ನಕ್ಸಲ್ ದಮನಕ್ಕೆ 9 ಕೋಟಿ ಮೀಸಲು, 29 ಕಡೆ ಆಂತರಿಕ ಭದ್ರತೆ ವಿಭಾಗ ಆರಂಭ
ಮಂಗಳೂರು: ಕೇರಳ, ತಮಿಳುನಾಡು ಪೊಲೀಸರ ನೆರವು ಪಡೆದು ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಮಟ್ಟಹಾಕಲು ರಾಜ್ಯದಲ್ಲಿ 29 ಕಡೆ ಆಂತರಿಕ ಭದ್ರತೆ ವಿಭಾಗ ತೆರೆಯಲಾಗಿದೆ ಎಂದು ಎಡಿಜಿಪಿ (ಆಂತರಿಕ ಭದ್ರತೆ) ಅಲೋಕ್ ಮೋಹನ್ ಹೇಳಿದರು.
ಪಶ್ಚಿಮ ವಲಯ ಐಜಿಪಿ ಕಚೇರಿಯಲ್ಲಿ ಆಂತರಿಕ ಭದ್ರತೆ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.
ನಕ್ಸಲ್ ನಿಗ್ರಹ ದಳಕ್ಕೆ 9 ಕೋಟಿ ಮೀಸಲಿಡಲಾಗಿದ್ದು, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನೀಡಲಾಗಿದೆ. ಈಗ ಆಂತರಿಕ ಭದ್ರತೆ ವಿಭಾಗ ಪ್ರತ್ಯೇಕ ಐಜಿಪಿ ನೇಮಿಸಲಾಗಿದೆ, ವಿಭಾಗದಲ್ಲಿ ಎಸ್ಪಿ, ಡಿವೈಎಸ್ಪಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
ಕೇರಳ, ತಮಿಳುನಾಡು, ಕರ್ನಾಟಕ ಪೊಲೀಸ್ ಅಧಿಕಾರಿಗಳ ಸಭೆ ನ.27ರಂದು ನಡೆದಿದ್ದು, ನಕ್ಸಲ್ ದಮನಕ್ಕೆ ರೂಪುರೇಷೆ ಸಿದ್ಧಪಡಿಸಲಾಗಿದೆ. ನಕ್ಸಲ್ ನಿಗ್ರಹದಳ ಯಾವುದೇ ಕಠಿಣ ಪರಿಸ್ಥಿತಿ ಎದುರಿಸಲು ಸಿದ್ಧವಿದೆ. ಮೂರು ರಾಜ್ಯಗಳ ನಕ್ಸಲರ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ ಎಂದರು.
ಬಾಂಬ್ ನಿಷ್ಕ್ರೀಯ ದಳ: ಕರಾವಳಿಯಲ್ಲಿ ಉಗ್ರ ಚಟುವಟಿಕೆ ಬೇರು ಹರಡಿರುವ ಹಿನ್ನೆಲೆಯಲ್ಲಿ ಮಂಗಳೂರಲ್ಲಿ ಬಾಂಬ್ ನಿಷ್ಕ್ರಿಯ ದಳ ಸ್ಥಾಪನೆಗೆ ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಅನೇಕ ಬಾರಿ ಸಭೆ ನಡೆಸಲಾಗಿದೆ ಎಂದರು.