ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸ್ವಂತ ಮಕ್ಕಳ ಹಂತಕಗೆ ಗಲ್ಲು

Lingaraj Badiger
Updated On : 4 Dec 2013, 12:09 pm

ಪುತ್ತೂರು: ತನ್ನ ಅತ್ತೆ, ನಾದಿನಿ ಹಾಗೂ ಇಬ್ಬರು ಮಕ್ಕಳನ್ನು ದಾರುಣವಾಗಿ ಕೊಲೆಗೈದ ಅಪರಾಧಿಗೆ ಪುತ್ತೂರು 5ನೇ ಹೆಚ್ಚುವರಿ ಸಷೆನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
 ಮೂಲತಃ ಪುತ್ತೂರು ತಾಲೂಕಿನ ಪಾಣಾಜೆ ಅರ್ಧಮೂಲೆ ನಿವಾಸಿ ರಮೇಶ ನಾಯ್ಕ ಶಿಕ್ಷೆಗೀಡಾದ ಅಪರಾಧಿ.
 ಮಂಗಳವಾರ ರಾತ್ರಿ 7.35ಕ್ಕೆ ನ್ಯಾಯಾಧೀಶ ಟಿ. ಶಿವಶಂಕರೇ ಗೌಡ ಮರಣದಂಡನೆ ತೀರ್ಪು ಪ್ರಕಟಿಸಿದರು. ಈ ತೀರ್ಪು ಪುತ್ತೂರು ನ್ಯಾಯಾಲಯದ ಇತಿಹಾಸದಲ್ಲಿ ಪ್ರಥಮವಾಗಿದ್ದು, 11 ವರ್ಷಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆ ಮಟ್ಟದಲ್ಲಿ ಅಪರಾಧಿಯೊಬ್ಬನಿಗೆ ಮರಣ ದಂಡನೆ ಶಿಕ್ಷೆಯಾಗಿದೆ. ರಮೇಶ ನಾಯ್ಕ ತನ್ನ ಇಬ್ಬರು ಮಕ್ಕಳಾದ ಭುವನ್‌ರಾಜ್ (10) ಮತ್ತು ಕೃತಿಕಾ (4) ಎಂಬವರನ್ನು ನೀರಿನಲ್ಲಿ ಮುಳುಗಿಸಿ ಅಮಾನುಷವಾಗಿ ಕೊಲೆ ನಡೆಸಿದ ಅಪರಾಧಕ್ಕೆ ನ್ಯಾಯಾಲಯವು ಈ ಶಿಕ್ಷೆ ವಿಧಿಸಿದೆ.
ಘಟನೆ ವಿವರ: ಸೊಲ್ಲಾಪುರದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಕೃಷ್ಣ ನಾಯ್ಕ ಎಂಬವರ ಪುತ್ರ ರಮೇಶ್ ನಾಯ್ಕ ತುಮಕೂರು ಜಿಲ್ಲೆಯ ಬನಶಂಕರಿ 2ನೇ ಸ್ಟೇಜ್‌ನ ಕುಮಟಾ ಲೇಔಟ್‌ನಲ್ಲಿ 'ಸೌರಭ ನಿಲಯ' ಎಂಬ ಮನೆ ಪಡೆದುಕೊಂಡು ಅಲ್ಲಿ ಪತ್ನಿ ಸುಂದರಿ, ಮಕ್ಕಳಾದ ಭುವನ್‌ರಾಜ್ ಮತ್ತು ಕೃತಿಕಾ ಹಾಗೂ ನಾದಿನಿ ಸುಜಾತರೊಂದಿಗೆ ವಾಸವಾಗಿದ್ದ. ತುಮಕೂರಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಉದ್ಯೋಗಿಯಾಗಿದ್ದ ಪತ್ನಿ ಸುಂದರಿ ಅವರಿಗೆ ಬಳಿಕ ಮಂಗಳೂರಿನ ಅಳಪೆ ಶಾಖೆಗೆ ವರ್ಗಾವಣೆಯಾಗಿತ್ತು. ಬಳಿಕ ಅವರು ಮಕ್ಕಳೊಂದಿಗೆ ಮಂಗಳೂರಿಗೆ ಆಗಮಿಸಿದ್ದರು. ಆದರೆ ನಾದಿನಿ ಸವಿತಾ ಅವರಿಗೆ ತುಮಕೂರಿನಲ್ಲಿರುವ ಭವಿಷ್ಯ ನಿಧಿ ಕಚೇರಿಯಲ್ಲಿ ಉದ್ಯೋಗವಿದ್ದ ಕಾರಣ ಅವರು ಆ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಜೊತೆಗೆ ತನ್ನ ತಾಯಿ ಸರಸ್ವತಿ ಅವರನ್ನೂ ಅಲ್ಲಿಗೆ ಕರೆಸಿಕೊಂಡಿದ್ದರು. ಸವಿತಾ, ಮೋಹನ್ ಎಂಬವರನ್ನು ಪ್ರೀತಿಸಿ ಮದುವೆಯಾಗಲು ಹೊರಟಿರುವುದನ್ನು ವಿರೋಧಿಸಿ ಆಕ್ಷೇಪ ವ್ಯಕ್ತಪಡಿಸಿದ್ದ ರಮೇಶ್, 2010 ಜೂ.14ರಂದು ಸವಿತಾ ಮತ್ತು ಆಕೆಯ ತಾಯಿಯ ಕೊಲೆ ಮಾಡಿ ಬಳಿಕ ಮೃತದೇಹವನ್ನು ನೀರಿನ ಟ್ಯಾಂಕ್‌ಗೆ ಹಾಕಿದ್ದ. ಅಲ್ಲಿಂದ ಮಂಗಳೂರಿಗೆ ಆಗಮಿಸಿ ತನ್ನ ಪುಟ್ಟ ಮಕ್ಕಳಿಬ್ಬರನ್ನು ಪತ್ನಿ ಇಲ್ಲದ ವೇಳೆ ಪುತ್ತೂರಿಗೆ ಕಾರಿನಲ್ಲಿ ಕರೆತಂದು ತನ್ನ ಹಿಂದಿನ ಮನೆಯಿದ್ದ ಪಾಣಾಜೆ ಬಳಿಯ ಕೆರೆಯಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ.
