ಇಂದು ಸಮವಸರಣ ಪೂಜೆ
ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಂಗಳವಾರ ಸಂಜೆ 6.30ರಿಂದ ಮಹೋತ್ಸವ ಸಭಾಭವನದಲ್ಲಿ ಭಗವಾನ್ ಶ್ರೀಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾ ಕಾರ್ಯಕ್ರಮ ಹೇಮಾವತಿ ವಿ.ಹೆಗ್ಗಡೆ, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ್ತು ಕುಟುಂಬಸ್ಥರ ಮಾರ್ಗದರ್ಶನದಲ್ಲಿ ಸ್ಥಳೀಯ ಶ್ರಾವಕ ಶ್ರಾವಿಕೆಯರಿಂದ ನಡೆಯಲಿದೆ. ರಾತ್ರಿ 8ರಿಂದ ಆದಿಕವಿ ನಾಡೋಜ ಪಂಪನ ಆದಿಪುರಾಣ ಮಹಾಕಾವ್ಯದ ಆಯ್ದ ಭಾಗಗಳ ವಾಚನ ಮತ್ತು ಪ್ರವಚನ ಏರ್ಪಡಿಸಲಾಗಿದೆ. ಶಿವಮೊಗ್ಗದ ಗಮಕಿ ಗಿರಿಜಮ್ಮ ದಾಸ್ ವಾಚಿಸಲಿದ್ದು, ಉಜಿರೆ ಶ್ರೀ ಧ.ಮಂ. ಸ್ವಾಯತ್ತ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ. ಸಂಪತ್ ಕುಮಾರ್ ಪ್ರವಚನ ನೀಡಲಿದ್ದಾರೆ.
ಶಾಲಾ ವಾರ್ಷಿಕೋತ್ಸವದಲ್ಲಿ ದೇವನಿಂದನೆ; ದೂರು
ಸುಳ್ಯ: ತಾಲೂಕಿನ ಕೂತ್ಕುಂಜ ಗ್ರಾಮದ ಶಾಲೆಯ ವಾರ್ಷಿಕೋತ್ಸವದ ಸಂದರ್ಭ ಮಕ್ಕಳು 'ಆಧುನಿಕ ಇಂದ್ರ' ಎಂಬ ಕಿರುಪ್ರಹಸನ ಪ್ರದರ್ಶಿಸಿದ್ದು ಅದರಲ್ಲಿ ಹಿಂದೂ ದೇವರನ್ನು ಲೇವಡಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸ್ಥಳೀಯರಾದ ಲಕ್ಷ್ಮೀಶ ಗಬ್ಲಡ್ಕ ಎಂಬವರು ಎಸ್.ಡಿ.ಎಂ.ಸಿ. ಅಧ್ಯಕ್ಷ ವೆಂಕಟೇಶ್ವರ ಜೋಯಿಸರ ವಿರುದ್ಧ ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳು ಪ್ರದರ್ಶಿಸಿದ ಆಧುನಿಕ ಇಂದ್ರ ಕಿರು ಪ್ರಹಸನದಲ್ಲಿ ತಪೋನಿರತ ವಿಶ್ವಾಮಿತ್ರನನ್ನು ಇಂದ್ರ ಮೊಬೈಲ್ ಫೋನ್ ಮೂಲಕ, ಸೈಕಲ್ ಪಂಪ್ನಿಂದ ಹಿಂಬದಿಗೆ ಗಾಳಿ ತುಂಬಿಸುವ ಮೂಲಕ ಮತ್ತು ಅರೆನಗ್ನ ನೃತ್ಯದ ಮೂಲಕ ಎಬ್ಬಿಸಲು ಪ್ರಯತ್ನಿಸುವ ದೃಶ್ಯ ಸಂಯೋಜನೆ ಇತ್ತೆನ್ನಲಾಗಿದೆ. ಇದನ್ನು ಲಕ್ಷ್ಮೀಶರು ಸ್ಥಳದಲ್ಲೇ ವಿರೋಧಿಸಿದ್ದು, ಪರಿಣಾಮವಾಗಿ ಶಾಲಾ ಅಧ್ಯಾಪಕರು ವಿಷಾದ ವ್ಯಕ್ತಪಡಿಸಿದ್ದರು. ವಿಷಾದ ವ್ಯಕ್ತ ಪಡಿಸಿದ ವಿಧಾನ ಸರಿಯಾಗಿಲ್ಲವೆಂದು ಲಕ್ಷ್ಮೀಶ ಅತೃಪ್ತಿ ವ್ಯಕ್ತಪಡಿಸಿದ್ದು, ಅವರು ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಅನಿಲ್ ಕುಮಾರ್ ಆಯ್ಕೆ
ಮೂಲ್ಕಿ: ಕಟೀಲು ನಂದಿನಿ ಯುವಕ ವೃಂದದ 2013-14ನೇ ಸಾಲಿನ ಅಧ್ಯಕ್ಷರಾಗಿ ಅನಿಲ್ ಕುಮಾರ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಕಿರಣ್ ಶೆಟ್ಟಿ, ಕಾರ್ಯದರ್ಶಿ ಅಭಿಲಾಷ್ ಶೆಟ್ಟಿ, ಜೊತೆ ಕಾರ್ಯದರ್ಶಿ ರವೀಶ್ ಶೆಟ್ಟಿ, ಹರೀಶ್ ಆಚಾರ್ಯ, ಕೋಶಾಧಿಕಾರಿ ಸನೋಜ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ದೇವಿಪ್ರಸಾದ್, ಸಾಂಸ್ಕೃತಿಕ ಕಾರ್ಯದರ್ಶಿ ಸಂದೇಶ್ ಶೆಟ್ಟಿ, ಗೌರವ ಸಲಹೆಗಾರರಾಗಿ ಈಶ್ವರ್ ಕಟೀಲು, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು ಹೊಸಮನೆ.
ನೀರು ಒದಗಿಸುವಂತೆ ನೆಕ್ಕಿಲಾಡಿ ಗ್ರಾ.ಪಂ.ಗೆ ಸ್ಥಳೀಯರಿಂದ 24 ಗಂಟೆ ಗಡುವು
ಉಪ್ಪಿನಂಗಡಿ: ನೇತ್ರಾವತಿ, ಕುಮಾರಾಧಾರ ನದಿ ದಡದಲ್ಲಿದ್ದರೂ 34 ನೇ ನೆಕ್ಕಿಲಾಡಿ ಗ್ರಾಮದ ಸಂತೆ ಮಜಲಿನ ಪರಿಸರ ಹಾಗೂ ಬೋಳಂತಿಲ ಪರಿಸರದ ನಿವಾಸಿಗರಿಗೆ ಕಳೆದ 12 ದಿನಗಳಿಂದ ಕುಡಿಯಲು ನೀರಿಲ್ಲ. ಈ ಬಗ್ಗೆ ಪಂಚಾಯಿತಿ ಆಡಳಿತ ಸತತ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ ಸ್ಥಳೀಯರ ತಂಡ 24 ಗಂಟೆಯೊಳಗೆ ನೀರು ಸರಬರಾಜು ಆಗದಿದ್ದರೆ ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸೋಮವಾರ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜೊತೆ ಮಾತುಕತೆ ಮಾಡಿದ ಸ್ಥಳೀಯ ನಿವಾಸಿಗರ ನಿಯೋಗ, 24 ಗಂಟೆಯೊಳಗೆ ನೀರು ಸರಬರಾಜು ಆಗದಿದ್ದರೆ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.
ನಿಯೋಗದಲ್ಲಿ ಸ್ಥಳೀಯ ನಿವಾಸಿಗರಾದ ಸಿರಾಜ್ ನೆಕ್ಕಿಲಾಡಿ, ಮುಸ್ತಾಫ ಜಿ.ಎಂ., ಸೆಲೀಮ್ ನೆಕ್ಕಿಲಾಡಿ, ಶಬೀರ್ ನೆಕ್ಕಿಲಾಡಿ, ಹನೀಫ್ ನೆಕ್ಕಿಲಾಡಿ, ಫಯಾಝ್ ನೆಕ್ಕಿಲಾಡಿ ಇದ್ದರು.
ಮದನಿ ಬಿಡುಗಡೆಗೆ ಆಗ್ರಹ: ಇಂದು ಪ್ರತಿಭಟನೆ
ಮಂಗಳೂರು: ವಿವಿಧ ರೋಗಗಳಿಂದ ಬಳಲುತ್ತಿರುವ ಮದನಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಕಾಸರಗೋಡು ಪೀಪಲ್ ಡೆಮಾಕ್ರೆಸಿ ಪಾರ್ಟಿ(ಪಿಡಿಪಿ) ಡಿ. 3 ರಂದು ಮಧ್ಯಾಹ್ನ 3ಕ್ಕೆ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಲಿದೆ.
ಬೆಂಗಳೂರು ಪರಪ್ಪನ ಅಗ್ರಹಾರದಲ್ಲಿ ಮೂರುವರೆ ವರ್ಷಗಳಿಂದ ಸೆರೆಮನೆ ವಾಸ ಅನುಭವಿಸುತ್ತಿರುವ ಕಾಸರಗೋಡು ಪೀಪಲ್ ಡೆಮಾಕ್ರೆಸಿ ಪಾರ್ಟಿ ಅಧ್ಯಕ್ಷ ಮದನಿ ವಿವಿಧ ರೋಗಗಳಿಂದ ಬಳಲುತ್ತಿದ್ದಾರೆ.
ಇದರ ಪರಿಣಾಮ ಈಗಾಗಲೇ ತಮ್ಮ ಬಲಕಣ್ಣಿನ ದೃಷ್ಟಿ ಹೀನವಾಗಿದೆ. ಮದನಿಯ ಸೂಕ್ತ ಚಿಕಿತ್ಸೆಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದರೂ, ಕರ್ನಾಟಕ ಸರ್ಕಾರ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಪಿಡಿಪಿ ರಾಜ್ಯ ಕಾರ್ಯದರ್ಶಿ ಎಸ್.ಎಂ. ಬಶೀರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಪ್ರತಿಭಟನೆಯನ್ನು ಮಾನವ ಹಕ್ಕುಗಳ ಹೋರಾಟಗಾರ ವಿ.ಟಿ. ರಾಜಶೇಖರ್ ಉದ್ಘಾಟಿಸುವರು.
ಧರ್ಮಗುರುಗಳಾದ ಮಾರ್ ಬುಸೋಲಿಯಾಸ್ ಮಾರ್ತೋಮಾ ಪ್ರತಮನ್ ಕೆತೋಲಿಕ್ ಬಾವ, ವಿಶ್ವ ಬದ್ರಾನಂದ ಬೋಧಿ ಸ್ವಾಮಿ, ಸಯ್ಯದ್ ಆತೂರ್ ತಂಙಳ್, ಸಾಮಾಜಿಕ ಸಂಘಟನೆ ಮುಖಂಡ ಟಿ.ಎಂ. ಶಹೀದ್, ಮುಸ್ಲಿಂ ಜಮಾಅತ್ ಕೌನ್ಸಿಲ್ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ ಪಾಲ್ಗೊಳ್ಳುವರು ಎಂದರು.
ಬಳ್ಳಮಂಜ ದೇವಳ: ಇಂದಿನಿಂದ ಷಷ್ಠಿ ಮಹೋತ್ಸವ
ಬೆಳ್ತಂಗಡಿ: ಬಳ್ಳಮಂಜ ಶ್ರೀಅನಂತೇಶ್ವರ ಸ್ವಾಮಿ ದೇವರ ಷಷ್ಠಿ ಮಹೋತ್ಸವ ಡಿ.3ರಿಂದ 9ರವರೆಗೆ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವರ ಸನ್ನಿಧಿಯಲ್ಲಿ ನಡೆಯಲಿದೆ.
ಡಿ.7ರಂದು ಬೆಳಗ್ಗೆ ಕೊಪ್ಪರಿಗೆ ಮುಹೂರ್ತ, ಅಂಗಪ್ರದಕ್ಷಿಣೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ, ಪಂಚಮಿ ಉತ್ಸವ ನಡೆಯಲಿದೆ.
ಡಿ.8ರಂದು ಬೆಳಗ್ಗೆ 7ರಿಂದ ಷಷ್ಠಿ ಉತ್ಸವ, ಮಧ್ಯಾಹ್ನ 11ಕ್ಕೆ ಬ್ರಹ್ಮ ರಥೋತ್ಸವ, ಅಪರಾಹ್ನ 12.30ಕ್ಕೆ ಮಹಾಪೂಜೆ, ಮಧ್ಯಾಹ್ನ 1ರಿಂದ ಮಹಾ ಅನ್ನಸಂತರ್ಪಣೆ, ರಾತ್ರಿ 7ರಿಂದ ಅತ್ತಾಳೆ ಪೂಜೆ, ದರ್ಶನ ಬಲಿ ನಡೆಯಲಿದೆ. ಡಿ.9ರಂದು ಮಹಾ ಸಂಪ್ರೋಕ್ಷಣೆ, ಮಹಾ ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ.
ಡಿ.12ರಂದು ನೂತನ ಒಳಸುತ್ತು ಕಾಮಗಾರಿಯನ್ನು ಪ್ರಾರಂಭಿಸಲಿದ್ದು, ಅನುಜ್ಞಾ ಕಲಶ ನಡೆಯಲಿದೆ. ಡಿ.19ರಂದು ಬ್ರಹ್ಮಶ್ರೀ ದೇರೆಬೈಲು ಹರಿಕೃಷ್ಣ ತಂತ್ರಿ ನೇತೃತ್ವದಲ್ಲಿ ಬ್ರಹ್ಮಶ್ರೀ ಕೇಶವ ಜೋಗಿತ್ತಾಯ, ಶಾಸಕ ಕೆ.ವಸಂತ ಬಂಗೇರ ಉಪಸ್ಥಿತಿಯಲ್ಲಿ ನೂತನ ಒಳಸುತ್ತು ಪೌಳಿಯ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ ಡಾ.ಎಂ.ಹರ್ಷ ಸಂಪಿಗೆತ್ತಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲಿಪಾದೆ ಚರ್ಚ್ ಅಮೃತೋತ್ಸವ ಇಂದು
ಬಂಟ್ವಾಳ: ಅಲ್ಲಿಪಾದೆ ಸಂತ ಅಥೋನಿ ಚರ್ಚ್ನ 75ನೇ ವರ್ಷದ ಅಮೃತೋತ್ಸವ ಕಾರ್ಯಕ್ರಮ ಮಂಗಳವಾರ ಅಲ್ಲಿಪಾದೆ ಚರ್ಚ್ನಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಎಲೋಸಿಯೆಸ್ ಪಾವ್ಲ ಡಿ' ಸೋಜಾ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಮೊಡಂಕಾಪು ಚರ್ಚ್ನ ಧರ್ಮಗುರು ಮ್ಯಾಕ್ಸಿಮ್ ನೊರೊನ್ಹಾ , ಆಗ್ರಾರ್ ಚರ್ಚ್ನ ಧರ್ಮಗುರು ಬೆಂಜಮಿನ್ ಪಿಂಟೋ, ಸರಪಾಡಿ ಗ್ರಾ.ಪಂ. ಅಧ್ಯಕ್ಷ ಧನಂಜಯ ಶೆಟ್ಟಿ, ನಾವೂರು ಗ್ರಾ.ಪಂ. ಅಧ್ಯಕ್ಷ ಬೇಬಿ ಸುವರ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅಲ್ಲಿಪಾದೆ ಚರ್ಚ್ನ ಧರ್ಮಗುರು ಗ್ರೆಗರಿ ಪಿರೇರಾ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ತೂಗುಸೇತುವೆ ಸರದಾರ ಗಿರೀಶ್ ಭಾರದ್ವಾಜಗೆ ಸೀನಿಯರ್ ಸಿಟಿಜನ್ ಪ್ರಶಸ್ತಿ
ಸುಳ್ಯ: ತೂಗು ಸೇತುವೆಗಳ ಸರದಾರ ಸುಳ್ಯದ ಗಿರೀಶ್ ಭಾರದ್ವಾಜ ಅವರು ಸಿಎನ್ಎನ್ ಐಬಿಎನ್ ಸಂಸ್ಥೆಯವರು ಕೊಡಮಾಡುವ ಸೀನಿಯರ್ ಸಿಟಿಜನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಗೆ ದೇಶದಲ್ಲಿ 12 ಮಂದಿ ಆಯ್ಕೆಯಾಗಿದ್ದು, ಸುಳ್ಯದ ಗಿರೀಶ್ ಭಾರದ್ವಾಜ್ ಒಬ್ಬರಾಗಿದ್ದಾರೆ. ತೂಗುಸೇತುವೆಗಳ ಸರದಾರರೆಂದೇ ಖ್ಯಾತರಾಗಿರುವ ಗಿರೀಶ್ ಭಾರದ್ವಾಜ ಅವರು ನಿರ್ಮಿಸುತ್ತಿರುವ 123ನೇ ತೂಗು ಸೇತುವೆ ಒಡಿಶಾದ ರಾಯಿಗಢ ಜಿಲ್ಲೆಯಲ್ಲಿ ನಿರ್ಮಾಣಗೊಳ್ಳುತ್ತಿದೆ.