ಮಂಗಳೂರು ಜೈಲ್ನಲ್ಲಿ ಡಾನ್ಗಳ ಹೊಡೆದಾಟ
ಮಂಗಳೂರು: ಇಲ್ಲಿನ ಜೈಲ್ನಲ್ಲಿರುವ ಇಬ್ಬರು ಡಾನ್ಗಳು ಮತ್ತು ಬೆಂಬಲಿಗರು ಪರಸ್ಪರ ಕೈ ಮಿಲಾಯಿಸಿಕೊಂಡಿದ್ದಾರೆ.
ಬುಧವಾರ ಮಧ್ಯಾಹ್ನ ಬಿಡುವಿನ ವೇಳೆಯಲ್ಲಿ ದಾವೂದ್ ಬಂಟನಾದ ರಶೀದ್ ಮಲಬಾರಿ ಮತ್ತು ಮಾಡೂರು ಇಸುಬು ಯಾನೆ ಯೂಸುಫ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆಗೆ ಇಬ್ಬರು ಡಾನ್ಗಳು ಕೈ ಮಿಲಾಯಿಸಿದ್ದಾರೆ, ತಕ್ಷಣ ಜೈಲ್ ಅಧೀಕ್ಷಕ ದೊಡ್ಡಕಾಮಯ್ಯ ಮತ್ತು ಮೂವರು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಇಬ್ಬರ ಜಗಳವನ್ನು ತಡೆದಿದ್ದಾರೆ. ತಳ್ಳಾಟದಲ್ಲಿ ಅಧೀಕ್ಷಕರಿಗೂ ಒಂದೇಟು ಬಿದ್ದಿದೆ ಎನ್ನಲಾಗಿದೆ. ಅನೇಕ ಕೋಮು ಸಂಬಂಧಿತ ಕೊಲೆ, ಸುಲಿಗೆ ಆರೋಪದಲ್ಲಿ ಬಂಧಿತನಾಗಿರುವ ಮಾಡೂರು ಇಸುಬು ಮತ್ತು ರಶೀದ್ ಮಲಬಾರಿ ಗುಂಪಿನ ನಡುವೆ ಜೈಲ್ನಲ್ಲಿ ಅನೇಕ ಬಾರಿ ಹೊಡೆದಾಟಗಳು ಸಂಭವಿಸಿದೆ. ಹೊರಗೆ ಬಿಟ್ಟಾಗ ಬೆಂಬಲಿಗರು ಪರಸ್ಪರ ಗಲಾಟೆಯಲ್ಲಿ ತೊಡಗುವುದು ಮಾಮೂಲು. ಜೈಲ್ನಲ್ಲಿ ತನಗೆ ಜೀವ ಬೆದರಿಕೆ ಇದೆ ಎಂದು ಮಾಧ್ಯಮಕ್ಕೂ ಮಾಡೂರು ಇಸುಬು ಪತ್ರ ಬರೆದಿದ್ದ.
ಪಾಡಿಗಾರ: ಶಾಲಾ ಬಸ್ ಮಗುಚಿ 8 ಮಂದಿಗೆ ಗಾಯ
ಹಿರಿಯಡ್ಕ: ಇಲ್ಲಿನ ಪಾಡಿಗಾರ ಗ್ರಾಮದ ಬನ್ನಂಪಳ್ಳಿ ಎಂಬಲ್ಲಿ ಶಾಲಾ ಬಸ್ ಮಗುಚಿ 8 ಮಂದಿ ವಿದ್ಯಾರ್ಥಿಗಳಿಗೆ ಗಾಯಗಳಾದ ಘಟನೆ ಬುಧವಾರ ಸಂಜೆ ನಡೆದಿದೆ. ಪೆರ್ಡೂರಿನ ಎಸ್.ಆರ್.ಪಬ್ಲಿಕ್ ಶಾಲೆಯ ಈ ಬಸ್ ಸಂಜೆ 4.35ಕ್ಕೆ ಶಾಲೆಯ ವಿದ್ಯಾರ್ಥಿಗಳನ್ನು ಮರಳಿ ಮನೆಗೆ ಬಿಡುವುದಕ್ಕೆ ಹೋಗುತ್ತಿತ್ತು. ಬಸ್ಸಿನ ಚಾಲಕ ಮಧುಕರ್ ಅವರ ಅತಿ ವೇಗದ ಚಾಲನೆಯಿಂದ ಬಸ್ ನಿಯಂತ್ರಣ ತಪ್ಪಿ ಬನ್ನಂಬಳ್ಳಿ ಎಂಬಲ್ಲಿ ರಸ್ತೆಯ ಪಕ್ಕದ ಚರಂಡಿಯಲ್ಲಿ ಮಗುಚಿ ಬಿತ್ತು.
ಸುಮಾರು 8 ಮಕ್ಕಳಿಗೆ ಗಾಯಗಳಾಗಿವೆ. ಗಾಯಗೊಂಡ ಮಕ್ಕಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ. ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ
ಬೈಂದೂರು: ಇಲ್ಲಿನ ನಾವುಂದ ಗ್ರಾಮದಲ್ಲಿ ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಜೆ ನಡೆದಿದೆ. ದೀಪಾ ಶೆಟ್ಟಿ (21) ಮೃತರು. ಈಕೆ ಬೈಂದೂರುವ ರಿಚರ್ಡ್ ಪದವಿ ಪೂರ್ವ ಕಾಲೇಜಿನ 2ನೇ ವರ್ಷದ ಬಿಬಿಎಂ ವಿದ್ಯಾರ್ಥಿನಿ. ಬೆಳಗ್ಗೆ ತಾಯಿ ಓದುವ ವಿಷಯದಲ್ಲಿ ಬೈಯ್ದು ಬುದ್ಧಿ ಹೇಳಿದ್ದರು. ಇದರಿಂದ ನೊಂದ ಆಕೆ ಸಂಜೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.
ಕುತ್ಯಾರು: ಯುವಕ ನಾಪತ್ತೆ
ಉಡುಪಿ: ಇಲ್ಲಿನ ಶಿರ್ವದ ಕುತ್ಯಾರು ಗ್ರಾಮದಿಂದ ಯುವಕನೊಬ್ಬ ಕಾಣೆಯಾದ ಘಟನೆ ಮಂಗಳವಾರ ನಡೆದಿದೆ. ನಾಪತ್ತೆಯಾದವರು ಸದಾಶಿವ ಆಚಾರ್ಯ (29), ಇಲ್ಲಿನ ನಿವಾಸಿ ಯಜ್ಞೇಶ್ವರ ಅಚಾರ್ಯ ಎಂಬವರ ಮಗ. ಅವರು ಮಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಡೀಲರ್ ಆಗಿ ಕೆಲಸ ಮಾಡಿಕೊಂಡಿದ್ದು, ಮಂಗಳವಾರ 2.20ಕ್ಕೆ ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ ಎಂದು ತಂದೆ ಯಜ್ಞೇಶ್ವರ ಅಚಾರ್ಯ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.
ತಪ್ಪಿಸಿಕೊಳ್ಳುವ ಧಾವಂತದಲ್ಲಿ ಮರಳು
ಅಕ್ರಮ ಸಾಗಾಟದ ಲಾರಿಗಳು ಡಿಕ್ಕಿ
ವಿಟ್ಲ: ಸಾರಡ್ಕ ಚೆಕ್ಪೋಸ್ಟ್ ಬಳಿ ಅಕ್ರಮವಾಗಿ ಕೇರಳಕ್ಕೆ ಮರಳು ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳು ಡಿಕ್ಕಿ ಹೊಡೆದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ವಿಟ್ಲ ಪೊಲೀಸರಾದ ಚಿದಾನಂದ ಹಾಗೂ ಜನಾರ್ದನ ಖಚಿತ ಮಾಹಿತಿ ಮೇರೆಗೆ ತಡರಾತ್ರಿ ಮೂಡಂಬೈಲು ಸಮೀಪ ಮರಳು ಸಾಗಾಟ ಲಾರಿಗಾಗಿ ಕಾದು ಕುಳಿತಿದ್ದರು. ಎರಡು ಲಾರಿಗಳು ಆಗಮಿಸುತ್ತಿದ್ದುದನ್ನು ಗಮನಿಸಿ ಸಾರಡ್ಕ ಚೆಕ್ಪೋಸ್ಟ್ನಲ್ಲಿ ಕರ್ತವ್ಯದಲ್ಲಿದ್ದ ಚೆನ್ನಪ್ಪ ಹಾಗೂ ಸೋಮಶೇಖರ ಅವರಿಗೆ ಗೇಟ್ ಹಾಕುವಂತೆ ಸೂಚನೆ ನೀಡಿ ಲಾರಿಗಳನ್ನು ಬೆನ್ನಟ್ಟಿ ಬಂದಿದ್ದರು. ಚೆಕ್ಪೋಸ್ಟ್ನಲ್ಲಿ ಗೇಟ್ ಹಾಕಿದ್ದರಿಂದ ಲಾರಿ ಮುಂದೆ ಹೋಗಲಾಗಲಿಲ್ಲ. ಖಾಸಗಿ ಕಾರಿನಲ್ಲಿದ್ದ ಪೊಲೀಸ್ ಜನಾರ್ದನ ಅವರು ಮುಂಭಾಗದಲ್ಲಿ ಮುನೀರ್ ಎಂಬಾತ ಚಲಾಯಿಸುತ್ತಿದ್ದ ಲಾರಿ ಏರಿದರು.
ಇದೇ ಸಂದರ್ಭ ಅಡ್ಯನಡ್ಕದಿಂದ ಕೇರಳಕ್ಕೆ ತರಕಾರಿ ಸಾಗಿಸುವ ಲಾರಿ ಮಧ್ಯೆ ಪ್ರವೇಶಿಸಿತು. ಪೊಲೀಸರು ಅದಕ್ಕಾಗಿ ಗೇಟು ತೆಗೆಯುತ್ತಿದ್ದಾಗ ಮುಂಭಾಗದಲ್ಲಿದ್ದ ಮರಳು ಲಾರಿಯ ಚಾಲಕ ಲಾರಿ ಸಹಿತ ಪರಾರಿಯಾಗಲು ಯತ್ನಿಸಿದ್ದಾನೆ.
ಏಕಾಏಕಿ ಮುನ್ನುಗ್ಗಿದ್ದರಿಂದ ಚೆಕ್ಪೋಸ್ಟ್ ಸಿಬ್ಬಂದಿ ಕಕ್ಕಾಬಿಕ್ಕಿಯಾದರು. ಲಾರಿ ಏರಿದ ಪೊಲೀಸ್ ಜನಾರ್ದನ ಅವರು ಚಾಲಕನಿಗೆ ಲಾರಿ ನಿಲ್ಲಿಸಲು ತಿಳಿಸಿದಾಗ ಚಾಲಕ ನಿಲ್ಲಿಸುತ್ತಿದ್ದಂತೆ, ಗೇಟ್ ತಪ್ಪಿಸಿ ಮುನ್ನುಗ್ಗಿದ ಎ.ಕೆ. ಹಸನ್ ಸವಾದ್ ಚಲಾಯಿಸುತ್ತಿದ್ದ ಮತ್ತೊಂದು ಲಾರಿ ವೇಗವಾಗಿ ಬಂದು ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಪೊಲೀಸ್ ಚಿದಾನಂದ್ ಅವರು ಹಿಂದಿನ ಲಾರಿ ಏರಲು ಪ್ರಯತ್ನಿಸಿದರೂ ಸಫಲರಾಗಲಿಲ್ಲ.
ಕೊನೆಗೂ ಪೊಲೀಸರು ಅವೆರಡನ್ನೂ ವಶಪಡಿಸಿಕೊಂಡಿದ್ದಾರೆ. ಒಂದು ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ವಶಕ್ಕೆ ಪಡೆದ ಲಾರಿಗಳನ್ನು ಗಣಿ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಎರಡು ಲಾರಿಗಳಲ್ಲೂ ಕೇರಳಕ್ಕೆ ಮರಳು ಸಾಗಾಟದ ಬಗ್ಗೆ ಯಾವ ಪರವಾನಗಿಯೂ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮರಳು ಮಾಫಿಯದ ಬಗ್ಗೆ ಕಾರ್ಯಾಚರಣೆ ನಡೆಸುವ ಪೊಲೀಸರೂ ಕೂಡ ಜೀವ ಭಯದಿಂದ ಕರ್ತವ್ಯ ನಿರ್ವಹಿಸುವಂತಾಗಿದೆ.
ಚಲಿಸುವ ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ
ಪಡುಬಿದ್ರಿ: ಚಲಿಸುವ ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಇಲ್ಲಿನ ನಂದಿಕೂರು ಗ್ರಾಮದಲ್ಲಿ ನಡೆದಿದೆ. ರಾಜೇಶ್ ಶೇರಿಗಾರ (25) ಮೃತರು.
ಈತ ಕಟಪಾಡಿ ಪೇಟೆಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ವಿಠ್ಠಲ ಶೇರಿಗಾರ ಎಂಬವರ ಮಗ. ಕಟಪಾಡಿ ಮೂಡುಬೆಟ್ಟು ಪಾಂಡಿಹಿತ್ಲು ನಿವಾಸಿ. ಇಲ್ಲಿನ ಸುಜ್ಲಾನ್ ಕಂಪನಿಯಲ್ಲಿ ವೆಲ್ಡಿಂಗ್ ಕಾರ್ಮಿಕನಾಗಿದ್ದ ಈತ ಇತ್ತೀಚೆಗೆ ಕೆಲಸ ಕಳೆದುಕೊಂಡಿದ್ದ. ನಂತರ ತಂದೆಯೊಂದಿಗೆ ಕಟಪಾಡಿಯ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದ.
ಇತ್ತೀಚೆಗೆ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಈತ ಮಂಗಳವಾರ ಉಡುಪಿಯ ಖಾಸಗಿ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿದ್ದು ವೈದ್ಯರು ತಕ್ಷಣ ಒಳರೋಗಿಯಾಗಿ ದಾಖಲಾಗುವಂತೆ ತಿಳಿಸಿದ್ದರು. ಆದರೆ ಆಸ್ಪತ್ರೆಗೆ ದಾಖಲಾಗದೇ ಮನೆಗೆ ಬಂದಿದ್ದ. ಬಹುಶಃ ಇದೇ ಕಾರಣಕ್ಕೆ ನೊಂದು ಬುಧವಾರ ಬೆಳಗ್ಗೆ ನಂದಿಕೂರಿಗೆ ಬೈಕಿನಲ್ಲಿ ಆಗಮಿಸಿ11 ಗಂಟೆಗೆ ಮುಂಬೈನಿಂದ ಮಂಗಳೂರಿಗೆ ಬರುತ್ತಿದ್ದ ಎಕ್ಸ್ಪ್ರೆಸ್ ರೈಲಿಗೆ ಎದುರಾಗಿ ಹಳಿಯ ಮೇಲೆ ನಿಂತುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಡುಬಿದ್ರಿ ಠಾಣಾಧಿಕಾರಿ ಅಜ್ಮತ್ ಅಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಸ್ಪತ್ರೆಯಲ್ಲಿ ವೃದ್ಧ ರೋಗಿ ಸಾವು;
ನರ್ಸ್, ಆಯಾಗಳ ಮೇಲೆ ಹಲ್ಲೆ
ಮಂಗಳೂರು: ಆಸ್ಪತ್ರೆಯಲ್ಲಿ ತರ್ತು ಚಿಕಿತ್ಸೆಗೆ ದಾಖಲಾಗಿದ್ದ ವೃದ್ಧ ಮೃತಪಟ್ಟ ಹಿನ್ನೆಲೆಯಲ್ಲಿ ನರ್ಸ್ ಮತ್ತು ಆಯಾಗಳಿಗೆ ಉದ್ರಿಕ್ತ ಗುಂಪು ಹಲ್ಲೆ ನಡೆಸಿದೆ. ಕುಂಞ ಹಾಜಿ (80) ಎಂಬವರು ಚಿಕಿತ್ಸೆಗೆ ಎಂದು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಸಾಮಾನ್ಯ ವಾರ್ಡ್ನಲ್ಲಿದ್ದ ಅವರನ್ನು ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ತುರ್ತು ನಿಗಾ ವಿಭಾಗಕ್ಕೆ ವರ್ಗಾಯಿಸಲಾಯಿತು. ದೇಹದ ಎಲ್ಲ ಅಂಗಗಳು ಕೆಲಸ ಮಾಡದ ಹಿನ್ನೆಲೆಯಲ್ಲಿ ಮೃತಪಟ್ಟರು.
ಮೃತರ ಪುತ್ರ ಆತನ ಗೆಳೆಯರಾದ ಬೇರೆ ಆಸ್ಪತ್ರೆಯ ವೈದ್ಯರುಗಳಿದ್ದ ಗುಂಪು ತಕ್ಷಣ ತುರ್ತು ನಿಗಾ ಘಟಕಕ್ಕೆ ನುಗ್ಗಿ ವೈದ್ಯರಿಗೆ ಥಳಿಸಲು ಮುಂದಾದರು. ವೈದ್ಯರು ತಪ್ಪಿಸಿಕೊಂಡಿದ್ದು, ಎದುರಿಗೆ ಸಿಕ್ಕ ನರ್ಸ್ಗಳು ಏಟು ತಿನ್ನಬೇಕಾಯಿತು. ಅಡ್ಡ ಬಂದ ಆಯಾಗಳ ಮೇಲು ಹಲ್ಲೆ ನಡೆಸಿದರು. ಹಲ್ಲೆ ನಡೆಸಿದವರಲ್ಲಿ ಮೂವರು ಬೇರೆ ಆಸ್ಪತ್ರೆಯ ವೈದ್ಯರೂ ಸೇರಿದ್ದಾರೆ ಎಂದು ವಿಭಾಗದ ಇನ್ಛಾರ್ಜ್ ಬಂದರು ಪೊಲೀಸರಿಗೆ ದೂರು ನೀಡಿದ್ದಾರೆ. ಪಾಂಡೇಶ್ವರ ಸಬ್ ಇನ್ಸ್ಪೆಕ್ಟರ್ ರಾಮಕೃಷ್ಣ ಆಸ್ಪತ್ರೆಗೆ ಆಗಮಿಸಿ ತಪಾಸಣೆ ನಡೆಸಿದ್ದಾರೆ. ಪೆಟ್ಟು ತಿಂದ ನರ್ಸ್ ಮತ್ತು ಗಾಯಗೊಂಡು ಚಿಕಿತ್ಸೆಪಡೆಯುತ್ತಿರುವ ಆಯಾ ಹೇಳಿಕೆಗಳನ್ನು ಪಡೆದಿದ್ದು, ಪ್ರಕರಣ ದಾಖಲಿಸಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ: ಏಳು ವರ್ಷ ಸಜೆ
ಮಂಗಳೂರು: ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಜಿಲ್ಲಾ ಸೆಶನ್ಸ್ ನ್ಯಾಯಾಯಲಯ 7 ವರ್ಷ ಸಜೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಮಂಗಳೂರು ಪಡುಪೆರೂರು ಚಾವಂಡಿಪಲ್ಕೆಯ ದಿನೇಶ್ (27)ಶಿಕ್ಷೆಗೆ ಒಳಗಾದವ. ಬಜ್ಪೆ ಕಿನ್ನಿಪದವು ಫೈಲಾ ಹೌಸ್ ಮನೋಜ್ ಬಿ.ಶೆಟ್ಟಿ (33) ತಲೆಮರೆಸಿಕೊಂಡಿದ್ದಾನೆ. 2011ರ ಜೂ.24ರಂದು ಬಜ್ಪೆಯ ದಲಿತ ಸಮುದಾಯದ 12ರ ಹರೆಯದ ಬಾಲಕಿ ಶಾಲೆಗೆ ತೆರಳುತ್ತಿದ್ದಾಗ ಆಕೆಯನ್ನು ಪುಸಲಾಯಿಸಿ ರಿಕ್ಷಾ ಮೂಲಕ ಕೌಡೂರು ಪದವಿನ ತನ್ನ ಬಾಡಿಗೆ ಮನೆಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಜತೆಗೆ ಗೆಳೆಯ ದಿನೇಶ್ ಅಮೀನ್ನನ್ನು ಕರೆಸಿ ಬಾಲಕಿ ಮೇಲೆ ಸತತ ಅತ್ಯಾಚಾರ ನಡೆಸಿದ್ದ. ಈ ವಿಚಾರ ಎಲ್ಲೂ ಹೇಳಬಾರದು ಎಂದು ಜೀವ ಬೆದರಿಕೆ ಒಡ್ಡಿದ್ದರು. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೂವಾರಿ ಮನೋಜ್ ಶೆಟ್ಟಿ ಹೈಕೋರ್ಟ್ನಿಂದ ಜಾಮೀನು ಪಡೆದುಕೊಂಡಿದ್ದ, ತೀರ್ಪು ಪ್ರಕಟವಾಗುತ್ತದೆ ಎನ್ನುವ ಹಂತದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ನಾಪತ್ತೆಯಾಗಿದ್ದ. ಅಪರಾಧಿಗೆ ವಿಧಿಸಿ ದಂಡದ ಮೊತ್ತದಲ್ಲಿ 8 ಸಾವಿರ ಸಂತ್ರಸ್ತೆಗೆ ನೀಡಬೇಕು, ದಂಡ ತೆರಲು ತಪ್ಪಿದ್ದಲ್ಲಿ ಮತ್ತೆ 6 ತಿಂಗಳು ಶಿಕ್ಷೆ ಅನುಭವಿಸುವಂತೆ ಉಮಾ ಎಂ.ಜಿ. ಆದೇಶಿಸಿದರು.ಸರ್ಕಾರಿ ಅಭಿಯೋಜಕ ಸಿ.ವೆಂಕಟರಮಣಸ್ವಾಮಿ ವಾದಿಸಿದ್ದರು.