ಕುಕ್ಕೆ ಸುಬ್ರಹ್ಮಣ್ಯ ಲಕ್ಷದೀಪೋತ್ಸವ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವರ ಲಕ್ಷದೀಪೋತ್ಸವವು ಭಕ್ತಿ- ಸಡಗರದಿಂದ ಸೋಮವಾರ ರಾತ್ರಿ ನೆರವೇರಿತು.
ದೇವಾಲಯದ ಹೊರಾಂಗಣದ ಸುತ್ತಲೂ ಹಣತೆಗಳ ದೀಪಾಲಂಕಾರದ ಜೊತೆಗೆ ಆಕರ್ಷಕ ವಿದ್ಯುತ್ ಅಲಂಕಾರದಿಂದ ದೇವಸ್ಥಾನ ವಿಶೇಷವಾಗಿ ಕಂಗೊಳಿಸಿದರೆ, ರಥಬೀದಿಯಿಂದ ಕಾಶಿಕಟ್ಟೆವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಬೆಳಗಿದ ಹಣತೆಗಳು ಮತ್ತು ವಿದ್ಯುತ್ ದೀಪಗಳು ಲಕ್ಷದೀಪೋತ್ಸವಕ್ಕೆ ವಿಶೇಷ ಮೆರುಗು ನೀಡಿದ್ದವು. ಸಹಸ್ರಾರು ಭಕ್ತರು ಶ್ರೀದೇವರ ದರ್ಶನ ಪಡೆದರು. ಈ ಮೊದಲು ಸಂಜೆ ಆದಿ ಸುಬ್ರಹ್ಮಣ್ಯದಲ್ಲಿ ಕಾರ್ತಿಕ ಪೂಜೆ ನಡೆದ ಮೇಲೆ ಪ್ರಧಾನ ದೇವಾಲಯದಲ್ಲಿ ಅಂಕುರಾರ್ಪಣೆ ನಡೆಯಿತು. ಕಾಚುಕುಜುಂಬ ದೈವವು ಶ್ರೀ ದೇವರ ಭೇಟಿಯ ಬಳಿಕ, ಆಕರ್ಷಕ ಸಾಲುದೀಪಗಳ ನಡುವೆ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವ ನೆರವೇರಿತು.
ಬಳಿಕ ರಥಬೀದಿಯಲ್ಲಿ ಶ್ರೀ ದೇವರ ಚಂದ್ರಮಂಡಲ ರಥೋತ್ಸವ ನೆರವೇರಿತು. ರಥದಲ್ಲಿ ಶ್ರೀ ದೇವರು ಕಾಶಿಕಟ್ಟೆಗೆ ಆಗಮಿಸಿದರು. ಶ್ರೀ ಕ್ಷೇತ್ರದ ಕಾಶಿಕಟ್ಟೆ ಮಹಾಗಣಪತಿ ಸನ್ನಿಧಾನದಲ್ಲಿ ತಳಿರು ತೋರಣಗಳಿಂದ, ಬಿಡಿ ಅಡಕೆಗಳಿಂದ ಅಲಂಕಾರಗೊಂಡ ಗಾಲಿಯಿಲ್ಲದ ರಥ ಗುರ್ಜಿಯಲ್ಲಿ ಮಯೂರ ವಾಹನ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ನೆರವೇರಿತು.
ಈ ಮೊದಲು ಕಾಶಿಕಟ್ಟೆ ಮಹಾಗಣಪತಿಗೆ ರಂಗಪೂಜೆ ನೆರವೇರಿತು. ನಂತರ ಸವಾರಿ ಮಂಟಪದಲ್ಲಿರುವ ಅವಲಕ್ಕಿ ಮಂಟಪದಲ್ಲಿ ಪೂಜೆ, ಈ ಸಂದರ್ಭದಲ್ಲಿ ಕ್ಷೇತ್ರ ದೈವ ಹೊಸಳಿಗಮ್ಮನ ದೈವ ದರ್ಶನ ಮತ್ತು ನರ್ತನ ಸೇವೆ ನಡೆಯಿತು. ಶ್ರೀ ಕ್ಷೇತ್ರದಲ್ಲಿ ಲಕ್ಷದೀಪೋತ್ಸವದ ನಿಮಿತ್ತ ಸುಡುಮದ್ದುಗಳ ಪ್ರದರ್ಶನ ಆಕರ್ಷಕವಾಗಿತ್ತು.