ಗಿನ್ನಿಸ್ ದಾಖಲೆ ವೀರ ಖಾರ್ವಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ನೆರವು, ಸನ್ಮಾನ
ಮಂಗಳೂರು: ಮಲ್ಪೆ ಬೀಚ್‌ನಿಂದ ಸೇಂಟ್ ಮೇರಿಸ್ ವರೆಗೆ ಕೈಕಾಲು ಕಟ್ಟಿಕೊಂಡು ಈಜಿದ ಸಾಹಸಿ ಗೋಪಾಲ್ ಖಾರ್ವಿಯನ್ನು ಎಸ್‌ಸಿಡಿಸಿಸಿ ಬ್ಯಾಂಕ್ ವತಿಯಿಂದ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಡಿಸಿಸಿ ಬ್ಯಾಂಕ್ 50 ಸಾವಿರ, ನವೋದಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ 25 ಸಾವಿರ ಸಹಾಯಧನ ನೀಡಲಾಯಿತು.
ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಖಾರ್ವಿ ನಮ್ಮ ರಾಜ್ಯಕ್ಕೆ ಹೆಮ್ಮೆ ತರುವ ಕೆಲಸ ಮಾಡಿದ್ದಾರೆ. ಖಾರ್ವಿ ನಿಜವಾಗಿಯೂ ನಮಗೆ ಮಾದರಿ, ಏಕೆಂದರೆ ಅವರಿಗೆ ಅನೇಕ ಕಷ್ಟಗಳಿದ್ದರೂ ಅದನ್ನು ಎದುರಿಸಿ ಈ ಸಾಧನೆ ಮಾಡಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿದ ಖಾರ್ವಿ ಮಾತನಾಡಿ, ಕಳೆದ ಬಾರಿ ಪ್ರಯತ್ನದಲ್ಲಿ ಜಿಪಿಎಸ್ ಕ್ಯಾಮೆರಗಾಳನ್ನು ಅಳವಡಿಸಿರಲಿಲ್ಲ. ಹೀಗಾಗಿ ವಿಶ್ವದಾಖಲೆ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಈ ಬಾರಿ 12 ಲಕ್ಷ ವ್ಯಯಿಸಿ ನನ್ನ ಕನಸು ನನಸು ಮಾಡಿದೆ. ಕೆಲವರು ನನಗೆ ಧನ ಸಹಾಯ ಮಾಡಿ ನೆರವು ನೀಡಿದರು. ಆದರೆ ಸಾಲ ತೀರಿಸಲು ಇನ್ನು ತುಂಬಾ ಹಣ ಬೇಕಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಅಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್, ನಿರ್ದೇಶಕ ವಾದಿರಾಜ್ ಶೆಟ್ಟಿ ಇದ್ದರು.