ಎಸ್ಸೆಮ್ಮೆಸ್ ಮಾಡಿದ್ದ: ಬಳಿಕ ಪತ್ನಿ ಸುಂದರಿ ಮೊಬೈಲ್‌ಗೆ 'ನಾನು ನಿನ್ನ ತಾಯಿ ಮತ್ತು ತಂಗಿಯನ್ನು ಕೊಂದಿದ್ದೇನೆ. ನಮ್ಮ ಮಕ್ಕಳನ್ನೂ ಕೊಂದಿದ್ದೇನೆ. ನೀನೂ ಸಾಯಿ. ನಾನೂ ಸಾಯುತ್ತೇನೆ. ನಾವು ಸತ್ತರೆ ನಮ್ಮನ್ನು ಹೊತ್ತಿಸಲು ಜನವಿಲ್ಲ. ಮಂಗಳೂರು ವಿಮಾನ ದುರಂತದಲ್ಲಿ ಅದೆಷ್ಟೋ ಮಂದಿ ಸತ್ತಿದ್ದಾರೆ, ಹಾಗೇ ನಾವೂ ಗ್ರಹಿಸೋಣ' ಎಂದು ಎಸ್‌ಎಂಎಸ್ ಮಾಡಿದ್ದ. ಈ ಹಿನ್ನೆಲೆಯಲ್ಲಿ ಪತ್ನಿ ಸುಂದರಿ ಪೊಲೀಸರಿಗೆ ದೂರು ನೀಡಿದ್ದರು.
 ಈ ನಡುವೆ ಮಕ್ಕಳ ಮೃತದೇಹಗಳೂ ಪತ್ತೆಯಾದವು. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿ ಪುತ್ತೂರಿನ ಲಾಡ್ಜ್‌ವೊಂದರಲ್ಲಿ ವಾಸ್ತವ್ಯವಿದ್ದ ರಮೇಶ್‌ನನ್ನು ರಾತ್ರಿಯೇ ಬಂಧಿಸಿದ್ದರು. ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
 ಮೊಬೈಲ್ ಎಸ್‌ಎಂಎಸ್ ಪ್ರಕರಣಕ್ಕೆ ಮಹತ್ವದ ಸಾಕ್ಷಿಯಾಗಿತ್ತು. ಮೊಬೈಲನ್ನು ವಶಪಡಿಸಿಕೊಂಡಿದ್ದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಧೀಶರ ಸಮ್ಮುಖದಲ್ಲಿ ಮೊಬೈಲ್ ಎಸ್‌ಎಂಎಸ್ ಪರಿಶೀಲಿಸಲಾಗಿತ್ತು. ನ್ಯಾಯಾಲಯವು 26.10.2013ರಂದು ಆರೋಪಿ ರಮೇಶ್‌ನನ್ನು ಅಪರಾಧಿ ಎಂದು ಪರಿಗಣಿಸಿ ತೀರ್ಪು ನೀಡಿತ್ತು. ಶಿಕ್ಷೆಯ ಪ್ರಮಾಣವನ್ನು ಮಂಗಳವಾರಕ್ಕೆ ನಿಗದಿಗೊಳಿಸಿತ್ತು. ಇದೀಗ ಅಪರಾಧಿ ರಮೇಶ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಸವಿತಾ ಮತ್ತು ಸರಸ್ವತಿ ಕೊಲೆ ನಡೆಸಿದ ಅಪರಾಧಕ್ಕೆ ತುಮಕೂರಿನ ನ್ಯಾಯಾಲಯವು ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಿದೆ. ಪುತ್ತೂರು ನ್ಯಾಯಾಲಯವು ವಿಧಿಸಿದ ಮರಣದಂಡನೆ ತೀರ್ಪು ಪ್ರತಿಯನ್ನು ಉಚ್ಚ ನ್ಯಾಯಾಲಯಕ್ಕೆ ಕಳುಹಿಸಲಾಗುತ್ತಿದ್ದು, ಅಲ್ಲಿಂದ ಒಪ್ಪಿಗೆ ಬಂದ ಬಳಿಕ ಶಿಕ್ಷೆ ಜಾರಿಯಾಗಲಿದೆ ಎಂದು ತಿಳಿದುಬಂದಿದೆ. ದೂರುದಾರರ ಪರವಾಗಿ ಸರ್ಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ವಾದಿಸಿದ್ದರು.

ನಿನಗೆ ಸಾಯುವ ಶಿಕ್ಷೆ ವಿಧಿಸಿದೆ...
ಪುತ್ತೂರು: ಮಂಗಳವಾರ ರಾತ್ರಿ 7.35ರ ವೇಳೆಗೆ ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಶಿವಶಂಕರೇಗೌಡ 'ನಿನಗೆ ಸಾಯುವ ಶಿಕ್ಷೆ ವಿಧಿಸಿದೆ' ಎಂದು ತೀರ್ಪು ನೀಡಿದರು. ಶಿಕ್ಷೆ ವಿಧಿಸುವ ವಿಚಾರ ತಿಳಿದು ರಾತ್ರಿಯಾದರೂ ನ್ಯಾಯಾಲಯದಲ್ಲಿ ಜನ ಸೇರಿದ್ದರು. ಅಪರಾಧಿಯ ಪತ್ನಿ ಸುಂದರಿ ಅವರೂ ನ್ಯಾಯಾಧೀಶರ ತೀರ್ಪನ್ನು ಆಲಿಸಲು ನ್ಯಾಯಾಲಯಕ್ಕೆ ಆಗಮಿಸಿದ್ದರು. ನ್ಯಾಯಾಲಯದ ತೀರ್ಪು ಕೇಳಿ ಒಂದು ಕ್ಷಣ ಕಣ್ಣು ಮುಚ್ಚಿ ಧ್ಯಾನಿಸಿದ ಸುಂದರಿ, ತೀರ್ಪಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಹಿಂದೊಮ್ಮೆ ನ್ಯಾಯಾಲಯದ ಆವರಣದಲ್ಲಿಯೇ ಪತಿಯನ್ನು ಹಿಡಿದುಕೊಂಡು ಸುಂದರಿ ಅವರು 'ನನ್ನ ಮಕ್ಕಳನ್ನು ಯಾಕೆ ಕೊಂದೆ, ಅವರು ನಿನಗೆ ಏನು ಅನ್ಯಾಯ ಮಾಡಿದ್ದಾರೆ' ಎಂದು ಪ್ರಶ್ನಿಸಿದ್ದರು. ಆಗ ಅಲ್ಲಿದ್ದ ವಕೀಲರು ಸೇರಿದಂತೆ ಎಲ್ಲರ ಕಣ್ಣಲ್ಲೂ ನೀರು ತುಂಬಿತ್ತು. ಅಪರಾಧಿಯ ಶಿಕ್ಷೆಯ ಕುರಿತು ಹೈಕೋರ್ಟ್‌ಗೆ ತೀರ್ಪಿನ ಪ್ರತಿ ಕಳುಹಿಸಿದ ಬಳಿಕ ಅಲ್ಲಿಂದ ಆದೇಶ ಬಂದ ಬಳಿಕ ಶಿಕ್ಷೆ ಆರಂಭಗೊಳ್ಳುತ್ತದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ. ತನಗೆ ಮರಣದಂಡನೆ  ಶಿಕ್ಷೆ ಕೊಡಬಾರದು ಎಂದು ಅಪರಾಧಿ ರಮೇಶ್ ನಾಯ್ಕ ಈ ಹಿಂದೆ ಸುಪ್ರಿಂಕೋರ್ಟ್ ಹಾಗೂ ಹೈಕೋರ್ಟ್‌ನಲ್ಲಿ ಮರಣದಂಡನೆಗೊಳಗಾದ ವಿವರವನ್ನೊಳಗೊಂಡ ಪತ್ರಿಕೆಗಳ ಪ್ರತಿಯನ್ನು ನ್ಯಾಯಾಲಯಕ್ಕೆ ನೀಡಿ ಯಾವುದೇ ಕಾರಣಕ್ಕೂ ತನಗೆ ಮರಣದಂಡನೆ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದ. ಆದರೆ ನ್ಯಾಯಾಲಯವು ಈತನ ಮನವಿಯನ್ನು ತಿರಸ್ಕರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement