ದಿವ್ಯಪ್ರಭಾಗೆ ಮಣೆ: ಸುಳ್ಯ ಕಾಂಗ್ರೆಸ್ನಲ್ಲಿ ಅಸಮಾಧಾನದ ಹೊಗೆ
ಸುಳ್ಯ: ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ವ್ಯಾಪ್ತಿಗೆ ಬರುವ ಕೇಂದ್ರ ಸಮಾಜ ಕಲ್ಯಾಣ ಮಂಡಳಿ ಅಧೀನದ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ನೂತನ ಅಧ್ಯಕ್ಷರಾಗಿ ಸುಳ್ಯ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ನೇಮಕಗೊಂಡಿದ್ದಾರೆ ಎನ್ನಲಾಗಿದ್ದು, ಸುಳ್ಯ ಕಾಂಗ್ರೆಸ್ನಲ್ಲಿ ಅಸಮಾಧಾನದ ಗಾಳಿ ಬಲವಾಗಿ ಬೀಸಿದೆ. ಕೆಲವು ಮುಖಂಡರು ಸಾಮೂಹಿಕ ರಾಜಿನಾಮೆಯ ಎಚ್ಚರಿಕೆಯನ್ನೂ ನೀಡಿದ್ದಾರೆ.
ರಾಜ್ಯ ಸಮಾಜ ಕಲ್ಯಾಣ ಮಂಡಳಿಗೆ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಿನೋದಾ ನಟರಾಜ್ ಅಧ್ಯಕ್ಷರಾಗಿದ್ದರು. ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪ್ರಸ್ತಾವನೆ ಹೋಗಿ, ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ದಿವ್ಯಪ್ರಭ ಹೆಸರು ಶಿಫಾರಸುಗೊಂಡು ಅಂತಿಮ ಪತ್ರ ಬಂದಿದೆ ಎನ್ನಲಾಗಿದೆ.
ಅಧಿಕೃತ ನೇಮಕಾತಿ ಆದೇಶ ಕೈ ಸೇರಿದ ಕೂಡಲೆ ಸಾಂಕೇತಿಕವಾಗಿ ಅಧಿಕಾರ ವಹಿಸಿಕೊಂಡು, ಬುಧವಾರ ಅಧಿಕಾರ ವಹಿಸಿ ಕೊಳ್ಳುವ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ.
ಸುಳ್ಯ ನಾಯಕರಿಗೆ ಅಚ್ಚರಿ: ದಿವ್ಯಪ್ರಭಾ ಚಿಲ್ತಡ್ಕಗೆ ರಾಜ್ಯಮಟ್ಟದ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷತೆ ದೊರೆತಿರುವ ಸುದ್ದಿ ಹರಡಿ ತಾಲೂಕು ಕಾಂಗ್ರೆಸ್ ವಲಯ ಅಚ್ಚರಿಗೊಳ್ಳತೊಡಗಿದೆ.
ದಿವ್ಯಪ್ರಭಾ ಒಂದೂವರೆ ವರ್ಷದ ಹಿಂದೆ ಮಹಿಳಾ ಕಾಂಗ್ರೆಸ್ ತಾಲೂಕು ಅಧ್ಯಕ್ಷರಾದ ಬಳಿಕ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಪರಿಚಿತರಾದವರು. ಮಂಡ್ಯದ ಕಾಂಗ್ರೆಸ್ ನಾಯಕ ಎಲ್.ಆರ್. ಶಿವರಾಮೇ ಗೌಡರ ಸಮೀಪದ ಬಂಧು. ಈ ಸಂಬಂಧದ ಹಿನ್ನೆಲೆಯಲ್ಲಿ ಅವರು ಬಹುಬೇಗ ಕಾಂಗ್ರೆಸ್ ನಾಯಕರ ಸಂಪರ್ಕ ಬೆಳೆಸಿಕೊಂಡಿದ್ದರಲ್ಲದೆ ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಪುತ್ತೂರಿನಿಂದ ಶಾಸಕ ಅಭ್ಯರ್ಥಿಯಾಗಲು ಟಿಕೆಟ್ ಬಯಸಿ ಅವರು ದೆಹಲಿಗೂ ಹೋಗಿದ್ದರು. ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷರಾಗಲು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ದಿವ್ಯಪ್ರಭಾಗೆ ಪೂರ್ಣ ಸಹಕಾರ ನೀಡಿದ್ದರೆನ್ನಲಾಗಿದೆ.
ಅಸಮಾಧಾನ ಸ್ಫೋಟ: ಈ ನೇಮಕಕ್ಕೆ ಸುಳ್ಯ ತಾಲೂಕಿನ ಹಲವು ಕಾಂಗ್ರೆಸ್ ನಾಯಕರು ಮತ್ತು ಮಹಿಳಾ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ನಮ್ಮ ಭಾವನೆಗಳನ್ನು ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳದಿದ್ದರೆ ಸಾಮೂಹಿಕ ರಾಜಿನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯೆ ರಾಜೀವಿ ರೈ ಮತ್ತು ಜಿ.ಪಂ. ಮಾಜಿ ಸದಸ್ಯ ಭರತ್ ಮುಂಡೋಡಿ, ಈ ನೇಮಕ ಪ್ರಕ್ರಿಯೆ ವಿರುದ್ಧ ಕಿಡಿಕಾರಿದರು. ಬೆಂಗಳೂರು ಹಾಗೂ ದೆಹಲಿಗಳಲ್ಲಿ ನಾಯಕರ ಸುತ್ತ ಸುತ್ತಿ ಪ್ರಭಾವ ಬೀರಿ ಸ್ಥಾನ ಪಡೆದುಕೊಳ್ಳುವ ಮತ್ತು ಕೊಡುವ ಕ್ರಮ ಸರಿಯಲ್ಲ. ಇದರಿಂದಾಗಿ ಪಕ್ಷಕ್ಕೆ ನಿಷ್ಠಾವಂತರಾಗಿ, ಪ್ರಾಮಾಣಿಕರಾಗಿ ದುಡಿಯುವವರಿಗೆ ಬೆಲೆ ಇಲ್ಲದಂತಾಗುತ್ತದೆ. ನಮ್ಮ ಭಾವನೆಯನ್ನು ನಾಯಕರು ಅರ್ಥ ಮಾಡಿಕೊಳ್ಳದಿದ್ದರೆ ನಮ್ಮ ದಾರಿ ನಾವು ಹಿಡಿಯುತ್ತೇವೆ. ಅನಿವಾರ್ಯವಾದರೆ ಪಕ್ಷದ ಹುದ್ದೆಗಳಿಗೆ ಸಾಮೂಹಿಕ ರಾಜಿನಾಮೆಯನ್ನೂ ನೀಡುತ್ತೇವೆ ಎಂದು ಎಚ್ಚರಿಸಿದರು.
ಜಿ.ಪಂ. ಸದಸ್ಯೆ ಸರಸ್ವತಿ ಕಾಮತ್, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ವಿಮಲಾ ರಂಗಯ್ಯ, ಮಾಜಿ ಜಿ.ಪಂ. ಸದಸ್ಯ ಚಂದ್ರಶೇಖರ ಕಾಮತ್, ತಾ.ಪಂ. ಸದಸ್ಯರಾದ ಅನಿಲ್ ರೈ ಬೆಳ್ಳಾರೆ, ತಾರಾ ಮಲ್ಲಾರ, ಜಯಂತಿ ತೊಡಿಕಾನ, ರಾಜೀವಿ ಉದ್ದಂಪಾಡಿ, ಕಾಂಗ್ರೆಸ್ ನಾಯಕರಾದ ವಿಠಲ್ದಾಸ್, ಕಂದಸ್ವಾಮಿ, ಸಚಿನ್ರಾಜ್ ಶೆಟ್ಟಿ ಪೆರುವಾಜೆ, ಶಶಿಕಲಾ ದೇರಪ್ಪಜ್ಜನಮನೆ, ಮೀನಾಕ್ಷಿ ಅಡ್ಡಬೈಲು, ರಾಜೀವಿ ರೈ ಎಣ್ಮೂರು, ಅನುಸೂಯ ಬೆಳ್ಳಾರೆ, ಸುಜಯ, ಯಮುನಾ, ಕಾಂತಿಮೋಹನ್ ಇದ್ದರು.
ಹುದ್ದೆ ರದ್ದು ಸಂಭವ?: ಈ ಮಧ್ಯೆ ದಿವ್ಯಪ್ರಭಾ ನೇಮಕದ ಅಸಮಾಧಾನದ ಧ್ವನಿ ರಾಜಧಾನಿಯನ್ನೂ ಮುಟ್ಟಿದ್ದು, ಅವರ ನೇಮಕ ಪ್ರಕ್ರಿಯೆ ರದ್ದುಗೊಳ್ಳುವ ಸಂಭವವಿದೆ ಎನ್ನಲಾಗಿದೆ.
ಬ್ಲಾಕ್ ಕಾಂಗ್ರೆಸ್ ಸ್ವಾಗತ: ನಾಯಕರ ಕೋಪ
ದಿವ್ಯಪ್ರಭಾ ಚಿಲ್ತಡ್ಕ ನೇಮಕವನ್ನು ಕೆಲವು ದಿನಗಳ ಹಿಂದಷ್ಟೇ ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಸ್ವಾಗತಿಸಿದ್ದರು. ಜಿಲ್ಲೆಗೆ ದೊರೆತ ಈ ಅಪರೂಪದ ಹುದ್ದೆಯಿಂದ ಎಲ್ಲರಿಗೂ ಸಂತೋಷವಾಗಿದೆ. ನಾವು ಇದನ್ನು ಸ್ವಾಗತಿಸುವುದಾಗಿ ತಿಳಿಸಿದ್ದರು. ಅವರ ಹೆಸರನ್ನು ಶಿಫಾರಸು ಮಾಡಿದ್ದೀರಾ ಎಂಬ ಪ್ರಶ್ನೆಗೆ, 'ನಾವು ಶಿಫಾರಸು ಪತ್ರ ಕೇಳಿದ ಎಲ್ಲರಿಗೂ ನೀಡಿದ್ದೇವೆ' ಎಂದು ಪ್ರತಿಕ್ರಿಯಿಸಿದ್ದರು. ಅವರ ಈ ಮಾತನ್ನು ಕಾಂಗ್ರೆಸ್ ನಾಯಕರಾದ ಭರತ್ ಮುಂಡೋಡಿ, ಚಂದ್ರಶೇಖರ ಕಾಮತ್ ಮತ್ತು ಸರಸ್ವತಿ ಕಾಮತ್ ಖಂಡಿಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಇಂತಹ ಮಾತು ಹೇಳಬಾರದು. ಶಿಫಾರಸು ಪತ್ರ ಎಲ್ಲರಿಗೂ ಬೇಕಾಬಿಟ್ಟಿ ಕೊಡುವಂಥದ್ದಲ್ಲ. ಕೋರ್ ಕಮಿಟಿಯಲ್ಲಿ ಯಾರ ಹೆಸರು ಅಂತಿಮವಾಗುತ್ತದೆ ಅವರಿಗೆ ನೀಡಬೇಕಾದುದು ಎಂದು ಹೇಳಿದರು.