ಆಸ್ತಿ ನೋಂದಣಿಗೆ 'ಸಕಾಲ' ಯೋಜನೆ ಬುಡಮೇಲು!
ಮಂಗಳೂರು: 'ಸಕಾಲ' ಯೋಜನೆಯನ್ನೇ ಬುಡಮೇಲು ಮಾಡುವ ತಂತ್ರವಿದು. ಆಸ್ತಿ ನೋಂದಣಿಗೆ 'ಸಕಾಲ'ದಲ್ಲಿ ಅರ್ಜಿ ನೀಡಿದರೆ ಸ್ವೀಕೃತಿ ಪತ್ರ ಕೊಡುವುದಿಲ್ಲ, ನೋಂದಣಿ ನಂಬರೂ ನೀಡುವುದಿಲ್ಲ. ಅದರ ಬದಲು ಟೋಕನ್ ಕೊಡುತ್ತಾರೆ!
ದ.ಕ.ಜಿಲ್ಲೆಯ ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ಅವಧಿಬದ್ಧ ಸೇವೆ ನೀಡುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸರ್ಕಾರಿ ಸಿಬ್ಬಂದಿಯೇ ಮಾಡಿಕೊಂಡ ಸ್ವಯಂಕೃತ ವ್ಯವಸ್ಥೆ ಇದು. ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ 'ಸಕಾಲ' ಸೇವೆಯನ್ನು ಸಕಾಲದಲ್ಲಿ ಒದಗಿಸಬೇಕಾದವರೇ ಅದರ ವ್ಯವಸ್ಥೆಯನ್ನೇ ಹಾದಿ ತಪ್ಪಿಸುತ್ತಿದ್ದಾರೆ. ಕಚೇರಿಗಳಲ್ಲಿ ಅರ್ಜಿಗಳಿಗೆ ಸ್ವೀಕೃತಿ ಪತ್ರ ಬದಲು ಟೋಕನ್ ಕೊಡುತ್ತಾರೆ.
ಯಾಕಾಗಿ ಟೋಕನ್?: 'ಸಕಾಲ' ವ್ಯವಸ್ಥೆಯಲ್ಲಿ ಅರ್ಜಿ ಸಲ್ಲಿಸಿದವರಿಗೆ ನಿಗದಿತ ಅವಧಿಯೊಳಗೆ ಕೆಲಸ ಮಾಡಿಕೊಡಬೇಕು. ಅದು ಅಸಾಧ್ಯವಾದರೆ ಅಧಿಕಾರಿಗಳೇ ದಂಡ ಪಾವತಿಸಬೇಕು. ಸರ್ಕಾರಿ ವ್ಯವಸ್ಥೆಯಲ್ಲಿ ಇದು ಆಗುವ ಹೋಗುವ ಮಾತಲ್ಲ ಎಂದು ತೀರ್ಮಾನಿಸಿದ ಅಧಿಕಾರಿಗಳೇ ಅನಧಿಕೃತವಾಗಿ ಟೋಕನ್ ಪದ್ಧತಿ ಜಾರಿಗೆ ತಂದಿದ್ದಾರೆ.
ಜಿಲ್ಲೆಯ ಐದು ತಾಲೂಕುಗಳ ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಿನದಲ್ಲಿ ಸರಾಸರಿ 50-60 ಅರ್ಜಿಗಳು ಜಾಗ ನೋಂದಣಿಗೆ ಸಲ್ಲಿಕೆಯಾಗುತ್ತಿವೆ. ಗಣನೀಯ ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಯಾಗಲು ಕಾರಣ ಈ ಜಿಲ್ಲೆಯಲ್ಲಿ ನಡೆಯುತ್ತಿರುವ ರಿಯಲ್ ಎಸ್ಟೇಟ್, ಜಾಗ ಖರೀದಿ ಭರಾಟೆ. ದಿನದಲ್ಲಿ ಮಿತಿಗಿಂತ ಅಧಿಕ ಅರ್ಜಿ ಬರುತ್ತಿರುವುದು ಕಚೇರಿ ಸಿಬ್ಬಂದಿಗೆ ವರವಾಗಿ ಪರಿಣಮಿಸಿದೆ.
ಒಂದು ಅರ್ಜಿಯನ್ನು ಕಂಪ್ಯೂಟರ್‌ಗೆ ದಾಖಲು ಮಾಡಬೇಕಾದರೆ ಅರ್ಧ ಗಂಟೆ ಬೇಕು. ಅರ್ಜಿ ಜತೆಗಿನ ಅಡಕಗಳನ್ನು ಪರಿಶೀಲಿಸಬೇಕು. ನೋಂದಣಿ ಪ್ರಕ್ರಿಯೆ ಅರ್ಧ ಹಂತದಲ್ಲಿರುವಾಗ ಸಕಾಲಕ್ಕೆ ಅರ್ಜಿ ಸೇರ್ಪಡೆಯಾಗುತ್ತದೆ. ಎಲ್ಲ ಅರ್ಜಿಗಳನ್ನು ಒಂದೇ ದಿನ ನೋಂದಣಿ ಮಾಡಲು ಅಸಾಧ್ಯವಾಗುವುದರಿಂದ ಟೋಕನ್ ನೀಡುತ್ತೇವೆ ಎನ್ನುವುದು ಕಚೇರಿ ಸಿಬ್ಬಂದಿಗಳ ಸಮಜಾಯಿಷಿ.
ಜಾಗ ನೋಂದಣಿಗೆ ಮಾತ್ರ 'ಸಕಾಲ': ಆಸ್ತಿ ನೋಂದಣಿಗೆ ಮಾತ್ರ 'ಸಕಾಲ' ಅನ್ವಯವಾಗುತ್ತದೆ. ಜಾಗದ ತೀರುವಳಿ ನಕ್ಷೆ ಅಥವಾ ದೃಢೀಕೃತ ಪತ್ರ ಪಡೆಯಲು ಸಕಾಲ ಅನ್ವಯವಾಗುವುದಿಲ್ಲ. ಅದಕ್ಕೆ ಹೇಗೂ ಟೋಕನ್ ವ್ಯವಸ್ಥೆ ಇದೆ. ಹಾಗೆಯೇ ಆಸ್ತಿ ನೋಂದಣಿಗೂ ಟೋಕನ್ ಮುಂದುವರಿಯುತ್ತಿದೆ ಎನ್ನುತ್ತಾರೆ ಕಚೇರಿ ಸಿಬ್ಬಂದಿ.
'ಆಸ್ತಿ ನೋಂದಣಿಯನ್ನು ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸಕಾಲಕ್ಕಿಂತ ವೇಗವಾಗಿ, ಅರ್ಧ ದಿನದಲ್ಲೇ ಬೇಗನೆ ಮಾಡಿಕೊಡುತ್ತಾರೆ. ಜಾಸ್ತಿ ಅರ್ಜಿಗಳು ಬಂದು ನೋಂದಣಿ ಪ್ರಕ್ರಿಯೆ ಒಂದೇ ದಿನದಲ್ಲಿ ಪೂರ್ತಿಯಾಗದಿದ್ದರೆ ಆ ದಿನ ಕಂಪ್ಯೂಟರ್ ಲಾಕ್ ಆಗುತ್ತದೆ. ಹಾಗಾಗಿ ಮುಂಚಿತವಾಗಿ ಟೋಕನ್ ಕೊಡುತ್ತಾರೆ. ಟೋಕನ್ ನೀಡುವುದರಿಂದ ಆಸ್ತಿ ನೋಂದಣಿಯಲ್ಲಿ ವಿಳಂಬವಾಗುವುದಿಲ್ಲ' ಎನ್ನುತ್ತಾರೆ ದಸ್ತಾವೇಜು ಬರಹಗಾರ ಪುತ್ತೂರಿನ ಪಾಂಗಣ್ಣಾಯ.
ಮಂಗಳೂರಿನ ಸಬ್‌ರಿಜಿಸ್ಟ್ರಾರ್ ಕಚೇರಿ ಅಧಿಕಾರಿಗಳ ಪ್ರಕಾರ, ಕಂಪ್ಯೂಟರ್ ಹಾಗೂ ಸಿಬ್ಬಂದಿ ಕೊರತೆಯಿಂದ ಟೋಕನ್ ಕೊಡುತ್ತಿದ್ದೇವೆ. ಸಿಬ್ಬಂದಿ ನೇಮಕ ಬಳಿಕ ಎಲ್ಲವೂ ಸರಿಹೋಗಲಿದೆ ಎನ್ನುತ್ತಾರೆ. ಆದರೆ ಪುತ್ತೂರಿನ ಸಬ್‌ರಿಜಿಸ್ಟ್ರಾರ್ ಅಧಿಕಾರಿಗಳು, ಹೆಚ್ಚಿನ ಪ್ರಮಾಣದಲ್ಲಿ ಜಾಗ ನೋಂದಣಿಯ ಅರ್ಜಿಗಳು ಬಂದರೆ ಟೋಕನ್ ಕೊಡಬಹುದು. ಜಾಗ ನೋಂದಣಿ ಪ್ರಕ್ರಿಯೆ ಸಕಾಲದಲ್ಲೇ ನಡೆಯುತ್ತಿದೆ ಎನ್ನುತ್ತಾರೆ. ಸಕಾಲ ಅನುಷ್ಠಾನ, ಟೋಕನ್ ನೀಡಿಕೆ ಬಗ್ಗೆ ಅಧಿಕಾರಿಗಳಲ್ಲೇ ಮಾಹಿತಿ ಕೊರತೆ ಇದೆ.
-ಆತ್ಮಭೂಷಣ್