ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ತುಳು ತೇರು: 25ರಂದು ಚಾಲನೆ

Vishwanath S
Updated On : 5 Dec 2013, 11:16 am

ಸುಳ್ಯ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ವಿಜಯ ರಜತ ಸಂಭ್ರಮದ ಪೂರ್ವಭಾವಿಯಾಗಿ ನಡೆಯುವ ತುಳು ನಾಡ್ದ ಜಾತ್ರೆಯ ತುಳು ತೇರು ಡಿ.25ರಿಂದ ಸುಳ್ಯ ತಾಲೂಕಿನಲ್ಲಿ ಸಂಚರಿಸಲಿದ್ದು, ಈ ಹಿನ್ನಲೆಯಲ್ಲಿ ಸುಳ್ಯ ತಾಲೂಕು ಮಟ್ಟದ ಸಮಾಲೋಚನಾ ಸಭೆಯು ಡಿ.3ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ತುಳು ತೇರು ತಾಲೂಕು ಸಮಿತಿ ಸಂಚಾಲಕ ನವೀನ್ ಕುಮಾರ್ ಮೇನಾಲ ಮತ್ತು ಪ್ರಧಾನ ಕಾರ್ಯದರ್ಶಿ ದುರ್ಗಾಕುಮಾರ್ ನಾಯರ್ಕೆರೆ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. ಸಮಾಲೋಚನಾ ಸಭೆಯಲ್ಲಿ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ. ತುಳು ತೇರು ಮೂಡಾಯಿ ಕೂಟದ ಅಧ್ಯಕ್ಷ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಸುಳ್ಯ ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಉಪಸ್ಥಿತರಿರುತ್ತಾರೆ. ತುಳು ಭಾಷೆ, ಸಂಸ್ಕೃತಿ ನೆಲೆಯಲ್ಲಿ ತುಳುವರನ್ನು ಜಾಗೃತಿಗೊಳಿಸಬೇಕೆಂಬ ಉದ್ದೇಶದಿಂದ ನಡೆಯುವ ತುಳು ತೇರು ಸುಳ್ಯ ತಾಲೂಕಿನ ಹಲವೆಡೆ ಸಂಚರಿಸಲಿದೆ. ಡಿ.25ರಂದು ಪೂರ್ವಾಹ್ನ ಸುಳ್ಯದಲ್ಲಿ ತೇರಿಗೆ ಚಾಲನೆ ನೀಡಲಾಗುವುದು. ಬಳಿಕ ಸುಳ್ಯದಲ್ಲಿ ಮೆರವಣಿಗೆ ನಡೆಯಲಿದೆ. ಅಂದು ಸಂಜೆ ಬೆಳ್ಳಾರೆಯಲ್ಲಿ ಮೆರವಣಿಗೆ ಮತ್ತು ಸಮಾರಂಭ ನಡೆಯಲಿದೆ. ಡಿ.26ರಂದು ಎಣ್ಮೂರಿನಲ್ಲಿ ಮತ್ತು ಸಂಜೆ ಪಂಜದಲ್ಲಿ ಮೆರವಣಿಗೆ ಮತ್ತು ಸಭಾಕಾರ್ಯಕ್ರಮ ನಡೆಯಲಿದ್ದು, ಡಿ.27ರಂದು ಸುಬ್ರಹ್ಮಣ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಡಿ.28ರಂದು ಬೆಳಿಗ್ಗೆ ಗುಂಡ್ಯ, ಕೊಕ್ಕಡ ಮಾರ್ಗವಾಗಿ ತೇರನ್ನು ಸೌತಡ್ಕದ ಮೂಲಕ ಬೆಳ್ತಂಗಡಿ ತಾಲೂಕಿಗೆ ಬೀಳ್ಕೊಡಲಾಗುವುದು ಎಂದು ಅವರು ಹೇಳಿದರು. ತುಳು ತೇರು ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ತಾಲೂಕು ಸಮಿತಿ ಮತ್ತು ಬೆಳ್ಳಾರೆ, ಪಂಜ, ಎಣ್ಮೂರು, ಸುಬ್ರಹ್ಮಣ್ಯಗಳಲ್ಲಿ ಪ್ರಾದೇಶಿಕ ಸಮಿತಿಗಳನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು. ಸಮಿತಿಯ ಕಾರ್ಯಾಧ್ಯಕ್ಷ ಎಂ.ಬಿ. ಸದಾಶಿವ, ಸಂಚಾಲಕ ಎನ್.ಎ. ರಾಮಚಂದ್ರ, ಉಪಾಧ್ಯಕ್ಷ ಅಬ್ಬಾಸ್ ಹಾಜಿ ಕಟ್ಟೆಕ್ಕಾರ್, ಕಾರ್ಯದರ್ಶಿ ಜೆ.ಕೆ.ರೈ, ಆರ್ಥಿಕ ಸಮಿತಿ ಸಂಚಾಲಕ ಜಯಂತ ಶೆಟ್ಟಿ, ಜೈ ಗುರುದೇವಾ ಸೇವಾ ಬಳಗದ ಅಧ್ಯಕ್ಷ ರಾಧಾಕೃಷ್ಣ ಪಕ್ಕಳ, ಶಾಂತಪ್ಪ ರೈ, ಗಂಗಾಧರ ಮಣಿಯಾಣಿ, ರಾಮ್ದಾಸ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement