ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಮುದ್ರ ಮಧ್ಯದಿಂದ ಕಚ್ಚಾತೈಲ ಪೂರೈಕೆಗೆ ಚಾಲನೆ

Vishwanath S
Updated On : 8 Dec 2013, 11:36 am

ಮಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್) ಮತ್ತು ಪಾದೂರು ಮತ್ತು ಪೆರ್ಮುದೆ ಭೂಗತ ತೈಲ ಸಂಗ್ರಹಣಾ ಯೋಜನೆ(ಐಎಸ್‌ಪಿಆರ್‌ಎಲ್)ಗೆ ಕಚ್ಚಾ ತೈಲ ಪೂರೈಸುವ ಎಸ್‌ಪಿಎಂ (ಸಿಂಗಲ್ ಪಾಯಿಂಟ್ ಮೋರಿಂಗ್) ಸೌಲಭ್ಯವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಡಾ.ವೀರಪ್ಪ ಮೊಯ್ಲಿ ದೇಶಕ್ಕೆ ಅರ್ಪಿಸಿದ್ದಾರೆ.
ಶನಿವಾರ ಅವರು ಪಣಂಬೂರು ನವಮಂಗಳೂರು ಬಂದರು (ಎನ್‌ಎಂಪಿಟಿ)ಬಳಿ ಬೂಸ್ಟರ್ ಪಂಪ್‌ಹೌಸ್‌ನಲ್ಲಿ ಯೋಜನೆಯನ್ನು ದೇಶಕ್ಕೆ ಸಮರ್ಪಿಸಿದರು.
ಪಣಂಬೂರಿನಿಂದ 17 ಕಿ.ಮೀ. ದೂರ ಸಮುದ್ರದಲ್ಲಿ ಹಡಗಿನಿಂದ ಕಚ್ಚಾ ತೈಲವನ್ನು ಭೂಗತ ಪೈಪ್‌ಗಳ ಮೂಲಕ ಎಂಆರ್‌ಪಿಎಲ್ ಹಾಗೂ ಐಎಸ್‌ಪಿಆರ್‌ಎಲ್‌ಗೆ ರವಾನಿಸುವ ಅತ್ಯಾಧುನಿಕ ವ್ಯವಸ್ಥೆ ಇದಾಗಿದೆ. ಪ್ರಸಕ್ತ ಎಂಆರ್‌ಪಿಎಲ್‌ಗೆ ಮಾತ್ರ ಕಚ್ಚಾ ತೈಲ ಪೂರೈಕೆಯಾಗುತ್ತಿದ್ದು, 2014 ಆಗಸ್ಟ್‌ನಿಂದ ಐಎಸ್‌ಪಿಆರ್‌ಎಲ್‌ಗೂ ಇಲ್ಲಿಂದಲೇ ಪೈಪ್ ಮೂಲಕ ತೈಲ ರವಾನೆಯಾಗಲಿದೆ.
ಎನ್‌ಎಂಪಿಟಿಯಲ್ಲಿ 10 ಮತ್ತು 11ನೇ ಜೆಟ್ಟಿಯನ್ನು ಎಂಆರ್‌ಪಿಎಲ್‌ನ ಪೆಟ್ರೋಲಿಯಂ, ತೈಲ ಹಾಗೂ ಅನಿಲದ ಉದ್ದೇಶಕ್ಕೆ ನೀಡಲಾಗಿದೆ. ಇಲ್ಲಿಗೆ ಪ್ರಸಕ್ತ 30-35 ಸಾವಿರ ಟನ್ ತೂಕದ ತೈಲ ಸಾಗಾಟ ಹಡಗುಗಳು ಬರುತ್ತಿವೆ. ಪಶ್ಚಿಮ ಆಫ್ರಿಕಾ ಮತ್ತು ಲ್ಯಾಟೀನ್ ಅಮೆರಿಕಾದಿಂದ ತೈಲ ಹಡಗುಗಳು ಇಲ್ಲಿಗೆ ಆಗಮಿಸಲಿವೆ. ಈಗ ಎಸ್‌ಪಿಎಂ ಮೂಲಕ ತೈಲ ಪೂರೈಕೆಗೆ 100 ಗಂಟೆ ಬೇಕಾಗುತ್ತದೆ. ಐಎಸ್‌ಪಿಆರ್‌ಎಲ್ ಕಾರ್ಯಾರಂಭ ಬಳಿಕ 36 ಗಂಟೆ ಸಾಕು ಎಂದು ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಪಿ.ಉಪಾಧ್ಯ ತಿಳಿಸಿದರು.
ಐಎಸ್‌ಪಿಆರ್‌ಎಲ್ 2014ಕ್ಕೆ:  ಭೂಗತ ಕಚ್ಚಾ ತೈಲ ಸಂಗ್ರಹಾಗಾರ 2014 ಆಗಸ್ಟ್‌ಗೆ ದೇಶಕ್ಕೆ ಅರ್ಪಣೆಗೊಳ್ಳಲಿದೆ. ವಿಶಾಖಪಟ್ಟಣ, ಪೆರ್ಮುದೆ ಹಾಗೂ ಪಾದೂರುಗಳ ಭೂಗತ ತೈಲ ಸಂಗ್ರಹಣಾಗಾರದ ಕಾಮಗಾರಿ ಶೇ.99 ಮುಗಿದಿದೆ. ಈ ಮೂರು ಕೇಂದ್ರಗಳಲ್ಲಿ ಒಟ್ಟು 90 ದಿನಕ್ಕೆ ದೇಶಕ್ಕೆ ಬೇಕಾಗುವಷ್ಟು ಕಚ್ಚಾ ತೈಲ ಸಂಗ್ರಹವಾಗಲಿದೆ. ಈ ಯೋಜನೆಗೆ ರು. 4 ಸಾವಿರ ಕೋಟಿ ವಿನಿಯೋಗಿಸುತ್ತಿದ್ದು, ಒಟ್ಟು 30 ಕಿ.ಮೀ. ಪೈಪ್‌ಲೈನ್ ಅಳವಡಿಸಲಾಗುವುದು ಎಂದು ಆಯಿಲ್ ಇಂಡಿಯಾ ಡೆವಲಪ್‌ಮೆಂಟ್ ಬೋರ್ಡ್ ಜಂಟಿ ನಿರ್ದೇಶಕ ಎಲ್.ಎನ್.ದತ್ತಾ ತಿಳಿಸಿದರು.
ಪೆರ್ಮುದೆಯಲ್ಲಿ ಪೈಪ್‌ಲೈನ್ ಅಳವಡಿಕೆಗೆ ರು. 12.25 ಕೋಟಿ ವೆಚ್ಚವಾಗಲಿದೆ. ಒಮ್ಮೆ ಟೆಂಡರ್ ರದ್ದುಗೊಂಡ ಕಾರಣ ಮತ್ತೊಮ್ಮೆ ಟೆಂಡರ್ ಕರೆಯಲಾಗಿದೆ ಎಂದರು. ಸಂಸದ ನಳಿನ್ ಕುಮಾರ್ ಕಟೀಲ್, ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಮಂಗಳೂರು ಉತ್ತರ ಶಾಸಕ ಮೊಯ್ದಿನ್ ಬಾವಾ ಹಾಜರಿದ್ದರು.
ವಿದ್ಯುತ್ ಬಳಸದೆ ತೈಲ ಪೂರೈಕೆ
ಸಮುದ್ರ ಮಧ್ಯೆ ತೈಲ ಪೂರೈಕೆಗೆ 48 ಇಂಚಿನ ಪೈಪ್ ಅಳವಡಿಸಲಾಗಿದೆ. 2010 ಆ.1ರಂದು ಕಾಮಗಾರಿ ಆರಂಭವಾಗಿದ್ದು, 2012 ಏ.29 ಕಾಮಗಾರಿ ಮುಕ್ತಾಯದ ಗಡುವು. ಈ ಯೋಜನೆ ವೆಚ್ಚ ರು. 1043.57 ಕೋಟಿ ಆಗಿದ್ದು, 2013 ಆ.29ಕ್ಕೆ ಕಾಮಗಾರಿ ಮುಗಿದಿದೆ. ಬೂಸ್ಟರ್ ಸ್ಟೇಷನ್ ಕಾಮಗಾರಿ 2012 ಡಿ.31ಕ್ಕೆ ಪೂರ್ತಿಯಾಗಿ ಮುಕ್ತಾಯವಾಗಲಿದೆ. 2013 ಜ.3ರಂದು ಎಸ್‌ಪಿಎಂ ಪ್ರಾಯೋಗಿಕವಾಗಿ ಆ.29ರಿಂದ ಪೂರ್ಣ ಕಾರ್ಯಾರಂಭ ಮಾಡಿದೆ. ಸಮುದ್ರದಲ್ಲಿ ಹಡಗಿನಿಂದ ಪಂಪ್ ಮೂಲಕ ಕಚ್ಚಾ ತೈಲವನ್ನು ಪೈಪ್‌ನಲ್ಲಿ ಕಳುಹಿಸಲಾಗುತ್ತದೆ. ಬೂಸ್ಟರ್ ಸ್ಟೇಷನ್‌ನಲ್ಲಿ ತೈಲವನ್ನು ಮತ್ತೆ ಪಂಪ್ ಮಾಡಿ ಎಂಆರ್‌ಪಿಎಲ್ ಹಾಗೂ ಐಎಸ್‌ಪಿಆರ್‌ಎಲ್‌ಗೆ ಕಳುಹಿಸಲಾಗುವುದು. ಇಲ್ಲಿ ವಿದ್ಯುತ್ ಬಳಸದೆ ತೈಲ ಪೂರೈಕೆ ಮಾಡಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement