ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಕ್ಷರ ದಾಸೋಹ ನೌಕರರ ಪ್ರತಿಭಟನೆ

Lingaraj Badiger
Updated On : 6 Dec 2013, 12:43 pm

ಮಂಗಳೂರು: ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಅಡುಗೆ ಸಹಾಯಕಿಯರಿಗೆ ವೇತನ ಹಾಗೂ ಸಾಮಾಜಿಕ ಭದ್ರತೆ ಒದಗಿಸುವಂತೆ ಆಗ್ರಹಿಸಿ ದ.ಕ. ಜಿಲ್ಲೆಯ ಅಡುಗೆ ಸಹಾಯಕಿಯರು ದ.ಕ. ಜಿಲ್ಲಾ ಪಂಚಾಯ್ತಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಸಿಐಟಿಯು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ವಸಂತ್ ಆಚಾರಿ, ಮಕ್ಕಳಿಗೆ ವಿವಿಧ ಖಾದ್ಯಗಳನ್ನು ನೀಡುತ್ತೇವೆ ಎಂಬುವುದಾಗಿ ಆಕರ್ಷಕ ಘೋಷಣೆ ಮಾಡುತ್ತಾರೆ. ಆದರೆ ಅಡುಗೆ ತಯಾರಿಸುವ ಸಹಾಯಕಿಯರಿಗೆ ರು. 1,100 ಮಾಸಿಕ ವೇತನ ನೀಡಿ, ಹೆಚ್ಚಳ ಮಾಡಿ ಎಂದರೆ ಆ ಕುರಿತು ಮುಖ್ಯಮಂತ್ರಿಯವರು ಮಾತೆತ್ತುತ್ತಿಲ್ಲ ಎಂದರು.
ಶಾಲೆಗಳಲ್ಲಿ ಬಿಸಿಯೂಟ ಬಂದ್ ಮಾಡಿ ಹೋರಾಟ ನಡೆಯಲಾಗಿದ್ದು, ಹೋರಾಟ ಯಶಸ್ವಿಯಾಗುವ ತನಕ ಪ್ರತಿಭಟನೆ ಮುಂದುವರಿಯಲಿದೆ. ತಾಲೂಕುಮಟ್ಟದಲ್ಲಿ ಪ್ರತಿಭಟನೆ ಆಗುತ್ತಿದ್ದು, ತಾಲೂಕು ಕಚೇರಿಯೆದುರು ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಅಡುಗೆ ಸಹಾಯಕಿಯರಿಗೆ ರು. 3 ಸಾವಿರ ವೇತನ ಹಾಗೂ ಸಾಮಾಜಿಕ ಭದ್ರತೆ ಒದಗಿಸಬೇಕು. ಅಲ್ಲದೆ ಬಿಸಿಯೂಟವನ್ನು ಇಸ್ಕಾನ್ ಸಂಸ್ಥೆಗೆ ಬಿಸಿಯೂಟ ಯೋಜನೆಯನ್ನು ನೀಡಲಾಗಿದ್ದು, ಇದನ್ನು ಶಾಲೆಗಳಲ್ಲಿ ಮಾಡುವಂತೆ ಕ್ರಮ ವಹಿಸಬೇಕು ಎಂದು ಬಿಸಿಯೂಟ ಅಡುಗೆ ಸಹಾಯಕಿಯರ ಸಂಘದ ಜಿಲ್ಲಾಧ್ಯಕ್ಷ ಪದ್ಮಾವತಿ ಶೆಟ್ಟಿ ಹೇಳಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಗಿರಿಜಾ ಮೂಡುಬಿದಿರೆ, ಖಜಾಂಚಿ ಭವ್ಯ, ಸಿಐಟಿಯು ಮುಖಂಡೆ ರಾಧಾ ಮೂಡುಬಿದಿರೆ ಇದ್ದರು.
ಸುಳ್ಯ ವರದಿ:  ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹ ಗುರುವಾರ ಸುಳ್ಯದಲ್ಲಿ ನಡೆಯಿತು.
ಅಕ್ಷರ ದಾಸೋಹ ಕಾರ್ಯಕರ್ತರು ಬಿಸಿಯೂಟ ಬಂದ್ ಮಾಡಿ ಸುಳ್ಯ ಸಿಐಟಿಯು ಕಚೇರಿಯಿಂದ ತಾಲೂಕು ಪಂಚಾಯಿತಿವರೆಗೆ ಮೆರವಣಿಗೆ ನಡೆಸಿ ಅಲ್ಲಿ ಧರಣಿ ನಿರತರಾದರು.
ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ನಾಯಕ ಕೆ.ಪಿ. ರಾಬರ್ಟ್ ಡಿಸೋಜಾ ಮಾತನಾಡಿ, ಕನಿಷ್ಠ ಕೂಲಿಗೆ ಅಕ್ಷರ ದಾಸೋಹ ನೌಕರರನ್ನು ದುಡಿಸುತ್ತಿರುವುದು ಸರ್ಕಾರಕ್ಕೆ ನಾಚಿಕೆಗೇಡು. ಈ ನೌಕರರನ್ನು ನಾಯಿಗಿಂತ ಕಡೆಯಾಗಿ ಕಾಣಲಾಗುತ್ತದೆ ಎಂದರು.
ಕಾರ್ಯ ನಿರ್ವಹಣಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಲತಾಪದವು, ಚಂದ್ರಪ್ರಭಾ, ಉಮಾವತಿ, ಚಿನ್ನಮ್ಮ, ಸುನೀತಾ, ಕಮಲ, ಕೋಮಲ, ಹೇಮಲತಾ, ಕುಸುಮ, ಚಂದ್ರಾವತಿ, ಲೀಲಾವತಿ ಇದ್ದರು.
ಪುತ್ತೂರು ವರದಿ: ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು) ನೇತೃತ್ವದಲ್ಲಿ ಪುತ್ತೂರು ತಾಲೂಕು ಚೇರಿ ಮುಂಭಾಗ ಅಕ್ಷರ ದಾಸೋಹ ನೌಕರರಿಂದ ಗುರುವಾರ ಉಪವಾಸ ಸತ್ಯಾಗ್ರಹ ಹಾಗೂ ಪ್ರತಿಭಟನಾ ಸಭೆ ನಡೆಯಿತು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಿ.ಎಂ.ಭಟ್ ಮಾತನಾಡಿ, ಅಕ್ಷರ ದಾಸೋಹ ನೌಕರರನ್ನು ಸರ್ಕಾರ ಕಡಿಮೆ ವೇತನ ನೀಡಿ ಜೀತದಾಳುಗಳಂತೆ ದುಡಿಸುತ್ತಿದೆ ಎಂದು ಆರೋಪಿಸಿದರು.
ಕನಿಷ್ಠ ರು. 10 ಸಾವಿರ ನೀಡಿ: ಅಕ್ಷರ ದಾಸೋಹ ನೌಕರರಿಗೆ ಕನಿಷ್ಠ ರು. 10 ಸಾವಿರ ನೀಡಬೇಕು ಎಂದು ಆಗ್ರಹಿಸಿದ ಅವರು ತಕ್ಷಣ ಎಲ್ಲಾ ನೌಕರರಿಗೆ ಕನಿಷ್ಠ ರು. 3 ಸಾವಿರ ನೀಡಬೇಕು ಎಂದು ಆಗ್ರಹಿಸಿದರು.
ಪುತ್ತೂರು ತಾಲೂಕು ಸಿಐಟಿಯು ಕಾರ್ಯದರ್ಶಿ ನ್ಯಾಯವಾದಿ ಪಿ.ಕೆ. ಸತೀಶನ್ ಮಾತನಾಡಿದರು. ರೇಲ್ವೆ ನಿಲ್ದಾಣದ ಬಳಿಯಲ್ಲಿರುವ ಸಿಐಟಿಯು ಕಚೇರಿಯಿಂದ ತಾಲೂಕು ಕಚೇರಿ ತನಕ ಪ್ರತಿಭಟನಾ ರ್ಯಾಲಿ ನಡೆಸಿದರು. ಬೆಳಗ್ಗಿನಿಂದ ಸಂಜೆಯ ತನಕ ಸತ್ಯಾಗ್ರಹ ನಡೆಸಲಾಯಿತು. ಪ್ರತಿಭಟನಾಗಾರರು ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು. ಸಂಘದ ತಾಲೂಕು ಅಧ್ಯಕ್ಷೆ ಜಯಂತಿ, ಕಾರ್ಯದರ್ಶಿ ಲಿಸ್ಸಿ ವರ್ಗೀಸ್, ಸದಸ್ಯರಾದ ಮಿನಿ ಫೆರ್ನಾಂಡಿಸ್, ಚಂದ್ರಿಕಾ, ವೇದಾವತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement