ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

10 ರಿಂದ ಅಂತರ್ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟ

Lingaraj Badiger
Updated On : 6 Dec 2013, 12:46 pm

ಮಂಗಳೂರು: ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಡಿ. 10 ರಿಂದ 12ರವರೆಗೆ ಮಂಗಳಾ ಕ್ರೀಡಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು 'ಅಥ್ಲೆಟಿಕ್ ಕ್ರೀಡಾಕೂಟ' ನಡೆಯಲಿದೆ.
3 ದಿನ ನಡೆಯುವ ಕ್ರೀಡಾಕೂಟವನ್ನು ಬೆಳಗ್ಗೆ 11ಕ್ಕೆ ಅಂತಾರಾಷ್ಟ್ರೀಯ ಕ್ರೀಡಾಪಟು ಡಬಲ್ ಒಲಿಂಪಿಯನ್ ಪ್ರಮೀಳಾ ಅಯ್ಯಪ್ಪ ಉದ್ಘಾಟಿಸುವರು. ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸುವರು. ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಟಿ.ಸಿ. ಶಿವಶಂಕರಮೂರ್ತಿ, ಮಂಗಳೂರು ದಕ್ಷಿಣ ಶಾಸಕ ಜೆ.ಆರ್. ಲೋಬೊ, ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಪಾಲ್ಗೊಳ್ಳುವರು ಎಂದು ಹಳೆಯಂಗಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಭಟ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ 70 ಕಾಲೇಜುಗಳ 500 ಮಂದಿ ಕ್ರೀಡಾಪಟುಗಳು ಭಾಗವಹಿಸಿದ್ದು, 150 ಮಂದಿ ಕ್ರೀಡಾ ಅಧಿಕಾರಿಗಳು ನಿರ್ಣಾಯಕರಾಗಿ ಕಾರ್ಯನಿರ್ವಹಿಸುತ್ತಾರೆ. ಇದೇ ಸಂದರ್ಭ ಅಂತಾರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟುಗಳು ಕ್ರೀಡಾಜ್ಯೋತಿಯಲ್ಲಿ ಸಹಕರಿಸುವರು. ಪ್ರಥಮ ಬಾರಿಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಉಪಯೋಗಿಸಿ ಕ್ರೀಡಾಕೂಟ ನಡೀತಾ ಇದ್ದು, ಇದು ಕ್ರೀಡಾಪಟುಗಳಿಗೆ ಮುಂದಿನ ರಾಷ್ಟ್ರಮಟ್ಟದ ಅಥ್ಲೆಟಿಕ್‌ನಲ್ಲಿ ಪಾಲ್ಗೊಳ್ಳಲು ಸುಲಭವಾಗುತ್ತದೆ ಎಂದು ಕಾಲೇಜಿನ ದೈಹಿಕ ನಿರ್ದೇಶಕ ಪ್ರವೀಣ್ ಕುಮಾರ್ ಹೇಳಿದರು. ಡಿ. 12 ರಂದು ಸಮಾರೋಪದಲ್ಲಿ ಸಚಿವ ಅಭಯಚಂದ್ರ ಜೈನ್, ಮಂಗಳೂರು ಉತ್ತರ ಶಾಸಕ ಮೈದಿನ್ ಬಾವ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ.ಜಿ. ಯೋಗಾನಂದ ಹಾಗೂ ಮಂಗಳೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಗ್ಡೆ ಭಾಗವಹಿಸುವರು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್. ವಸಂತ್ ಹೇಳಿದರು.
--
ಇಂದಿನಿಂದ ಇನ್‌ಸ್ಪೇಸ್
ಮಂಗಳೂರು: ಭಗವತಿ ನಗರದ ಮಹಾಲಸಾ ಚಿತ್ರಕಲಾ ಶಾಲೆಯ ವತಿಯಿಂದ ಡಿ. 6 ರಿಂದ 8ರವರೆಗೆ ನಗರದ ಸರ್ಕಾರಿ ನೌಕರರ ಸಭಾಂಗಣದಲ್ಲಿ 'ಇನ್‌ಸ್ಪೇಸ್‌' ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಪ್ರದರ್ಶನದಲ್ಲಿ ಇತ್ತೀಚೆಗೆ ಪುತ್ತೂರು ಕಾರಂತ ಬಾಲವನದಲ್ಲಿ ನಡೆದ ಪ್ರಕೃತಿ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ 30 ಕಲಾಕೃತಿಗಳಿರುತ್ತದೆ. ಕಾರ್ಯಕ್ರಮವನ್ನು ಬೆಳಗ್ಗೆ 11ಕ್ಕೆ ಅಬಕಾರಿ ಉಪಾಯುಕ್ತ ಜಾರ್ಜ್ ಪಿಂಟೋ ಉದ್ಘಾಟಿಸುವರು. ಮಹಾಲಸಾ ಶಿಕ್ಷಣ ಸಮಿತಿ ಆಡಳಿತ ನಿರ್ದೇಶಕ ಬಾಬುರಾವ್, ಹಿರಿಯ ಕಲಾವಿದ ಪುಂಚಿತ್ತಾಯ, ಹವ್ಯಾಸಿ ಕಲಾವಿದ ವೈ. ಸುನಿಲ್ ಶೆಟ್ಟಿ ಪಾಲ್ಗೊಳ್ಳುವರು ಎಂದು ಮಹಾಲಸಾ ಪ್ರಾಚಾರ್ಯ ಪುರುಷೋತ್ತಮ ನಾಯಕ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಒಟ್ಟು 12 ರೇಖಾ ಚಿತ್ರಗಳು ಪ್ರದರ್ಶನದಲ್ಲಿರುತ್ತದೆ. ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 7ರವರೆಗೆ ವೀಕ್ಷಣೆಗಾಗಿ ತೆರೆದಿರುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement