ಸುಬ್ರಹ್ಮಣ್ಯ ಚಂಪಾಷಷ್ಠಿ: ವಾಹನ ನಿಲುಗಡೆ ವ್ಯವಸ್ಥೆ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಳದ ವಾರ್ಷಿಕ ಚಂಪಾಷಷ್ಠಿ ಜಾತ್ರೆ ಪ್ರಯುಕ್ತ ವಾಹನ ಪಾರ್ಕಿಂಗ್ಗಾಗಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ವತಿಯಿಂದ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಭಕ್ತರ ವಾಹನಗಳ ತಂಗುವಿಕೆಗೆ ಹೆಚ್ಚು ಅನುಕೂಲವಾಗುವುದರೊಂದಿಗೆ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆಯಾಗಿ ಭಕ್ತರಿಗೆ ಸಂಚರಿಸಲು ಉಪಯೋಗವಾಗಲಿದೆ.
ಆದುದರಿಂದ ಕ್ಷೇತ್ರಕ್ಕೆ ಬರುವ ವಾಹನಗಳನ್ನು ಈ ಕೆಳಗೆ ಸೂಚಿಸಿದ ಪ್ರದೇಶಗಳಲ್ಲಿ ನಿಲುಗಡೆಗೊಳಿಸಬೇಕು ಹಾಗೂ ರಸ್ತೆ ಬದಿಯಲ್ಲಿ ಯಾವುದೇ ವಾಹನಗಳನ್ನು ಎಲ್ಲಿಯೂ ಪಾರ್ಕಿಂಗ್ ಮಾಡದೆ ಸಾರ್ವಜನಿಕರಿಗೆ ಸಹಕಾರ ಮಾಡಬೇಕೆಂದು ಪೊಲೀಸ್ ಇಲಾಖೆ ವಿನಂತಿಸಿದೆ.
ಸುಳ್ಯ ಗುತ್ತಿಗಾರು ಕಡೆಯಿಂದ ಬರುವ ವಾಹನಗಳು, ಸಾರಿಗೆ ಸಂಸ್ಥೆ ಬಸ್ಸುಗಳು ಸವಾರಿ ಮಂಟಪದ ಬಳಿ ಇರುವ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆಗೊಳಿಸಬೇಕು. ನಾಲ್ಕು ಚಕ್ರದ ವಾಹನಗಳು ಹಾಗೆ ಖಾಸಗಿ ಬಸ್ಗಳು ಮತ್ತು ಟೆಂಪೋಗಳು ಇಂಜಾಡಿಯ ಹೊಟೇಲ್ ಪ್ರಶಾಂತ್ ಬಳಿ ಇರುವ ಪಾರ್ಕಿಂಗ್ ತಾಣದಲ್ಲಿ ನಿಲುಗಡೆ ಮಾಡಬೇಕು. ದ್ವಿಚಕ್ರ ವಾಹನಗಳಿಗಾಗಿ ಸವಾರಿ ಮಂಟಪದ ಬಳಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಸವಾರಿ ಮಂಟಪದ ಬಳಿ ಇರುವ ಪಾರ್ಕಿಂಗ್ ಸ್ಥಳವನ್ನು ಸುಳ್ಯ ಕಡೆಯಿಂದ ಬರುವ ವಾಹನಗಳಿಗೆ ವ್ಯವಸ್ಥೆ ಮಾಡಲಾಗಿದೆ. ಪಂಜ- ಕಡಬ- ಗುಂಡ್ಯ ಕಡೆಯಿಂದ ಬರುವ ಕೆಎಸ್ಆರ್ಟಿಸಿ ಬಸ್ಸುಗಳಿಗಾಗಿ ಬಿಲಧ್ವಾರದ ಪಾರ್ಕಿಂಗ್ ಸ್ಥಳದಲ್ಲಿ, ನಾಲ್ಕು ಚಕ್ರದ ವಾಹನಗಳು ಜ್ಯೂನಿಯರ್ ಕಾಲೇಜು ಮೈದಾನ ಮತ್ತು ಹೆಲಿಪ್ಯಾಡ್ನಲ್ಲಿ, ಖಾಸಗಿ ಬಸ್ಗಳು ಮತ್ತು ಟೆಂಪೋಗಳು ವಲ್ಲೀಶ ಸಭಾಭವನದ ಪಾರ್ಕಿಂಗ್ ಸ್ಥಳದಲ್ಲಿ, ಕಡಬ- ಗುಂಡ್ಯ ಕಡೆಯಿಂದ ಬರುವ ದ್ವಿಚಕ್ರ ವಾಹನಗಳಿಗಾಗಿ ಕಾಶಿಕಟ್ಟೆಯ ಪೊಲೀಸ್ ಕವಾಯಿತು ಮೈದಾನ ಹಾಗೂ ಎಲ್ಲಾ ಇಲಾಖಾ ವಾಹನಗಳು ಸವಾರಿ ಮಂಟಪದ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡಲು ವ್ಯವಸ್ಥೆ ಸಮರ್ಪಕಗೊಳಿಸಲಾಗಿದೆ ಎಂದು ಸುಬ್ರಹ್ಮಣ್ಯ ಠಾಣಾಧಿಕಾರಿ ನಾಗೇಶ್ ಕದ್ರಿ ತಿಳಿಸಿದ್ದಾರೆ.