ಗುರುಪುರ ಮಠದಲ್ಲಿ ಹಿಂದೂ ಯುವ ಸಮಾವೇಶ
ಮಂಗಳೂರು: ಗುರುಪುರ ವಜ್ರದೇಹಿ ಮಠದ ಜಾತ್ರೆ ಜ.3ರಿಂದ 5ವರೆಗೆ ನಡೆಯಲಿದೆ. ಈ ಪ್ರಯುಕ್ತ ಜ.5ರಂದು ಬೃಹತ್ ಹಿಂದೂ ಸಂಗಮ ಮಠದ ವಠಾರದಲ್ಲಿ ನಡೆಯಲಿದೆ ಎಂದು ಶ್ರೀಗುರು ರಾಮಾಂಜನೇಯ ವಜ್ರದೇಹಿ ಮಠ ಟ್ರಸ್ಟ್ ಸ್ಥಾಪಕಾಧ್ಯಕ್ಷ ಶ್ರೀರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಗುರುಪುರ ವಜ್ರದೇಹಿ ಮಠದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಜಾತ್ರೆ ವಿಜೃಂಬಣೆಯಿಂದ ನಡೆಯಲಿದ್ದು, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದನಗಳ್ಳತನ, ಲವ್ ಜಿಹಾದ್, ಭಯೋತ್ಪಾದನೆ ಮೊದಲಾದ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸಲು ಬೃಹತ್ ಹಿಂದೂ ಸಂಗಮ ಎಂಬ ಸಮಾವೇಶ ಆಯೋಜಿಸಲಾಗಿದೆ. ಇದಕ್ಕೆ ಮೊದಲು ಗುರುಪುರ ಕೈಕಂಬದಿಂದ ಮಠದವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ.
ಸಮಾವೇಶದಲ್ಲಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ, ಜಂಗಮಮಠದ ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡುವರು. ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸಮಾವೇಶದ ಅಧ್ಯಕ್ಷತೆ ವಹಿಸುವರು. ಚಕ್ರವರ್ತಿ ಸೂಲಿಬೆಲೆ ಮುಖ್ಯ ಭಾಷಣ ಮಾಡುವರು. ಹಿಂದೂ ಸಂಘಟನೆಗಳ ಮುಖಂಡರಾದ ಆಶೋಕ್ ಕುಮಾರ್, ಎಂ.ಬಿ.ಪುರಾಣಿಕ್, ಶರಣ್ ಪಂಪ್‌ವೆಲ್, ಯಶೋಧರ ಚೌಟ, ವಿಜಯಶ್ರೀ, ರಮೇಶ್ ಕೆ. ಮೊದಲಾದವರು ಭಾಗವಹಿಸುವರು.
ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಜ.4ರಂದು ಸಂಜೆ 4 ಗಂಟೆಗೆ ಹಾಸ್ಯ ಕಾರ್ಯಕ್ರಮ ನಡೆಯಲಿದೆ. ಗಂಗಾವತಿ ಪ್ರಾಣೇಶ್, ಬಸವರಾಜ್ ಮಹಾಮಣಿ, ನರಸಿಂಹ ಜೋಶಿ ನಗಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಮುಖಂಡ ಶರಣ್ ಪಂಪ್‌ವೆಲ್, ಹಿಂದೂಜಾಗರಣೆ ವೇದಿಕೆಯ ಸತ್ಯಜಿತ್ ಸುರತ್ಕಲ್, ಅಣ್ಣಪ್ಪ ಪ್ರಭು, ವಿಷ್ಣು ಕಾಮತ್, ಭುಜಂಗ ಕುಲಾಲ್, ಜಗದೀಶ ಶೇಣವ ಇದ್ದರು.