ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ದಿವ್ಯಪ್ರಭಾ ನೇಮಕ: ಕಾಂಗ್ರೆಸ್ ನಾಯಕರಲ್ಲೇ ಒಡಕು?

Vishwanath S
Updated On : 8 Dec 2013, 11:36 am

ಸುಳ್ಯ: ಸುಳ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಅವರನ್ನು ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಪ್ರಕ್ರಿಯೆಯ ಕಾರಣದಿಂದ ಸುಳ್ಯ ಕಾಂಗ್ರೆಸ್ ಒಡೆದ ಮನೆಯಾಗಿದೆಯೇ... ಹೀಗೊಂದು ಪ್ರಶ್ನೆ ಸುಳ್ಯದ ರಾಜಕೀಯ ಪಡಸಾಲೆಯಲ್ಲಿ ಸುತ್ತು ಹಾಕುತ್ತಿದೆ.
 ದಿವ್ಯಪ್ರಭಾ ಒಂದೂವರೆ ವರ್ಷದ ಹಿಂದೆ ಮಹಿಳಾ ಕಾಂಗ್ರೆಸ್ ತಾಲೂಕು ಅಧ್ಯಕ್ಷರಾದ ಬಳಿಕ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಪರಿಚಿತರಾದವರು. ಮಂಡ್ಯದ ಕಾಂಗ್ರೆಸ್ ನಾಯಕ ಎಲ್.ಆರ್. ಶಿವರಾಮೇಗೌಡರ ಸಮೀಪದ ಬಂಧು. ಈ ಸಂಬಂಧದ ಹಿನ್ನೆಲೆಯಲ್ಲಿ ಅವರು ಬಹುಬೇಗ ಕಾಂಗ್ರೆಸ್ ನಾಯಕರ ಸಂಪರ್ಕ ಬೆಳೆಸಿಕೊಂಡಿದ್ದರಲ್ಲದೆ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪುತ್ತೂರಿನಿಂದ ಶಾಸಕ ಅಭ್ಯರ್ಥಿಯಾಗಲು ಟಿಕೆಟ್ ಬಯಸಿ ಅವರು ದೆಹಲಿಗೂ ಹೋಗಿದ್ದರು. ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷರಾಗಲು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರು ದಿವ್ಯಪ್ರಭಾಗೆ ಪೂರ್ಣ ಸಹಕಾರ ನೀಡಿದ್ದಾರೆ ಎನ್ನಲಾಗಿದೆ.
ಪರ- ವಿರೋಧ ಪತ್ರಿಕಾಗೋಷ್ಠಿ: ದಿವ್ಯಪ್ರಭಾ ನೇಮಕದ ಕುರಿತು ಮಾಧ್ಯಮದ ಮೂಲಕ ಬೆಳಕಿಗೆ ಬರುತ್ತಿದ್ದಂತೆಯೇ ಖುದ್ದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡರೇ ಪತ್ರಿಕಾಗೋಷ್ಠಿಯಲ್ಲಿ ಈ ನೇಮಕ ಸ್ವಾಗತಿಸಿದರು. ಇದಾದ ಮರುದಿನವೇ ಕಾಂಗ್ರೆಸ್ ನಾಯಕರು ಮತ್ತೊಂದು ಪತ್ರಿಕಾಗೋಷ್ಠಿ ನಡೆಸಿ ಅನೇಕ ನಾಯಕರು ಈ ನೇಮಕ ಪ್ರಕ್ರಿಯೆಯ ಕ್ರಮವನ್ನೇ ಪ್ರಶ್ನಿಸಿ ಹರಿಹಾಯ್ದರು.
 ಮರುದಿನ ಮತ್ತೊಂದು ಪತ್ರಿಕಾಗೋಷ್ಠಿ ನಡೆಯಿತು. ದಿವ್ಯಪ್ರಭಾ ಪರವಾಗಿ ನಡೆದ ಈ ಪತ್ರಿಕಾಗೋಷ್ಠಿಯಲ್ಲಿ ಹಲವು ನಾಯಕರು, 'ಸುಳ್ಯಕ್ಕೆ ಬಂದ ಈ ಸ್ಥಾನದ ಕುರಿತು ಆಕ್ಷೇಪ ಎತ್ತುವುದು ಸರಿಯಲ್ಲ' ಎಂದು ಹೇಳಿದರು.
ಆದರೆ, ಈ ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೂ ಟೀಕೆಗಳ ಬಾಣ ಎದುರಾಯಿತು. ಈ ವಿಚಾರದಲ್ಲಿ ಬ್ಲಾಕ್ ಅಧ್ಯಕ್ಷರು ಸುಮ್ಮನೆ ಕೂರುವಂತಿಲ್ಲ ಎಂದು ನಾಯಕರೊಬ್ಬರು ಛೇಡಿಸಿದರೆ, ಬ್ಲಾಕ್ ಅಧ್ಯಕ್ಷರು ಶಿಫಾರಸ್ಸು ಪತ್ರ ಕೊಡುವ ಬಗ್ಗೆ ಮತ್ತೊಬ್ಬರು ಕುಟುಕಿದರು.
ಕಾಂಗ್ರೆಸ್‌ನಲ್ಲಿ ಮೂರು ಬಾಗಿಲು: ಅಲ್ಲಿಗೆ ಸುಳ್ಯ ಬ್ಲಾಕ್ ಕಾಂಗ್ರೆಸ್‌ನಲ್ಲಿ ಎಷ್ಟು ಮನಸ್ಸುಗಳಿವೆ ಎನ್ನುವುದು ಬಯಲಿಗೆ ಬಂತು. ವಿಶೇಷವೆಂದರೆ ಪತ್ರಿಕಾಗೋಷ್ಠಿ ನಡೆಸಿದ ಬಹುತೇಕ ನಾಯಕರು ನಾವು ಒಗ್ಗಟ್ಟಾಗಿದ್ದೇವೆ ಎಂದು ಪದೇ ಪದೇ ಹೇಳಿದರೂ ತಮ್ಮಲ್ಲಿ ಒಗ್ಗಟ್ಟಿಲ್ಲ ಎನ್ನುವುದನ್ನು ಪರೋಕ್ಷವಾಗಿ ಸಾಬೀತು ಪಡಿಸಿದರು. ದಿವ್ಯಪ್ರಭಾಗೆ ಪಟ್ಟ ಕಟ್ಟುವುದನ್ನು ತಡೆಯಲು ಒಂದು ಗುಂಪು ಟೊಂಕ ಕಟ್ಟಿ ನಿಂತಿದ್ದರೆ, ದಿವ್ಯಪ್ರಭಾಗೆ ಬೆಂಬಲವಾಗಿ ಒಂದು ಗುಂಪು ಬೆಂಗಳೂರಿನಲ್ಲಿಯೇ ಇದ್ದು ಯಾವುದೇ ಕಾರಣಕ್ಕೂ ನೇಮಕ ತಡೆಯಾಗಬಾರದೆಂದು ಹರಸಾಹಸ ಮಾಡುತ್ತಿದೆ. ಏನಾಗುತ್ತದೋ ಕಾದು ನೋಡಬೇಕು.



-ದುರ್ಗಾಕುಮಾರ್ ನಾಯರ್‌ಕೆರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement