ಜಿಗುಪ್ಸೆ; ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಕಾರ್ಕಳ: ಜೀವನದಲ್ಲಿ ಬೇಸತ್ತು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಪಳ್ಳಿ ಗ್ರಾಮದ ಜಂಕ್ಷನ್ ಬಳಿಯಿರುವ ಹಳೆ ಕಟ್ಟದದಲ್ಲಿ ಭಾನುವಾರ ನಡೆದಿದೆ. ಸುಧೀರ್ (25) ಮೃತರು. ಇವರು ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ಜಂಕ್ಷನ್ ಬಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಕೆಲಸಗಾರರು ಉಳಿದುಕೊಳ್ಳಲು ಇದ್ದ ನಾರಾಯಣ ಪೈಗೆ ಸೇರಿದ ಹಳೆ ಕಟ್ಟಡದ ಮೊದಲು ಮಹಡಿಯಲ್ಲಿ ಯಾವುದೋ ಕಾರಣಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ ವ್ಯವಹಾರ; ಆರೋಪಿ ಸೆರೆ
ಬ್ರಹ್ಮಾವರ: ಇಲ್ಲಿನ ಚಾಂತಾರು ಗ್ರಾಮದ ಮೀನು ಮಾರ್ಕೆಟ್ ಬಳಿ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿ ಮಟ್ಕಾ ಚೀಟಿ ನಡೆಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಘಟನೆ ಭಾನುವಾರ ನಡೆದಿದೆ. ಆರೋಪಿ ಶರತ್ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಚೀಟಿ ನಡೆಸುತ್ತಿದ್ದಾನೆಂಬ ಖಚಿತ ಮಾಹಿತಿ ಪಡೆದ ಬ್ರಹ್ಮಾವರ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ನಗದು ರು. 1030 ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪತಿಯಿಂದ ಹಲ್ಲೆ ಆರೋಪ; ಮಹಿಳೆ ಆಸ್ಪತ್ರೆಗೆ
ಸುಳ್ಯ: ಪತಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಮಹಿಳೆ ತನ್ನ ಪುಟ್ಟ ಮಗುವಿನೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ದೊಡ್ಡತೋಟ ಎಂಬಲ್ಲಿ ಸಂಭವಿಸಿದೆ. ಧರ್ಮಸ್ಥಳ ಬಳಿಯ ಕಳೆಂಜ ಕುತ್ತೋಡಿ ದಿ. ಕೃಷ್ಣಪ್ಪ ಗೌಡರ ಪುತ್ರಿ ಸುಮತಿ (38) ಆಸ್ಪತ್ರೆಗೆ ದಾಖಲಾದವರು. ತನ್ನನ್ನು ಎರಡು ವರ್ಷದ ಹಿಂದೆ ಸುಳ್ಯ ತಾಲೂಕು ದೊಡ್ಡತೋಟ ದಿ.ಚೆನ್ನಪ್ಪ ಮೇರ್ಕಜೆ ಅವರ ಪುತ್ರ ರಾಮಚಂದ್ರ ಗೌಡಗೆ ವಿವಾಹ ಮಾಡಿಕೊಡಲಾಗಿತ್ತು. ಮೊದಲು ಚೆನ್ನಾಗಿಯೇ ಇದ್ದ ಅವರು ದಿನ ಕಳೆಯುತ್ತಿದ್ದಂತೆ ಕುಡಿದು ಬಂದು ವಿನಾ ಕಾರಣ ಹಲ್ಲೆ ನಡೆಸಲಾರಂಭಿಸಿದರು. ಇದು ವಿಪರೀತವಾದ ಹಿನ್ನಲೆಯಲ್ಲಿ ತಿಂಗಳ ಹಿಂದೆ ತನ್ನ ತವರು ಮನೆಗೆ ಬಂದೆ. ಅನಂತರ ತನ್ನ ಅಣ್ಣ ಹಿರಿಯರೊಂದಿಗೆ ಸೇರಿ ನಡೆಸಿದ ಮಾತುಕತೆಯ ಬಳಿಕ ಗಂಡನ ಮನೆಗೆ ತೆರಳಿದೆ. ಸ್ವಲ್ಪ ದಿನ ಕಡಿಮೆಯಾಗಿದ್ದ ಇವರ ಉಪಟಳ ಇದೀಗ ಮತ್ತೆ ವಿಪರೀತವಾಗಲಾರಂಭಿಸಿದ್ದು ನ.27ರಂದು ಮಧ್ಯಾಹ್ನ ಮರದ ತುಂಡಿನಿಂದ ತನ್ನ ಮುಖ, ಕುತ್ತಿಗೆ ಹಾಗೂ ತಲೆಗೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ತಾನು ಮಗುವಿನೊಂದಿಗೆ ತನ್ನ ತಾಯಿ ಮನೆಗೆ ತೆರಳಿ ಅಣ್ಣನೊಂದಿಗೆ ಬಂದು ಆಸ್ಪತ್ರೆಗೆ ದಾಖಲಾದೆ ಎಂದು ಪುತ್ತೂರು ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಕಾಡಿಗೆ ನುಗ್ಗಿದ ಜೀಪ್
ವಿಟ್ಲ: ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಡಿಗೆ ನುಗ್ಗಿದ ಘಟನೆ ಕಾಂತಡ್ಕ ಸಮೀಪ ಸೋಮವಾರ ರಾತ್ರಿ ಸಂಭವಿಸಿದೆ. ಅಳಿಕೆ ಗ್ರಾಮದ ಕಲ್ಲಜೇರು ನಿವಾಸಿ ಸೂರ್ಯನಾರಾಯಣ ಭಟ್ ಅವರು ವಿಟ್ಲ ಕಡೆಯಿಂದ ತನ್ನ ಪುತ್ರ ಆಕಾಶ್ ಎಂಬವರನ್ನು ಕರೆದುಕೊಂಡು ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಕನ್ಯಾನ ರಸ್ತೆಯ ಕಾಂತಡ್ಕ ಅಪಾಯಕಾರಿ ತಿರುವಿನಲ್ಲಿ ನಿಯಂತ್ರಣ ಕಳೆದು ಈ ಘಟನೆ ಸಂಭವಿಸಿದೆ. ಜೀಪು ರಸ್ತೆಯ ಬದಿಯಲ್ಲಿದ್ದ ಮರಕ್ಕೆ ಸಿಕ್ಕಿಹಾಕಿಕೊಂಡ ಪರಿಣಾಮ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ. ರಾತ್ರಿ ವೇಳೆ ಜೆಸಿಬಿ ಮೂಲಕ ಜೀಪನ್ನು ತೆರವುಗೊಳಿಸಲಾಯಿತು.
ಆತ್ಮಹತ್ಯೆ ಯತ್ನ
ಮೂಲ್ಕಿ: ನೆರೆಮನೆಯವರ ಅಡ್ಡಿಯಿಂದ ವಿದ್ಯುತ್ ಸಂಪರ್ಕ ವಂಚಿತ ವ್ಯಕ್ತಿ ಸೀಮೆಎಣ್ಣೆ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೂಲ್ಕಿ ಕೆ.ಎಸ್.ರಾವ್ ನಗರದಲ್ಲಿ ಸೋಮವಾರ ನಡೆದಿದೆ. ಕೆ.ಎಸ್.ರಾವ್ ನಗರದ ನಿವಾಸಿ ವಿಠಲ (35) ಬಡವನಾಗಿದ್ದು ಮನೆಗೆ ವಿದ್ಯುತ್ ಸಂಪರ್ಕಕ್ಕೆ ಹಲವಾರು ಸಮಯಗಳಿಂದ ಪ್ರಯತ್ನಿಸುತ್ತಿದ್ದರು. ನೆರೆಮನೆಯವನ ಅಡ್ಡಿಯಿಂದಾಗಿ ವಿದ್ಯುತ್ ಸಂಪರ್ಕದಿಂದ ವಂಚಿತನಾಗಿದ್ದ ಎನ್ನಲಾಗಿದ್ದು, ಇದರಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆಗೊಂಡು ಸೀಮೆಎಣ್ಣೆ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು ಕೂಡಲೇ ಸ್ಥಳೀಯರು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.