ಜೇನು ಕೃಷಿಕರ ಗುಂಪಿಗೆ 'ಆವರ್ತ ನಿಧಿ'
ಮಂಗಳೂರು: ರಾಜ್ಯದಲ್ಲಿ ಜೇನು ಕೃಷಿಯನ್ನು ಉತ್ತೇಜಿಸಲು, ಜೇನು ವ್ಯವಸಾಯಗಾರರಿಗೆ ಸೌಲಭ್ಯ ಒದಗಿಸಲು ಜೇನು ವ್ಯವಸಾಯಗಾರರ ಸಂಘ(ಗುಂಪು) ರಚನೆಯಾಗುತ್ತಿದೆ. ತೋಟಗಾರಿಕಾ ಇಲಾಖೆ ಆಶ್ರಯದಲ್ಲಿ 'ಗುಚ್ಛ ಗ್ರಾಮ' ಮಾದರಿಯಲ್ಲಿ ಈ ಗುಂಪು ಅಥವಾ ಸಂಘ ರಚಿಸಲಾಗುತ್ತಿದೆ. ಜೇನು ಕೃಷಿಕರಿಗೆ ನೆರವಾಗಲು ಆವರ್ತ ನಿಧಿ ಮೂಲಕ ಜೇನು ವ್ಯವಸಾಯಗಾರರಿಗೆ ಸ್ಪಂದಿಸುವುದು ಈ ಸಂಘದ ಉದ್ದೇಶ.
ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯಲ್ಲಿ ಕಳೆದ ವರ್ಷ ಕಾಳುಮೆಣಸು, ಕೋಕೋ, ಬಾಳೆ, ಅನಾನನು ಬೆಳೆಗಾರರ ಸಂಘ ರಚಿಸಲಾಗಿತ್ತು. ಅದಕ್ಕೆ ಆವರ್ತ ನಿಧಿ ನೀಡಲಾಗಿತ್ತು. ಈ ವರ್ಷ ಬೇಡಿಕೆಯನ್ನನುಸರಿಸಿ ಕೋಕೋ ಮತ್ತು ಕಾಳುಮಣಸಿಗೆ ಮಾತ್ರ ತೋಟಗಾರಿಕಾ ಇಲಾಖೆ ತಲಾ ರು. 2 ಲಕ್ಷ ಆವರ್ತ ನಿಧಿ ನೀಡಿದೆ.
ಇದು ಜೇನು ಸಂಘ: ಜಿಲ್ಲೆಯಲ್ಲಿ ಈವರೆಗೆ 11 ಸಂಘ ರಚಿಸಲಾಗಿದೆ. ಇದು ಸಹಕಾರಿ ಸಂಘವಲ್ಲ, ಸಾಲ ಅಥವಾ ಸಬ್ಸಿಡಿ ನೀಡುವುದಿಲ್ಲ. ಜೇನು ಬೇಸಾಯಗಾರರ ತಕ್ಷಣ ನೆರವಿಗೆ ಆವರ್ತ ನಿಧಿಯನ್ನು ಮಾತ್ರ ಕೊಡುತ್ತದೆ. ಪ್ರತಿ ಸಂಘ ತಲಾ ರು. 50 ಸಾವಿರ ಆವರ್ತ ನಿಧಿಯನ್ನು ಹೊಂದಿರುತ್ತದೆ. ಪ್ರಸಕ್ತ ಎಲ್ಲ ಐದು ತಾಲೂಕುಗಳಲ್ಲಿ ಸಂಘ ರಚನೆಗೊಂಡಿದೆ.
ಆವರ್ತ ನಿಧಿ ಬಳಕೆ: ಒಂದು ಸಂಘದಲ್ಲಿ ಕನಿಷ್ಠ ಏಳು ಮಂದಿ ಸದಸ್ಯರಿರಬೇಕು ಎಂಬುದು ನಿಯಮ. ಪ್ರಸ್ತುತ ಪ್ರತಿ ಸಂಘಗಳಲ್ಲಿ 50ರಷ್ಟು ಸದಸ್ಯರಿದ್ದಾರೆ. ಈ ಸಂಘವನ್ನು ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಲಾಗುತ್ತದೆ. ಜೇನು ವ್ಯವಸಾಯಗಾರರಿಗೆ ಬೇಕಾಗುವ ಜೇನು ಪೆಟ್ಟಿಗೆ, ಜೇನುಹುಳ, ಮೇಣದ ಶೀಟ್ನ್ನು ನೀಡಲಾಗುತ್ತದೆ. ಜೇನು ಪೆಟ್ಟಿಗೆಗೆ ರು. 800, ಜೇನು ಹುಳಗಳಿಗೆ ರು. 700 ಒಟ್ಟು ರು. 1,200 ಜೇನು ವ್ಯವಸಾಯಗಾರನಿಗೆ ನೀಡುತ್ತಾರೆ. ತೋಟಗಾರಿಕಾ ಇಲಾಖೆ ಈ ಮೊತ್ತ ನೀಡುವುದು ಎಲ್ಲವನ್ನು ಖರೀದಿಸಿದ ಬಳಿಕ. ಅದಕ್ಕೂ ಮೊದಲು ಆವರ್ತ ನಿಧಿಯಿಂದ ಈ ಮೊತ್ತವನ್ನು ಭರಿಸಬೇಕು. ಬಳಿಕ ಆವರ್ತ ನಿಧಿಗೆ ಈ ಮೊತ್ತವನ್ನು ಪಾವತಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಆವರ್ತ ನಿಧಿಯಲ್ಲಿ ಮೊತ್ತ ಖಾಲಿಯಾಗಲು ಆಸ್ಪದವಿಲ್ಲ.
ಸಾವಿರ ಕ್ವಿಂಟಾಲ್ ಜೇನು ಉತ್ಪಾದನೆ: ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ವಾರ್ಷಿಕ ಒಟ್ಟು 1 ಸಾವಿರ ಕ್ವಿಂಟಾಲ್ ಜೇನು ಉತ್ಪಾದನೆಯಾಗುತ್ತಿದೆ. ಇದರಲ್ಲಿ ಜೇನು ವ್ಯವಸಾಯಗಾರರ ಸಹಕಾರ ಸಂಘಕ್ಕೆ ಮಾರಾಟವಾಗುವುದು 60 ಸಾವಿರ ಕೇಜಿ ಮಾತ್ರ. ಉಳಿದ ಜೇನು ಸ್ವಂತಕ್ಕೆ, ಸಂಬಂಧಿಕರ ಪಾಲಾಗುತ್ತದೆ. ಈ ಜಿಲ್ಲೆಗಳಲ್ಲಿ 25 ಸಾವಿರ ಜೇನು ಕುಟುಂಬಗಳಿವೆ. ಈ ವರ್ಷ ಜಿಲ್ಲೆಯಲ್ಲಿ ಮಳೆ ಅಧಿಕ ಸುರಿದಿರುವುದರಿಂದ ಜೇನು ಕೃಷಿಗೆ ಥಾಯ್ಸ್ಯಾಕ್ ಬ್ರೂಡ್ ರೋಗ ತಗಲಿದ್ದು, ಇದರಿಂದ ಜೇನು ಉತ್ಪಾದನೆ ಕುಂಠಿತ ಭೀತಿ ಎದುರಾಗಿದೆ.
- ಆತ್ಮಭೂಷಣ್