ಇಂದು ನಾಗಸ್ವರ ವಾದಕ ನಾಗೇಶ್ ಅಭಿನಂದನೆ
ಮಂಗಳೂರು: ನಾಗಸ್ವರ ವಿದ್ವಾನ್ ನಾಗೇಶ್ ಎ ಬಪ್ಪನಾಡು ಅಭಿನಂದನಾ ಸಮಿತಿ ವತಿಯಿಂದ ಡಿ. 7 ರಂದು ಎಸ್ಡಿಎಂ ಕಾಲೇಜಿನ ಸಭಾಂಗಣದಲ್ಲಿ ನಾಗಸ್ವರ ವಾದಕ ನಾಗೇಶ್ ಎ ಬಪ್ಪನಾಡು ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಂಜೆ 6.30ಕ್ಕೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಕೇಂದ್ರ ಸಚಿವ ಡಾ.ಎಂ. ವೀರಪ್ಪ ಮೈಲಿ, ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್, ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್ ಪಾಲ್ಗೊಳ್ಳುವರು ಎಂದು ಸಮತಿ ಕಾರ್ಯದರ್ಶಿ ಪಿ. ನಿತ್ಯಾನಂದ್ ರಾವ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಇದೇ ಸಂದರ್ಭ ಸಂಜೆ 5.15ಕ್ಕೆ ಧರ್ಮಸ್ಥಳ ದೇವಸ್ಥಾನದ ನಾಗಸ್ವರ ವಿದ್ವಾಂಸ ಅಣ್ಣು ದೇವಾಡಿಗ ಅವರಿಂದ ನಾಗಸ್ವರ ವಾದನ ಕಛೇರಿ ನಡೆಯಲಿದೆ. ಬಳಿಕ ರಶ್ಮಿ ಚಿದಾನಂದ ಅವರ ಶಿಷ್ಯರಿಂದ ನೃತ್ಯ-ಸತ್ಯ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ ಎಂದರು. ಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಉಪಾಧ್ಯಕ್ಷ ಸುಧಾಕರ ಪೇಜಾವರ, ಜತೆ ಕಾರ್ಯದರ್ಶಿ ಗೀತಾ ಸರಳಾಯ ಇದ್ದರು.
ಇಂದು ಸಚಿವ ವೀರಪ್ಪ ಮೊಯ್ಲಿ ಜಿಲ್ಲೆಗೆ
ಮಂಗಳೂರು: ಕೇಂದ್ರ ಸಚಿವ ಡಾ.ವೀರಪ್ಪ ಮೊಯ್ಲಿ ಡಿ.7ರಂದು ಮಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ಸಂಜೆ 3.30ಕ್ಕೆ ಪಣಂಬೂರು ಹೊಸ ಬಂದರಿನಲ್ಲಿ ಎಂಆರ್ಪಿಎಲ್ನ ಎಸ್ಪಿಎಂ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. 4.30ಕ್ಕೆ ಪೆರ್ಮುದೆ ಐಎಸ್ಪಿಆರ್ಎಲ್ಗೆ ಭೇಟಿ, 5.30ಕ್ಕೆ ಎಂಆರ್ಪಿಎಲ್, ಒಎಂಪಿಎಲ್, ಐಎಸ್ಪಿಆರ್ಎಲ್ನ ಪುನರ್ ಪರಿಶೀಲನಾ ಸಭೆ ನಡೆಸುವರು. 6.45ಕ್ಕೆ ಬಪ್ಪನಾಡು ನಾಗೇಶ್ ಸನ್ಮಾನದಲ್ಲಿ ಭಾಗಿ, 8.30ರಿಂದ ಎಂಆರ್ಪಿಎಲ್ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಂಗಳೂರಲ್ಲಿ ವಾಸ್ತವ್ಯ. 8ರಂದು ಬೆಳಗ್ಗೆ 9ಕ್ಕೆ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಕಾರ್ಕಳಕ್ಕೆ ತೆರಳುವರು. ಸಂಜೆ 3ಕ್ಕೆ ಕೂಳೂರು ಎಂಎಸ್ಇಝಡ್ನ ಕಾರ್ಡೋಲೈಟ್ ಸ್ಪೆಶಾಲಿಟಿ ಕೆಮಿಕಲ್ಸ್ ಇಂಡಿಯಾದ ಆಡಳಿತ ಭವನ ಉದ್ಘಾಟಿಸುವರು. ಸಂಜೆ 5.15ಕ್ಕೆ ವಿಮಾನ ಮೂಲಕ ಬೆಂಗಳೂರಿಗೆ ತೆರಳುವರು.
ಮಾರಾಟ ಪ್ರತಿನಿಧಿ ಯುವತಿಯಿಂದ ಬೈಗುಳ!
ಉಪ್ಪಿನಂಗಡಿ: ಹರ್ಬಲ್ ಉತ್ಪನ್ನಗಳನ್ನು ಮನೆ ಮನೆಗೆ ಮಾರಾಟ ಮಾಡಲು ಬಂದ ಯುವತಿ ತಾನು ತಂದ ವಸ್ತುಗಳನ್ನು ಖರೀದಿಸಲಿಲ್ಲವೆಂದು ಕಚೇರಿಯ ಅಧಿಕಾರಿಗಳನ್ನು ಮನಸೋ ಇಚ್ಚೆ ಬೈದು ಗೊಂದಲ ಸೃಷ್ಟಿಸಿದ ಘಟನೆ ಉಪ್ಪಿನಂಗಡಿಯಲ್ಲಿ ಶುಕ್ರವಾರ ನಡೆದಿದೆ.
ಜೀನ್ಸಸ್ ಪ್ಯಾಂಟ್, ಟೀ ಶರ್ಟ್ ಧರಿಸಿ ಬಂದಿದ್ದ ಯುವತಿ ಉಪ್ಪಿನಂಗಡಿಯ ಕೇಂದ್ರ ಸರ್ಕಾರಿ ಸ್ವಾಮ್ಯದ ಕಚೇರಿಗೆ ಬಂದಾಕೆ, ತನ್ನಲ್ಲಿರುವ ಉತ್ಪನ್ನಗಳನ್ನು ಖರೀದಿಸುವಂತೆ ಅಗ್ರಹಿಸುತ್ತಿದ್ದಳು.
ತನ್ನಲ್ಲಿ ಕಾಮೋತ್ತೇಜಕ ಮಾತ್ರೆಗಳೂ ಇವೆ ಎಂದು ವಿವರಿಸಿ ಅದನ್ನು ತೆಗೆದುಕೊಳ್ಳುವಂತೆ ಅಸಭ್ಯವಾಗಿ ವರ್ತಿಸಿದಾಗ ಕಚೇರಿ ಅಧಿಕಾರಿ ಆಕೆಗೆ ಹೊರ ಹೋಗುವಂತೆ ನಿರ್ದೇಶನ ನೀಡಿದರು.
ಕೆರಳಿದ ಆಕೆ ಅಧಿಕಾರಿ, ಸಿಬ್ಬಂದಿಯನ್ನು ಅಸಭ್ಯ ಭಾಷೆಗಳನ್ನು ಬಳಸಿ ಏರು ದ್ವನಿಯಲ್ಲಿ ಬೈಯತೊಡಗಿ ರಸ್ತೆಯಲ್ಲೂ ಬೈಯುತ್ತಾ ಸಾಗಿ ಗೊಂದಲ ಸೃಷ್ಟಿಸಿದಳು ಎಂದು ತಿಳಿದುಬಂದಿದೆ.
ಯುವತಿಯ ಈ ವಿಚಿತ್ರ ನಡೆಯಿಂದ ಕಂಗಾಲಾದ ಕಚೇರಿ ಸಿಬ್ಬಂದಿ ಯುವತಿ ನೀಡಿದ್ದ ಕಚೇರಿಯ ವಿಳಾಸದ ದೂರವಾಣಿಯನ್ನು ಸಂಪರ್ಕಿಸಿ ಯುವತಿಯ ಅನುಚಿತ ವರ್ತನೆ ಬಗ್ಗೆ ದೂರು ಸಲ್ಲಿಸಿದರು.
ಇಂದಿನಿಂದ ಸಚಿವ ರಮಾನಾಥ ರೈ ಪ್ರವಾಸ
ಮಂಗಳೂರು: ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಡಿ.7ರಂದು ಜಿಲ್ಲೆಗೆ ಆಗಮಿಸುವರು.
ಬೆಳಗ್ಗೆ 8.30ಕ್ಕೆ ಬಂಟ್ವಾಳ ಕಾಂಗ್ರೆಸ್ ಕಚೇರಿಗೆ ಶಿಲಾನ್ಯಾಸ, 10ಕ್ಕೆ ತುಂಬೆ ಬಿಎ ಕಾಲೇಜಿನ ರಜತಮಹೋತ್ಸವ ಕಟ್ಟಡ ಶಿಲಾನ್ಯಾಸ, ಸಂಜೆ 3.30ಕ್ಕೆ ಕೇಂದ್ರ ಪೆಟ್ರೋಲಿಯಂ ಸಚಿವ ಡಾ.ವೀರಪ್ಪ ಮೊಯ್ಲಿ ಜತೆ ವಿವಿಧ ಕಾರ್ಯಕ್ರಮ.
ಡಿ.8ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ, ಸಂಜೆ 3ಕ್ಕೆ ಕೊಳ್ನಾಡಿನ ಕಾಡುಮಠ ಹೈಸ್ಕೂಲ್ ಕಟ್ಟಡ ಶಿಲಾನ್ಯಾಸ, 5.30 ವಿಟ್ಲ ಜೂನಿಯರ್ ಕಾಲೇಜಿನಲ್ಲಿ ರಾಜ್ಯ ಯುವಜನ ಮೇಳ ಬಗ್ಗೆ ಸಭೆ.
ಡಿ.9ರಂದು ಕಡೇಶ್ವಾಲ್ಯ ಗ್ರಾಮ ಪಂಚಾಯ್ತಿನಲ್ಲಿ ಗ್ರಾಮೀಣ ಸ್ಪಂದನ ಕಾರ್ಯಕ್ರಮ, ಸಂಜೆ 3 ಗೋಳ್ತಮಜಲು ಗ್ರಾಮ ಪಂಚಾಯ್ತಿನಲ್ಲಿ ಗ್ರಾಮೀಣ ಸ್ಪಂದನ ಕಾರ್ಯಕ್ರಮ.
ಇಂದು ವಿಶೇಷ ಉಪನ್ಯಾಸ
ಪುತ್ತೂರು: ಕ.ಸಾ.ಪ. ಪುತ್ತೂರು ತಾಲೂಕು ಘಟಕ ಮತ್ತು ಸುದಾನ ದೇವಾಲಯದ ಜಂಟಿ ಆಶ್ರಯದಲ್ಲಿ ಕನ್ನಡ ಸಾಹಿತ್ಯಕ್ಕೆ ಬಾಸೆಲ್ ಮಿಶನ್ ಕೊಡುಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ 7ರಂದು ಸಂಜೆ ಮಂಜಲ್ಪಡ್ಪುವಿನಲ್ಲಿರುವ ಸುದಾನ ಶಾಲೆ ಸಭಾಂಗಣದಲ್ಲಿ ನಡೆಯಲಿದೆ ಎಂದು ಕ.ಸಾ.ಪ. ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಡಾ. ವರದರಾಜ ಚಂದ್ರಗಿರಿ ತಿಳಿಸಿದ್ದಾರೆ.
ಇಂದು ಮಕ್ಕಳ ಮೇಳ
ಬೆಳ್ತಂಗಡಿ: ತಾಲೂಕು ಮಟ್ಟದ ಮಕ್ಕಳ ಭಾವೈಕ್ಯ ಮೇಳ ಓಡಿಲ್ನಾಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.7ರಂದು ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಜಿ.ಪಂ. ಅಧ್ಯಕ್ಷ ಕೆ.ಕೊರಗಪ್ಪ ನಾಯ್ಕ ಪುರ ಮೆರವಣಿಗೆ ಉದ್ಘಾಟಿಸಲಿದ್ದಾರೆ. 10.30ಕ್ಕೆ ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಧ್ವಜಾರೋಹಣ ನೆರವೇರಿಸಲಿದ್ದು, ಮೇಳದ ಉದ್ಘಾಟನೆಯನ್ನು ಶಾಸಕ ಕೆ.ವಸಂತ ಬಂಗೇರ ನೆರವೇರಿಸಲಿದ್ದಾರೆ. ಭಾರತ ಸೇವಾ ದಳದ ತಾಲೂಕು ಸಮಿತಿ ಅಧ್ಯಕ್ಷ ಫ್ರಾನ್ಸಿಸ್ ವಿ.ವಿ. ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ನಾಳೆ ವಿದ್ಯುತ್ ಇಲ್ಲ
ಮಂಗಳೂರು: ಕೆಪಿಟಿಸಿಎಲ್ ವತಿಯಿಂದ ಹೊರಡುವ ಕಾವೂರು-ಕೆಐಒಸಿಎಲ್ ಲೈನಿನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ 8ರಂದು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.