ಇಂದು ತುಳುನಾಡ್ದ ಜಾತ್ರೆ ಸಮಿತಿ ಸಭೆ
ಮಂಗಳೂರು: ತುಳುನಾಡ್ದ ಜಾತ್ರೆ-ಬಲೇ ತೇರ್ ಒಯಿಪುಗ ಕಾರ್ಯಕ್ರಮದ ಪ್ರಯುಕ್ತ ಡಿ. 6 ರಂದು ಸಂಜೆ 4.30ಕ್ಕೆ ಬಂಟ್ಸ್ ಹಾಸ್ಟೆಲ್ ಎ.ಬಿ. ಶೆಟ್ಟಿ ಮೆಮೊರಿಯಲ್ ಸಭಾಂಗಣದಲ್ಲಿ ಮಂಗಳೂರು ತಾಲೂಕು ಸಮಿತಿಯ ರಚನಾ ಸಭೆ ನಡೆಯಲಿದೆ ಎಂದು ವಿಜಯ ರಜತ ಸಂಭ್ರಮ ಸಮಿತಿಯ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರ ಜ. 5 ರಂದು ನಗರದ ನೆಹರೂ ಮೈದಾನದಲ್ಲಿ ನಡೆಯುವ ತುಳುನಾಡ್ದ ಜಾತ್ರೆ ಕಾರ್ಯಕ್ರಮವು ತುಳು ಭಾಷೆ, ಸಂಸ್ಕೃತಿ, ಜಾಗೃತಿಗಾಗಿ ನಡೆಯುತ್ತಿದೆ. ಇದರಲ್ಲಿ ಜಾತಿ ಮತ ಭೇದವಿಲ್ಲದೆ ಎಲ್ಲ ತುಳು ಬಾಂಧವರು ಪಾಲ್ಗೊಳ್ಳುತ್ತಿದ್ದಾರೆ ಎಂದರು. ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಪ್ರಧಾನ ಕಾರ್ಯದರ್ಶಿ ಟಿ. ತಾರಾನಾಥ ಕೊಟ್ಟಾರಿ, ಜಯಂತ್ ಜೆ ಕೋಟ್ಯಾನ್, ಮಹಿಳಾ ವಿಭಾಗದ ಉಪಾಧ್ಯಕ್ಷೆ ನಿವೇದಿತಾ ಎನ್ ಶೆಟ್ಟಿ ಇದ್ದರು.
ಇಂದಿನಿಂದ ಸರ್ವ ಶಿಕ್ಷಣ ಅಭಿಯಾನ ಪ್ರಚಾರಾಂದೋಲನ
ಪುತ್ತೂರು: ಸರ್ವ ಶಿಕ್ಷಣ ಅಭಿಯಾನದ ವತಿಯಿಂದ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಸರ್ವ ಶಿಕ್ಷಣ ಅಭಿಯಾನದ ಚಟುವಟಿಕೆಗಳ 'ಪ್ರಚಾರಾಂದೋಲನ ದರ್ಶನ- 2013' 6ರಿಂದ ತಾಲೂಕಿನಾದ್ಯಂತ ನಡೆಯಲಿದೆ ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಹರಿಕಿರಣ್ ತಿಳಿಸಿದರು. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಗಂಡುಕಲೆ ಯಕ್ಷಗಾನದ ಮೂಲಕ ನಡೆಯುವ ಈ ಜಾಥಾವು 6ರಂದು ಪುತ್ತೂರು ವೃತ್ತದ ಕೌಡಿಚ್ಚಾರಿನ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಅಪರಾಹ್ನ ಉದ್ಘಾಟನೆಗೊಳ್ಳಲಿದೆ. 8ರಂದು ಪೂರ್ವಾಹ್ನ ಕಡಬ ವೃತ್ತದ ರಾಮಕುಂಜ ಬದೆಂಜ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನ, 24ರಂದು ಅಪರಾಹ್ನ ಸವಣೂರು ವೃತ್ತದ ಕಾಣಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. 28ರಂದು ರಾತ್ರಿ ಉಪ್ಪಿನಂಗಡಿ ವೃತ್ತದ ಹಿರೇಬಂಡಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್., ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್, ಬಿ.ಆರ್.ಪಿ. ರಮೇಶ್ ಉಳಯ ಇದ್ದರು.
14 ಚೀಲ ಅಡಕೆ ಕಳವು
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ನೆಲ್ಯಾಡಿಯಲ್ಲಿ ಎರಡು ಅಂಗಡಿಗೆ ಕಳ್ಳರು ನುಗ್ಗಿ 14 ಗೋಣಿ ಅಡಕೆ ಕಳವು ಮಾಡಿದ್ದಾರೆ. ನೇರಳೆಕಟ್ಟೆ ನಿವಾಸಿ ಇಸಾಕ್ ಎಂಬವರು ನೆಲ್ಯಾಡಿಯಲ್ಲಿ ನಡೆಸುತ್ತಿದ್ದ ಅಂಗಡಿಯಲ್ಲಿ ಈ ಕೃತ್ಯ ನಡೆದಿದೆ. ಬಳಿಕ ಸಮೀಪದ ಕೃಷ್ಣಪ್ಪ ಎಂಬವರ ಕಟ್ಲೇರಿ ಅಂಗಡಿಗೂ ನುಗ್ಗಿದ್ದ ಕಳ್ಳರು ಚಿಲ್ಲರೆ ಮೊತ್ತವನ್ನು ಕದ್ದೊಯ್ದಿದ್ದಾರೆ ಎಂದು ತಿಳಿಸಲಾಗಿದೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಕರೆಂಟಿಲ್ಲ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿ ಡಿ.6ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ನಡೆಯಲಿದೆ. ಈ ವೇಳೆಯಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ವಿದ್ಯುತ್ ನಿಲುಗಡೆ ಪ್ರದೇಶ-ಮಲ್ಲಿಕಟ್ಟೆ, ಜಾರ್ಜ್ ಮಾರ್ಟಿಸ್ ರಸ್ತೆ, ಆಳ್ವಾರಿಸ್ ರಸ್ತೆ, ಸಿಟಿ ಆಸ್ಪತ್ರೆ, ಬಂಟ್ಸ್ಹಾಸ್ಟೆಲ್, ಆರ್ಯಸಮಾಜ ರಸ್ತೆ, ಲೈಟ್ಹೌಸ್ ಹಿಲ್ ರೋಡ್, ಬಾವುಟಗುಡ್ಡೆ ಹಾಗೂ ಸುತ್ತಲಿನ ಪ್ರದೇಶಗಳು.