ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಉರುಂಬಿ ಯೋಜನೆ ವಿರುದ್ಧ ಪರಿಸರ ಜಾಗೃತಿ ಜಾಥಾ

Vishwanath S
Updated On : 5 Dec 2013, 11:15 am

ಉಪ್ಪಿನಂಗಡಿ: ಭಾರತ ಸರ್ಕಾರ ಸುಳ್ಯ ಹಾಗೂ ಪುತ್ತೂರು ತಾಲೂಕನ್ನು ಪರಿಸರ ಸೂಕ್ಷ್ಮ ಪಶ್ಚಿಮಘಟ್ಟ ಪ್ರದೇಶದ ವ್ಯಾಪ್ತಿಗೆ ಸೇರಿಸಿದ್ದು, ಕಾನೂನು ಪ್ರಕಾರವೇ ಇಲ್ಲಿ ಯಾವುದೇ ಜಲವಿದ್ಯತ್ ಯೋಜನೆಗಳು ಅನುಷ್ಠಾನವಾಗಲು ಸಾಧ್ಯವಿಲ್ಲ ಎಂದು ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.
ಅವರು ಬುಧವಾರ ಕುಮಾರಾಧಾರಾ ಪರಿಸರ ಸಂರಕ್ಷಣಾ ಸಮಿತಿ ಪೆರಾಬೆ ಗ್ರಾಮದ ಉರುಂಬಿ ಎಂಬಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜಲವಿದ್ಯುತ್ ಯೋಜನೆಯ ವಿರುದ್ಧ ಹಮ್ಮಿಕೊಂಡಿದ್ದ ಕೃಷಿಕರ ಸಂರಕ್ಷಣೆ ಹಾಗೂ ಪರಿಸರ ಜಾಗೃತಿ ಜಾಥಾ, ರಾಜ್ಯಪಾಲರಿಗೆ ಯೋಜನೆಯ ರದ್ದತಿಗೆ ಕಾರ್ಡ್ ಚಳುವಳಿ ಹಾಗೂ ಸಹಿ ಸಂಗ್ರಹಣಾ ಅಭಿಯಾನದ ಅಂಗವಾಗಿ ಕಡಬ ದುರ್ಗಾಂಬಿಕಾ ದೇವಸ್ಥಾನದ ವಠಾರದಲ್ಲಿ ನಡೆದ ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತ ಸರ್ಕಾರ ಘೋಷಿಸಿರುವಂತೆ ಪಶ್ಚಿಮ ಘಟ್ಟ ವಲಯಕ್ಕೆ ಸೇರ್ಪಡೆಗೊಂಡಿರುವ ಪುತ್ತೂರು ಹಾಗೂ ಸುಳ್ಯ ತಾಲೂಕು ಸೂಕ್ಷ್ಮ ಪರಿಸರ ಪ್ರದೇಶ ಎಂದು ಪರಿಗಣಿಸಲ್ಪಟ್ಟಿದೆ. ಈ ಬಗ್ಗೆ ಅರಣ್ಯ ಇಲಾಖೆಗೂ ಪತ್ರ ರವಾನೆಯಾಗಿದೆ ಇದರಿಂದಾಗಿ ಪುತ್ತೂರು ಹಾಗು ಸುಳ್ಯ ತಾಲೂಕು ಪಶ್ಚಿಮ ಘಟ್ಟ ವ್ಯಾಪ್ತಿಗೆ ಸೇರಿದೆ ಎನ್ನುವುದಕ್ಕೆ ಯಾವುದೇ ಗೊಂದಲ ಬೇಡ. ಈ ಕಾನೂನು ಪ್ರಕಾರ ಇಲ್ಲಿನ ಜೀವನದಿಗಳಲ್ಲಿ ಅಣೆಕಟ್ಟುವುದು ಬಿಡಿ ಮರಳು ಕೂಡಾ ತೆಗೆಯುವಂತಿಲ್ಲ ಎಂದರು.
ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರನ್ ಮಾತನಾಡಿ, ಉರುಂಬಿ ಅಣೆಕಟ್ಟು ನಿರ್ಮಿಸಿರುವುದರಿಂದ ಸುಮಾರು 1700 ಹೆಕ್ಟೇರ್ ಪ್ರದೇಶ ಮುಳಗಡೆಯಾಗಲಿದೆ, ಜೀವ ವೈವಿಧ್ಯಗಳು ಕೃಷಿ ಸಂಪತ್ತು ನಾಶವಾಗಲಿದೆ ಎಂದು ಅಧ್ಯಯನ ವರದಿ ದೃಢೀಕರಿಸಿದೆ ಎಂದರು.
ಪುತ್ತೂರು ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಎಚ್.ಕೆ. ಇಲ್ಯಾಸ್, ಕಾರ್ಡ್ ಚಳವಳಿಗೆ ಚಾಲನೆ ನೀಡಿದ ಕಡಬ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ  ಸತೀಶ್ ನಾಯಕ್, ಸಹಿ ಸಂಗ್ರಹಕ್ಕೆ ಚಾಲನೆ ನೀಡಿದ ಕಡಬ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಿ. ಪಿಲಿಫ್, ಆರ್ಥಿಕ ತಜ್ಞ ಪ್ರೊ. ಬಿ.ಎಲ್. ಕುಮಾರಸ್ವಾಮಿ, ತಾಲೂಕು ಪಂಚಾಯಯಿತಿ ಸದಸ್ಯೆ ಪುಲಸ್ಯಾ ರೈ ಮಾತನಾಡಿದರು.
ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ ಗೌಡ, ದ.ಕ. ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸಿ.ಪಿ. ಸೈಮನ್, ಎಪಿಎಂಸಿ ಸದಸ್ಯ ಸೀತಾರಾಮ ಗೌಡ ಪೊಸವಳಿಕೆ, ಉದ್ಯಮಿ ಅಚ್ಚಕುಂಞ ಪದವು, ಡಾ. ಸುರೇಶ್ ಕುಮಾರ್ ಕೂಡೂರು ಇದ್ದರು. ಕುಮಾರಧಾರ ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷ ಕರುಣಾಕರ ಗೋಗಟೆ ಸ್ವಾಗತಿಸಿದರು. ಡಾ. ರಾಜೇಶ್ ಬೀರಂತಡ್ಕ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕಡಬ ನಾಡ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಕಡಬ ವಿಶೇಷ ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಬೀದಿ ನಾಟಕ ಮೂಲಕ ಜಾಗೃತಿ ಮೂಡಿಸಲಾಯಿತು.
ಕುಮಾರಧಾರೆಗೆ ಬಾಗಿನ: ಇದಕ್ಕೂ ಮುನ್ನ ಉದ್ದೇಶಿತ ಉರುಂಬಿ ಅಣೆಕಟ್ಟು ಪ್ರದೇಶದಲ್ಲಿ ಕುಮಾರಧಾರ ನದಿಗೆ ಮಹಿಳೆಯರು ಬಾಗಿನ ಅರ್ಪಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಲಾಯಿತು.  ಬಳಿಕ ಪದವಿನಲ್ಲಿ ಸಭೆ ನಡೆಸಲಾಯಿತು. ಹೊಸಮಠದಲ್ಲಿ ಎರಡನೇ ಸಭೆ ನಡೆಸಲಾಯಿತು.   ಸಹಕಾರಿ ದುರೀಣ ಸುಬ್ರಾಯ ಹೆಬ್ಬಾರ್, ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಜೀವ ಪೂಜಾರಿ, ಮಾಜಿ ಅಧ್ಯಕ್ಷ ದೇವಯ್ಯ ಗೌಡ ಪನ್ಯಾಡಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement