ ಹೋರಾಟ ನಡೆಸಿ ಸಹಕಾರಿ ಸಂಘಗಳನ್ನು ಉಳಿಸಿಕೊಳ್ಳಲು ಬದ್ಧ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಘೋಷಿಸಿದ್ದಾರೆ.
ಅವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 61ನೇ ಶಾಖೆಯನ್ನು ಅಜೆಕಾರುನಲ್ಲಿ ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ ಸಹಕಾರಿ ಬ್ಯಾಂಕುಗಳ ಉಳಿವಿಗೆ ಮಾರಕವಾಗಿರುವ ಸುತ್ತೋಲೆಯನ್ನು ರದ್ದುಗೊಳಿಸುವುದಕ್ಕೆ ಆಗ್ರಹಿಸಿ ರಾಜ್ಯದ ಎಲ್ಲ ಜಿಲ್ಲೆಗಳ ಕೇಂದ್ರ ಸಹಾಕರಿ ಬ್ಯಾಂಕುಗಳ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ. ಈಗಾಗಲೇ ನಬಾರ್ಡ್, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಎಲ್ಲ ಕಡೆಯಿಂದ ಸಕರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ ಎಂದರು.
ಅಜೆಕಾರಿನ ನೂತನ ಶಾಖೆಯ ಆರಂಭದಲ್ಲೇ 1 ಸಾವಿರ ಉಳಿತಾಯ ಖಾತೆಗಳು ಆರಂಭವಾಗಿ, 6 ಕೋಟಿ ಠೇವಣಿ ಸಂಗ್ರಹವಾಗಿರುವುದು ಅತ್ಯಂತ ಶ್ಲಾಘನೀಯ ವಿಚಾರ. ಸಹಕಾರಿ ಬ್ಯಾಂಕುಗಳ ಮೇಲೆ ನಂಬಿಕೆ ಇಟ್ಟಿರುವ ಅಜೆಕಾರು ಪರಿಸರದ ಜನತೆ ಅಭಿನಂದನಾರ್ಹರು ಎಂದರು.
ಅಜೆಕಾರು ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ. ಭವಾನಿ ಶಂಕರ್, ಬ್ಯಾಂಕಿನ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಭಾಸ್ಕರ ಎಸ್. ಕೋಟ್ಯಾನ್, ಎಂ. ವಾದಿರಾಜ ಶೆಟ್ಟಿ, ಅಶೋಕ್ ಕುಮಾರ್ ಜೈನ್, ಸುರೇಂದ್ರ ನಾಯಕ್, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.