'ರಂಗ್' ತುಳು ಚಿತ್ರದಲ್ಲಿ ರಂಜಿಸಲಿರುವ ಜಾನಿ ಲಿವರ್
ಮಂಗಳೂರು: 'ನಮಸ್ಕಾರ.. ಮೈಕ್ ಉಂಡತಾ... ಆನ್ ಆಪುಂಡತಾ..
ಯಾನ್ ಆಂಧ್ರದಾಯೆ, ಆಂಡ ಅಯಿಟ್ ಕೆಲಸ ಮಲ್ತಿಜಿ... ಕನ್ನಡಡ್ಲಾ ಕೆಲಸ ಮಲ್ತಿಜಿ... ಆಂಡ ಫಸ್ಟ್ ಟೈಮ್ ತುಳು ಫಿಲ್ಮ್‌ಡ ಆಕ್ಟ್ ಮಲ್ತೊಂದುಲ್ಲೆ.. ಮಸ್ತ್, ಮಸ್ತ್ ಖುಷಿ ಆವೊಂದುಂಡು..'
ಈ ಡೈಲಾಗ್ ಹೇಳಿದವರು ಬಾಲಿವುಡ್ ಕಾಮಿಡಿ ಹೀರೋ ಜಾನಿ ಲಿವರ್.
ಕಟೀಲೇಶ್ವರಿ ಕಂಬೈನ್ಸ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ 'ರಂಗ್' ತುಳು ಚಿತ್ರದಲ್ಲಿ ಅಭಿನಯಿಸುತ್ತಿರುವ ಜಾನಿ, ನಿರರ್ಗಳವಾಗಿ ತುಳು ಮಾತನಾಡಿದರು. ಬುಧವಾರ ಅಡ್ಯಾರ್ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಚಿತ್ರೀಕರಣದ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಮ್ಮ ತುಳು ಭಾಷಾ ಅಭಿಮಾನವನ್ನು ವ್ಯಕ್ತಪಡಿಸಿದ ಪರಿಯಿದು.
ಆರ್‌ಜೆ ಆಗಿ ಮಿಂಚುತ್ತಿದ್ದ ವಿಸ್ಮಯಿ ವಿನಾಯಕ್ ಅವರು ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ನಾಯಕ ನಟನಾಗಿ ಅರ್ಜುನ್ ಕಾಪಿಕಾಡ್, ನಾಯಕಿಯಾಗಿ ಬೋಳೂರಿನ ದೀಕ್ಷಿತಾ ಆಚಾರ್ಯ ಅಭಿನಯಿಸುತ್ತಿದ್ದಾರೆ. ಸುಮಾರು ರು. 80 ಲಕ್ಷ ಬಜೆಟ್‌ನ ಚಿತ್ರವನ್ನು ಮಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗುತ್ತಿದೆ. ಕಾಲೇಜು, ಹಳ್ಳಿ ಪ್ರದೇಶ, ಭಾವನಾತ್ಮಕತೆ ಒಳಗೊಂಡಿರುವ ಚಿತ್ರದಲ್ಲಿ ಹಾಸ್ಯ ಕಲಾವಿದರಾಗಿ ಜಾನಿ ಲಿವರ್, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಕುಸಲ್ದರಸೆ ನವೀನ್ ಡಿ ಪಡೀಲ್, ಸುರೇಶ್ ಬಂದಲೆ, ವಿನೀತ್, ವಿಸ್ಮಯ್ ವಿನಾಯಕ್ ಅಭಿನಯಿಸಿದ್ದಾರೆ. ಒಟ್ಟು 5 ಹಾಡುಗಳಿದ್ದು, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶಿಸಿದ್ದಾರೆ. 2014 ಏಪ್ರಿಲ್‌ನಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ ಎಂದು ನಿರ್ದೇಶಕ ವಿಸ್ಮಯಿ ವಿನಾಯಕ್ ಹೇಳಿದರು.
ಗೋಷ್ಠಿಯಲ್ಲಿ ನಿರ್ಮಾಪಕ ದೇವ್‌ದಾಸ್, ಪ್ರಮೀಳಾ ದೇವ್, ಛಾಯಾಗ್ರಾಹಕ ಸಂದೀಪ್ ಭಟ್ಟಾಚಾರ್ಯ, ಸಹ ನಿರ್ದೇಶಕ ಸುಹಾನ್ ಪ್ರಸಾದ್ ಇದ್ದರು.