ಅಬ್ದುಲ್ ರಷೀದ್, ವೈದೇಹಿ ಸೇರಿ 8 ಮಂದಿಗೆ ಸಂದೇಶ ಪ್ರಶಸ್ತಿ ಪ್ರಕಟ
ಮಂಗಳೂರು: ಕಾದಂಬರಿಗಾರ್ತಿ ವೈದೇಹಿ ಸೇರಿದಂತೆ 8 ಮಂದಿ ಸಾಧಕರಿಗೆ ಹಾಗೂ 1 ಸಂಸ್ಥೆಗೆ 2014ನೇ ಸಾಲಿನ ಸಂದೇಶ ಪ್ರಶಸ್ತಿ ಘೋಷಿಸಲಾಗಿದೆ. ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ.ನಾ. ಡಿಸೋಜ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು. 'ಕನ್ನಡ ಸಾಹಿತ್ಯ ಪ್ರಶಸ್ತಿ'ಗೆ ಕಾದಂಬರಿಗಾರ್ತಿ ವೈದೇಹಿ, ಕೊಂಕಣಿ ಸಾಹಿತ್ಯ ಪ್ರಶಸ್ತಿಗೆ ಬರಹಗಾರ ಸಿರಿಲ್ ಜಿ ಸಿಕ್ವೇರಾ, 'ಸಂದೇಶ ಕಲಾ ಪ್ರಶಸ್ತಿ'ಗೆ ಚಿತ್ರಕಾರ ಬಿ.ಕೆ.ಎಸ್. ವರ್ಮಾ, 'ಸಂದೇಶ ಮಾಧ್ಯಮ ಪ್ರಶಸ್ತಿ' ರಂಗಾಯಣದ ಮಾಜಿ ನಿರ್ದೇಶಕ ಡಾ.ಬಿ.ವಿ. ರಾಜಾರಾಮ್, 'ಸಂದೇಶ ಪತ್ರಿಕೋದ್ಯಮ ಪ್ರಶಸ್ತಿ'ಗೆ ಮಡಿಕೇರಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ ಅಬ್ದುಲ್ ರಶೀದ್, ಸಂದೇಶ ಚಲನಚಿತ್ರ ಪ್ರಶಸ್ತಿಗೆ ಚಿತ್ರ ನಿರ್ದೇಶಕ ಪಿ. ಶೇಷಾದ್ರಿ, 'ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ'ಗೆ ಲಾರೆನ್ಸ್ ಸಲ್ಡಾನ, 'ಉತ್ತಮ ಶಿಕ್ಷಕಿ ಪ್ರಶಸ್ತಿ'ಗೆ ಸಿ. ಐರಿನ್ ಮಸ್ಕರೇನಸ್ ಹಾಗೂ 1995ರಲ್ಲಿ ಸ್ಥಾಪಿಸಲ್ಪಟ್ಟ ಸಮಾಜ ಸೇವೆಯ 'ವೈಟ್ ಡಾವ್ಜ್' ಸಂಸ್ಥೆಗೆ 'ಸಂದೇಶ ವಿಶೇಷ ಪ್ರಶಸ್ತಿ' ನೀಡಲಾಗುತ್ತದೆ ಎಂದರು. ಪ್ರಶಸ್ತಿ ಪ್ರದಾನ ಸಮಾರಂಭವು ಕರ್ನಾಟಕ ಪ್ರಾಂತೀಯ ಕೆಥೋಲಿಕ್ ಧರ್ಮಾಧ್ಯಕ್ಷರ ಮಂಡಳಿ ಸಹಯೋಗದಲ್ಲಿ 2014ರ ಜ. 15 ರಂದು ಸಂಜೆ 6ಕ್ಕೆ ಪುರಭವನದಲ್ಲಿ ನಡೆಯಲಿದೆ. ಬೆಂಗಳೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಫಾ. ಬರ್ನಾಡ್ ಮೊರಾಸ್ ಪ್ರಶಸ್ತಿ ಪ್ರದಾನ ಮಾಡುವರು. ಮಂಗಳೂರು ಧರ್ಮಾಧ್ಯಕ್ಷ ಫಾ. ಅಲೋಶಿಯಸ್ ಪಾವ್ಲಾ ಡಿಸೋಜ, ಮಂಗಳೂರು ದಕ್ಷಿಣ ಶಾಸಕ ಜೆ.ಆರ್. ಲೋಬೊ, ಸಾಹಿತಿ ಜಯಂತ್ ಕಾಯ್ಕಿಣಿ ಪಾಲ್ಗೊಳ್ಳುವರು ಎಂದರು.