ಸಂಪಾಜೆ-ಮಾಣಿ ಹೆದ್ದಾರಿ ಕಾಮಗಾರಿ; ಅಧಿಕಾರಿಗಳಿಂದ ಗಡುವು ವಿಸ್ತರಣೆ
ಸುಳ್ಯ: ಸಂಪಾಜೆ-ಮಾಣಿ ಹೆದ್ದಾರಿಯ ಬಾಕಿ ಇರುವ 29 ಕಿ.ಮೀ. ಕಾಮಗಾರಿಯನ್ನು ಮುಂದಿನ ಮಾರ್ಚ್ ಒಳಗೆ ಮುಕ್ತಾಯ ಮಾಡುವುದಾಗಿ ಕೆಎಆರ್‌ಡಿಸಿಎಲ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲು ಪೈಚಾರು ಹಾಗೂ ಅರಂಬೂರುಗಳಲ್ಲಿ ಕಾಮಗಾರಿ ಪ್ರಗತಿ ಪರೀಶೀಲಿಸಿದ ವೇಳೆ ಅಧಿಕಾರಿ ಬೀರೇಶ್ವರ ಬಾಬು ಈ ಭರವಸೆ ನೀಡಿದ್ದಾರೆ.
ಕಾಮಗಾರಿ ಆರಂಭವಾಗಿ 5 ವರ್ಷಗಳು ಕಳೆದಿವೆ. ಕಾಮಗಾರಿ ಮಾತ್ರ ಕುಂಟುತ್ತಾ ಸಾಗಿದೆ. ಸುಳ್ಯದಿಂದ ಪೈಚಾರ್ ವರೆಗೆ 5 ಕಿ.ಮೀ. ಕಾಮಗಾರಿ ಮಾಡಲು 5 ವರ್ಷ ಬೇಕಾ? ಎಂದು ಕಟೀಲು ಪ್ರಶ್ನಿಸಿದರು.
ಸಭೆಗಳಲ್ಲಿ ಮಾಡಿದ್ದೇನು?: ಈ ರಸ್ತೆಯ ಬಗ್ಗೆ ಕನಿಷ್ಠ 40 ಸಭೆಗಳು ನಡೆದಿವೆ. ಆದರೆ ಮಾಡಿದ್ದೇನು? ಎಂದು ಪ್ರಶ್ನಿಸಿದ ಅವರು ಕೆಎಂಸಿ (ಗುತ್ತಿಗೆದಾರ ಸಂಸ್ಥೆ) ಮುಖ್ಯಸ್ಥರು ಬಂದು ಮೀಟಿಂಗ್ ಮಾಡಿ ಒಂದು ಪೈಸೆಯ ಕೆಲಸ ಆಗಿಲ್ಲ. ಸರಿಯಾಗಿ ಕೆಲಸ ಮಾಡದಿದ್ದರೆ ನಾನೇ ಅರೆಸ್ಟ್ ಮಾಡಿಸುತ್ತೇನೆ. ಇಲ್ಲದಿದ್ದರೆ ಸಾರ್ವಜನಿಕರೇ ಬಂದು ಹೊಡೆಯುತ್ತಾರೆ. ಅದಕ್ಕೆ ಅವಕಾಶ ನೀಡಬೇಡಿ ಎಂದರು.
ಯಾವುದೇ ನೆಪ ಬೇಡ: ಬೊಳುಬೈಲಿನಲ್ಲಿ ಭೂಸ್ವಾಧೀನ ಆಗಿಲ್ಲ, ಜಲ್ಲಿ ಕೊರತೆ ಇದೆ ಎಂದು ಕೆಎಂಸಿ ಪ್ರಾಜೆಕ್ಟ್ ಮ್ಯಾನೇಜರ್ ರವಿಕುಮಾರ್ ಸಮಜಾಯಿಷಿ ನೀಡಿದರು. ಯಾವುದೇ ನೆಪ ಬೇಡ. ಇದ್ದ ಜಾಗದಲ್ಲಿ ಕೆಲಸ ಮುಂದುವರಿಸಿ ಎಂದು ಕಟೀಲ್ ಸೂಚಿಸಿದರು.
29 ಕಿ.ಮೀ. ರಸ್ತೆ ಕಾಮಗಾರಿ ಬಾಕಿ ಇದೆ. 6 ದೊಡ್ಡ ಸೇತುವೆಯಲ್ಲಿ 3 ಪ್ರಗತಿಯಲ್ಲಿದೆ. ಅಮ್ಚಿನಡ್ಕದ ಸೇತುವೆಯನ್ನು ಡಿ.30ಕ್ಕೆ, ಪೈಚಾರು ಸೇತುವೆಯನ್ನು ಜ.15ರ ಒಳಗೆ, ಅರಂಬೂರಿನಿಂದ ಸುಳ್ಯದ ವರೆಗಿನ ರಸ್ತೆಯನ್ನು 20 ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ರವಿಕುಮಾರ್ ಭರವಸೆ ನೀಡಿದರು.
ಪ್ರತಿ ದಿನ ಆಯಾ ದಿನದ ಪ್ರಗತಿ ವರದಿ ನೀಡಬೇಕು. ವಾರದ ಒಳಗೆ ಸುಳ್ಯ ಪಟ್ಟಣದ ಚರಂಡಿ ಹಾಗೂ ಪಾದಾಚಾರಿ ಮಾರ್ಗ ಸರಿಪಡಿಸಿ ಕೊಡಬೇಕು ಎಂದು ಸಂಸದರು ಸೂಚಿಸಿದರು.
ಕೆಎಂಸಿ ಅಧಿಕಾರಿ ಡಿ.ಇ. ಕಾಳೇಗೌಡ, ಅಶೋಕ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಎಪಿಎಂಸಿ ಅಧ್ಯಕ್ಷ ಜಯರಾಮ ಹಾಡಿಕಲ್ಲು, ಎ.ವಿ.ತೀರ್ಥರಾಮ, ಹರೀಶ್ ಉಬರಡ್ಕ, ಶೈಲೇಶ್ ಅಂಬೆಕಲ್ಲು, ಶಿವಾನಂದ ಕುಕ್ಕುಂಬಳ್ಳ, ಗಿರೀಶ್ ಕುಮಾರ್, ಎನ್.ಎ.ರಾಮಚಂದ್ರ ಇದ್ದರು.