ಪಾಣೆಮಂಗಳೂರು ಸುಂಕ ವಸೂಲಿ ಕೇಂದ್ರ ಶಾಶ್ವತ ಬಂದ್?
ಬಂಟ್ವಾಳ: ಕಳೆದೆರಡು ದಿನದ ಹಿಂದೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಪಾಣೆಮಂಗಳೂರು ಸುಂಕ ವಸೂಲಿ ಕೇಂದ್ರ ಶಾಶ್ವತವಾಗಿ ಬಂದ್ ಆಗುವ ಸೂಚನೆಗಳು ದೊರೆತಿದೆ.
ಶುಕ್ರವಾರ ದೆಹಲಿಯಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಈ ಬಗ್ಗೆ ಅಧಿಕೃತ ಆದೇಶ ಹೊರಡಿಸುವ ಪ್ರಕ್ರಿಯೆ ಮಾತ್ರ ಬಾಕಿ ಉಳಿದಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ದುಪ್ಪಟ್ಟು ವಸೂಲಿ ಎಂಬ ಆರೋಪ ಹೊತ್ತಿರುವ ಬ್ರಹ್ಮರ ಕೂಟ್ಲುವಿನ ಕೆಲ ಸಿಬ್ಬಂದಿ ವಾಹನಚಾಲಕರಿಂದ ಬಲವಂತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿದೆ. ಕಲ್ಲಡ್ಕ ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬವರು ತಮ್ಮ ಕಾರಿನಲ್ಲಿ ಶನಿವಾರ ಮಂಗಳೂರಿಗೆ ತೆರಳುತ್ತಿದ್ದ ವೇಳೆ ರಿಯಾಯಿತಿ ಶುಲ್ಕ ರು. 10 ನೀಡಿದಾಗ ಅಲ್ಲಿನ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪತ್ರಿಕೆಯಲ್ಲಿ ಪ್ರಕಟವಾಗಿದ್ದ ದರದ ಬಗ್ಗೆ ವಿಚಾರಿಸಿದಾಗ, ನಮಗೇನು ಗೊತ್ತಿಲ್ಲ, ಬಾಸ್ ಹೇಳಿದ ಹಾಗೆ ವಸೂಲಿ ಮಾಡುತ್ತೇವೆ ಎಂದು ಸಿಬ್ಬಂದಿ ಉದ್ಧಟತನದಿಂದ ವರ್ತಿಸಿದ್ದಾನೆ ಎಂದು ಇಕ್ಬಾಲ್ ಪತ್ರಿಕೆಗೆ ತಿಳಿಸಿದ್ದಾರೆ. ಈ ಬಗ್ಗೆ ಗುತ್ತಿಗೆದಾರ ಗೋಪಾಲಕೃಷ್ಣ ಮೆಲಾಂಟರಲ್ಲಿ ವಿಚಾರಿಸಿದಾಗ. ಕೆ.ಎ. 19 ಹಾಗೂ ಕೆ.ಎ. 21 ನೋಂದಣಿಯ ಲಘು ಮೋಟಾರು ವಾಹನಗಳಿಗೆ ರು. 10 ರಿಯಾಯಿತಿ ಶುಲ್ಕ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ, ಅಲ್ಲಿನ ಸಿಬ್ಬಂದಿ ವಸೂಲಿ ಮಾಡುತ್ತಿರುವ ಕ್ರಮವೇ ಬೇರೆ. ಇದೀಗ ಪ್ರತಿನಿತ್ಯವೂ ಇದೇ ರೀತಿಯ ಘಟನೆಗಳು ಟೋಲ್ ಫ್ಲಾಝಾದಲ್ಲಿ ನಡೆಯುತ್ತಿರುವುದು ವಾಹನ ಚಾಲಕರಿಗೆ ಕಿರಿಕ್ ಉಂಟುಮಾಡುತ್ತಿದೆ.