ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳ ಗರಿಷ್ಠ ಸೇರ್ಪಡೆ: ಭಾಗ್ಯ ಲಕ್ಷ್ಮೀ

Vishwanath S
Updated On : 2 Dec 2013, 12:10 pm

ಮಂಗಳೂರು: 2020ರ ಸುಮಾರಿಗೆ ದೇಶದ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಗರಿಷ್ಠ ಸೇರ್ಪಡೆ ಶೇ.30ಕ್ಕಿಂತ ಜಾಸ್ತಿ ಅನುಪಾತ ತಲಪುವ ವಿಶ್ವಾಸ ಹೊಂದಿರುವುದಾಗಿ ರಾಜ್ಯ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ಪಿ.ಭಾಗ್ಯಲಕ್ಷ್ಮೀ ಹೇಳಿದ್ದಾರೆ.
ನಗರದ ಲೊಯಲಾ ಹಾಲ್‌ನಲ್ಲಿ ನಡೆಯುತ್ತಿರುವ ಐಫುಕ್ತೊ ರಾಷ್ಟ್ರೀಯ ಸಮ್ಮೇಳನದಲ್ಲಿ 2ನೇ ದಿನ ಭಾನುವಾರ '12ನೇ ಪಂಚವಾರ್ಷಿಕ ಯೋಜನೆಯ ಉಪಕ್ರಮ' ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದುವರಿದ ದೇಶದಲ್ಲಿ ಈ ಅನುಪಾತ ಶೇ.50ರಿಂದ 60ರಷ್ಟಿದೆ. ಆದರೆ ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾಗುವವರ ಸಂಖ್ಯೆ ಭಾರತದಲ್ಲಿ ಸಾಲದು ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಯುವ ದೇಶವಾಗಿದ್ದು, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣದತ್ತ ಆಕರ್ಷಿತರಾಗಬೇಕು. ಕೋಠಾರಿ ಸಮಿತಿ ವರದಿ ಪ್ರಕಾರ, ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಮೊತ್ತ ಕಾದಿರಿಸಬೇಕು. ಶಿಕ್ಷಣ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯ ಮತ್ತು ವೃತ್ತಿ ಶಿಕ್ಷಣ, ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಉನ್ನತ ಶಿಕ್ಷಣ ಗುಣಮಟ್ಟದ ಮೌಲ್ಯ ಕಾಯ್ದುಕೊಳ್ಳಲು ಸಾಧ್ಯ ಎಂದರು.
ಸರ್ಕಾರ ಮಹಿಳಾ ಕಾಲೇಜು ತೆರೆಯಲು ಆದ್ಯತೆ ನೀಡುತ್ತಿದ್ದು, ಈ ವರ್ಷ 21 ಸರ್ಕಾರಿ ಕಾಲೇಜುಗಳಿಗೆ ಸ್ವಾಯತ್ತೆ ನೀಡಲು ನಿರ್ಧರಿಸಲಾಗಿದೆ. ಸರ್ಕಾರಿ ಮಾತ್ರವಲ್ಲ ಖಾಸಗಿ ಕಾಲೇಜುಗಳಲ್ಲೂ ಗುಣಮಟ್ಟದ ಶಿಕ್ಷಣದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ಪ್ರಾದೇಶಿಕ ಕೇಂದ್ರ ಮುಖ್ಯಸ್ಥ ಪ್ರೊ.ರವಿ ಶ್ರೀವಾಸ್ತವ ದಿಕ್ಸೂಚಿ ಭಾಷಣದಲ್ಲಿ, ಉನ್ನತ ಶಿಕ್ಷಣದ ಸಮಸ್ಯೆಗಳ ಬಗ್ಗೆ ಅವಲೋಕನ ನಡೆಯಬೇಕು. ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಐಫುಕ್ತೊ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರೊ.ಮೃನ್ಮಯಿ ಭಟ್ಟಾಚಾರ್ಯ ಅಧ್ಯಕ್ಷತೆ ವಹಿಸಿದ್ದರು. ದೆಹಲಿಯ ರಾಷ್ಟ್ರೀಯ ವಿಶ್ವವಿದ್ಯಾಲಯದ ಶೈಕ್ಷಣಿಕ ಯೋಜನಾ ಮತ್ತು ಆಡಳಿತ ವಿಭಾಗ ಮುಖ್ಯಸ್ಥ ಪ್ರೊ.ಸುಧಾಂಶು ಭೂಷಣ್, ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರೊ.ಯೋಗಾನಂದ, ಸಮ್ಮೇಳನ ಸಮಿತಿ ಅಧ್ಯಕ್ಷ ಡಾ.ಎ.ಎಂ.ನರಹರಿ, ಸಂಘಟನಾ ಕಾರ್ಯದರ್ಶಿ ಡಾ.ನೋಬರ್ಟ್ ಲೋಬೋ, ಪದಾಧಿಕಾರಿಗಳಾದ ರಘುನಂದನ, ಸುರೇಶ್ ಪೂಜಾರಿ, ಮುರುಘೇಂದ್ರಪ್ಪ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement