ವರದಿಗಾರ್ತಿಗೆ ಲೈಂಗಿಕ ಕಿರುಕುಳ: ಇಬ್ಬರ ಸೆರೆ
ಮಂಗಳೂರು: ನಗರದ ವೆಬ್ಸೈಟ್ ಪತ್ರಕರ್ತೆಯೊಬ್ಬರಿಗೆ ಭಾನುವಾರ ರಾತ್ರಿ ಲೈಂಗಿಕ ಕಿರುಕುಳ ನೀಡಿದ ಇಬ್ಬರು ಆರೋಪಿಗಳನ್ನು ಕದ್ರಿ ಪೊಲೀಸರು ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗರೋಡಿ ನಿವಾಸಿಗಳಾದ ಜಾಕ್ಸನ್ ಮತ್ತು ಡೆನ್ವರ್ ಬಂಧಿತ ಆರೋಪಿಗಳು. ಮಂಗಳೂರಿನ ವೆಬ್ಸೈಟ್ವೊಂದರಲ್ಲಿ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಯುವತಿಯೊಬ್ಬರು ಭಾನುವಾರ ರಾತ್ರಿ ಸುಮಾರು 9 ಗಂಟೆ ವೇಳೆಗೆ ಆಗ್ನೇಸ್ ಕಾಲೇಜ್ ಬಳಿ ಇರುವ ಪಿಜಿಗೆ ಮರಳುತ್ತಿದ್ದರು. ಆಗ ಬೈಕ್ವೊಂದರಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ ಕೈ ಹಿಡಿದು ಎಳೆದಿದ್ದರು. ಮುಂದಿನ ಅಪಾಯ ಅರಿತ ಪತ್ರಕರ್ತೆ ಬೊಬ್ಬೆ ಹೊಡೆದಾಗ ಸುತ್ತಮುತ್ತ ಇದ್ದವರು ಸ್ಥಳದಲ್ಲಿಯೇ ಜಮಾಯಿಸಿದರು. ಈ ಪರಿಣಾಮ ಆರೋಪಿಗಳು ತಮ್ಮ ಬೈಕ್ ಅನ್ನು ಅಲ್ಲಿಯೇ ಬಿಟ್ಟು ಕಾಲ್ಕಿತ್ತಿದ್ದರು.
ಬೈಕ್ನ ನೋಂದಣಿ ಸಂಖ್ಯೆ ಆಧರಿಸಿ ಸಾರ್ವಜನಿಕರು ಆರೋಪಿಯೊಬ್ಬನ ಮನೆ ಪತ್ತೆ ಹಚ್ಚಿ ಆತನ ಮನೆಯವರೆಗೂ ಹೋಗಿದ್ದರು. ಅಲ್ಲದೆ, ಮತ್ತೊಬ್ಬನನ್ನು ಒಬ್ಬಾತನನ್ನು ಹಿಡಿದು ವಾಪಸ್ ಆಗ್ನೇಸ್ ಕಾಲೇಜಿನವರೆಗೆ ಎಳೆದು ತಂದು ಚೆನ್ನಾಗಿ ತದಕಿದ್ದರು. ಬಳಿಕ ಪತ್ರಕರ್ತೆಯೂ ಅವನಿಗೆ ಬೈದು ಬುದ್ಧಿವಾದ ಹೇಳಿದ್ದು ಆತ ಕ್ಷಮಾಪಣೆ ಕೇಳಿದ್ದ.
ಆರೋಪಿ ಪರ ವಕಾಲತ್ತು: ಈ ವೇಳೆ ಮಹಿಳೆಯೊಬ್ಬರು ಅಲ್ಲಿಗೆ ಬಂದು ಆರೋಪಿ ಪರವಾಗಿ ಮಾತನಾಡಿ, ಯುವಕನ ಅಕ್ಕನಿಗೆ ಶೀಘ್ರದಲ್ಲಿಯೇ ಮದುವೆಯಿದೆ. ಪ್ರಕರಣ ದಾಖಲಾದರೆ ಶುಭ ಸಮಾರಂಭಕ್ಕೆ ತೊಂದರೆಯಾಗುತ್ತದೆ. ದೂರು ದಾಖಲಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಬಳಿಕ ಆರೋಪಿಗೆ ಹೊಡೆಯುವುದು ನಿಲ್ಲಿಸಿದ ಸ್ಥಳೀಯರು ಆತನನ್ನ ಕದ್ರಿ ಠಾಣೆಗೆ ಕರೆದೊಯ್ದು ದೂರು ನೀಡಿದ್ದಾರೆ. ಸೋಮವಾರ ಬೆಳಗ್ಗೆ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.