ಬೇಡಿಕೆ ಈಡೇರಿಸದಿದ್ದರೆ ಚಳವಳಿ; ಅಡಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ನಿಯೋಗ
ಸುಳ್ಯ: ಅಡಕೆ ಬೆಳೆಗಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಈಗಾಗಲೇ ಮುಖ್ಯಮಂತ್ರಿ, ಕೇಂದ್ರ ಸಚಿವರು ಹಾಗೂ ಇನ್ನಿತರ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಇದರ ಜೊತೆಗೆ ನಿಯೋಗದ ಮೂಲಕವೂ ಆಗ್ರಹಿಸಲಾಗುವುದು. ಬೇಡಿಕೆಗಳು ಈಡೇರದಿದ್ದಲ್ಲಿ ಅಡಕೆ ಬೆಳೆಗಾರರ ಬೃಹತ್ ಸಮಾವೇಶ, ಪ್ರತಿಭಟನೆ ಮತ್ತು ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಜಯರಾಮ ಹಾಡಿಕಲ್ಲು, ಸಂಚಾಲಕ ಎಂ.ಡಿ.ವಿಜಯಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಳೆರೋಗ ಪರಿಹಾರಕ್ಕೆ ಸರ್ಕಾರ ನೀಡಿದ ನೆರವು ಅತ್ಯಲ್ಪವಾದರೂ ಬೆಳೆಗಾರರ ಹಿತರಕ್ಷಣೆಗೆ ಮುಂದಡಿಯಿಟ್ಟ ರಾಜ್ಯ ಸರ್ಕಾರವನ್ನು ಅಭಿನಂದಿಸುವುದಾಗಿ ಹೇಳಿದರು.
ನಮ್ಮ ಪ್ರಮುಖ ಬೇಡಿಕೆಗಳು ಅನೇಕ ಬಾಕಿ ಇದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. 15 ದಿನಗಳ ಕಾಲಾವಕಾಶದಲ್ಲಿ ಸರ್ಕಾರಗಳು ಸ್ಪಂದಿಸದಿದ್ದಲ್ಲಿ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು. ಅಡಕೆ ಬೆಳೆಗಾರರ ಸಂಘಟನೆಯ ಗ್ರಾಮ ಪ್ರತಿನಿಧಿಗಳ ಕಾರ್ಯಾಗಾರ ನಡೆಸಲು ಕೂಡಾ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಬೇಡಿಕೆಗಳು: ಕೇಂದ್ರ ಸರ್ಕಾರ ಘೋಷಿಸಿರುವ ರು. 175 ಕೋಟಿ ನೆರವನ್ನು ಕೂಡಲೇ ಪಾವತಿಸಬೇಕು, ಬೆಳೆ ನಷ್ಟದಿಂದ ಅಡಕೆ ಬೆಳೆಗಾರರು ಸಹಕಾರಿ ಸಂಘಗಳಿಂದ ಪಡೆದ ಸಾಲಗಳನ್ನು ವಾಯಿದೆಗೆ ಸರಿಯಾಗಿ ಪಾವತಿಸಲು ಅಸಹಾಯಕರಾಗಿದ್ದು, 1 ವರ್ಷದ ಅವಧಿಗೆ ಅಡಕೆ ಬೆಳೆಗಾರರ ಸಾಲಗಳ ವಾಯಿದೆಯನ್ನು ಮುಂದೂಡಬೇಕು. ಗೋರಕ್ ಸಿಂಘ್ ವರದಿಯ ಶಿಫಾರಸ್ಸಿನಂತೆ ಅಡಕೆ ಬೆಳೆಗಾರರ ಸಾಲವನ್ನು ಮನ್ನಾ ಮಾಡಬೇಕು, ಉತ್ಪಾದನಾ ವೆಚ್ಚ ಪರಿಗಣಿಸಿ ಪ್ರತಿ ವರ್ಷ ಅಡಕೆ ಧಾರಣೆ ನಿಗದಿ ಪಡಿಸಬೇಕು ಬೇಡಿಕೆಗಳಾಗಿವೆ ಎಂದು ಅವರು ಹೇಳಿದರು.
ಸಂಘದ ಉಪಾಧ್ಯಕ್ಷ ಕೆ.ಸಿ.ನಾರಾಯಣ ಗೌಡ, ಕಾರ್ಯದರ್ಶಿ ಕೆ.ಸಿ.ಸದಾನಂದ, ನಿತ್ಯಾನಂದ ಮುಂಡೋಡಿ, ಭರತ್ ಮುಂಡೋಡಿ, ಎಂ.ಜಿ.ಸತ್ಯನಾರಾಯಣ, ಪಿ.ಎಸ್.ಗಂಗಾಧರ್, ಪಿ.ಎಸ್.ಕಾರ್ಯಪ್ಪ, ಡಿ.ಆರ್.ಉದಯಕುಮಾರ್, ಬಾಲಗೋಪಾಲ ಸೇರ್ಕಜೆ, ಸದಾನಂದ ಜಾಕೆ, ಸೋಮಶೇಖರ ಕೇವಳ, ಚಂದ್ರಾ ಕೋಲ್ಚಾರ್ ಇದ್ದರು.