ಸುಬ್ರಹ್ಮಣ್ಯ: 750ಕ್ಕೂ ಹೆಚ್ಚು ಭಕ್ತರಿಂದ ಮಡೆ ಮಡಸ್ನಾನ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಜಾತ್ರೋತ್ಸವದ ಸ್ಕಂದ ಪಂಚಮಿಯ ದಿನವಾದ ಶನಿವಾರ ಸುಮಾರು 750- 800 ಭಕ್ತರು ಮಡೆಮಡಸ್ನಾನ ಹರಿಕೆ ಸಲ್ಲಿಸಿದರು.
ಮಧ್ಯಾಹ್ನ ಮಹಾಪೂಜೆ ಬಳಿಕ ಹೊರಾಂಗಣದಲ್ಲಿ ಬ್ರಾಹ್ಮಣರು ಉಂಡ ಎಂಜಲೆಲೆ ಮೇಲೆ ದರ್ಪಣ ತೀರ್ಥದಲ್ಲಿ ಸ್ನಾನ ಮಾಡಿ ಸರತಿ ಸಾಲಿನಲ್ಲಿ ಬಂದ ಭಕ್ತರು ಮಡೆಮಡಸ್ನಾನ ಸೇವೆ ನಡೆಸಿದರು.
ವಿಳಂಬವಾಗಿ ನಡೆದ ಮಡೆಮಡಸ್ನಾನ: ಪ್ರತಿ ವರ್ಷ ಪಂಚಮಿ ದಿನದಂದು ಸುಬ್ರಹ್ಮಣ್ಯ ದೇವಳದಲ್ಲಿ ಮಹಾ ಪೂಜೆ ಬಳಿಕ ಹೊರಾಂಗಣದಲ್ಲಿ ಬ್ರಾಹ್ಮಣರಿಗೆ ಅನ್ನ ಪ್ರಸಾದ ನೀಡಲಾಗುತಿತ್ತು. ಈ ಬಾರಿ ಮಹಾಪೂಜೆಯು 12.30 ಗಂಟೆಗೆ ಮುಗಿದಿದ್ದರೂ 2.30ಕ್ಕೆ ಹೊರಾಂಗಣದಲ್ಲಿ ಅನ್ನಪ್ರಸಾದ ವಿತರಣೆ ಮಾಡಲಾಯಿತು. 3 ಗಂಟೆಗೆ ಮಡೆಮಡಸ್ನಾನ ಸೇವೆ ಆರಂಭಗೊಂಡಿತು. ಮಡೆಮಡಸ್ನಾನಕ್ಕಾಗಿ ದರ್ಪಣ ತೀರ್ಥದಲ್ಲಿ ಸ್ನಾನ ಮಾಡಿ ಸರತಿ ಸಾಲಿನಲ್ಲಿ ನಿಂತ ಭಕ್ತರು ತಾಸು ಗಟ್ಟಲೆ ಕಾದು ಸುಸ್ತಾಗಿದ್ದರು.
ಬೀದಿ ಮಡೆಸ್ನಾನ: ಮುಂಜಾನೆಯಿಂದಲೇ ಕುಮಾರಧಾರ ತೀರ್ಥ ಸ್ನಾನದಿಂದ ದೇವಳದ ತನಕ ಸುಮಾರು 2 ಕಿ.ಮೀ ದೂರದವರೆಗೆ ಉರುಳುತ್ತಾ 150ಕ್ಕೂ ಹೆಚ್ಚು ಭಕ್ತರು ಬೀದಿ ಮಡೆಸ್ನಾನ ಸೇವೆ ಸಲ್ಲಿಸಿದರು. ದೇವಳದ ಹೊರಾಂಗಣದ ಮೂಲೆಗಳಲ್ಲಿಯೂ ನೂರಾರು ಮಂದಿ ಮೂಲೆ ಮಡೆಸ್ನಾನ ಸೇವೆ ನೆರವೇರಿಸಿದರು.
ಇಂದು ಬ್ರಹ್ಮರಥೋತ್ಸವ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ವಾರ್ಷಿಕ ಜಾತ್ರೆ ಚಂಪಾ ಷಷ್ಠಿಯ ದಿನ ಭಾನುವಾರ ಬೆಳಗ್ಗೆ 8.12ರ ಧನುರ್ಲಗ್ನದಲ್ಲಿ ಬ್ರಹ್ಮರಥೋತ್ಸವ ಎಳೆಯಲಾಗುವುದು.
ಮಾಧ್ಯಮದವರಿಗೆ ಮಂಟಪವೇ ಗ್ಯಾಲರಿ
ದೃಶ್ಯ ಮಾಧ್ಯಮದವರು, ಪತ್ರಕರ್ತರು ಮತ್ತು ಛಾಯಾಗ್ರಾಹಕರು ಮಡೆಮಡಸ್ನಾನದ ವರದಿ ಹಾಗೂ ಚಿತ್ರಣಕ್ಕಾಗಿ ಬೆಳಗ್ಗಿನಿಂದಲೇ ಹೊರಾಂಗಣದ ಬದಿಯಲ್ಲಿ ಕಾದು ನಿಂತಿದ್ದರು.
ಮಾಧ್ಯಮದವರು ಇದ್ದರೆ ಊಟ ಬಡಿಸುವುದಿಲ್ಲ ಎಂದು ಗುಸುಗುಸು ಆರಂಭಗೊಂಡು ಬಳಿಕ ಆಡಳಿತ ಮಂಡಳಿಯವರೊಂದಿಗೆ ಚರ್ಚೆ ನಡೆದು ತೀರ್ಮಾನಕ್ಕೆ ಬಂದು ಆಡಳಿತ ಮಂಡಳಿ ಅಧ್ಯಕ್ಷರು ಮಾಧ್ಯಮದವರೊಂದಿಗೆ ಮಾತನಾಡಿ, ತಾವು ಹೊರಾಂಗಣದಲ್ಲಿ ಚಿತ್ರಿಸದೆ ಅಲ್ಲೆ ಪಕ್ಕದಲ್ಲಿದ್ದ ವಸಂತ ಕಟ್ಟೆಯಲ್ಲಿ ನಿಲ್ಲುವಂತೆ ವಿನಂತಿಸಿದರು. ಬಳಿಕ ಮಾಧ್ಯಮದವರಿಗೆ ವಸಂತ ಕಟ್ಟೆಯೇ ಮಾಧ್ಯಮ ಗ್ಯಾಲರಿಯಾಯಿತು. ನಂತರ ಅನ್ನ ವಿತರಣೆ ನಡೆದು ಮಡೆಮಡಸ್ನಾನ ಸುಸೂತ್ರವಾಗಿ ನಡೆಯಿತು. ಅಂತಿಮ ಕ್ಷಣದಲ್ಲಿ ಊಟ ವಿತರಣೆಯಲ್ಲಿ ಗೊಂದಲ ಆಗದಂತೆ ಮೊದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿತ್ತು ಎಂದು ಸ್ಥಳೀಯ ಗ್ರಾ.ಪಂ. ಉಪಾಧ್ಯಕ್ಷ ಶಿವರಾಮ್ ರೈ ದೇವರಗದ್ದೆ ಅಭಿಪ್ರಾಯ ವ್ಯಕ್ತಪಡಿಸಿದ್ದಲ್ಲದೆ ಮಡೆಮಡಸ್ನಾನ ಗುಪ್ತವಾಗಿ ನಡೆಯುವಂತದ್ದಲ್ಲ ಸಾರ್ವಜನಿಕವಾಗಿ ನಡೆಯುವ ಕಾರಣ ದೃಶ್ಯ ಮಾಧ್ಯಮದವರಿಗೆ ಅವಕಾಶ ಮಾಡಿ ಕೊಡಬೇಕಾದದ್ದು ಕರ್ತವ್ಯ ಎಂದು ಹೇಳಿದರು.
'ಊಟಕ್ಕೆ ಕುಳಿತವರು ಮನೋರೋಗಿಗಳು'
ಮಂಗಳೂರು: ಮಡೆಸ್ನಾನಕ್ಕಾಗಿ ಊಟ ಮಾಡಲು ಕುಳಿತುಕೊಳ್ಳುವ ವ್ಯಕ್ತಿಗಳು ಮನೋರೋಗಿಗಳಾಗಿದ್ದು, ಇವರ ಎಂಜಲಿನಿಂದ ರೋಗ ಹರಡುವ ಸಾಧ್ಯತೆಯಿದೆ. ಆದ್ದರಿಂದ ಈ ಪದ್ಧತಿಯನ್ನು ಸರ್ಕಾರ ನಿಷೇಧಿಸುವಂತೆ ಧಾರವಾಡ ಮನಸೂರು ರೇವಣಸಿದ್ಧೇಶ್ವರ ಮಠಾಧೀಶ ಶ್ರೀ ಬಸವರಾಜ ದೇವರು ಆಗ್ರಹಿಸಿದ್ದಾರೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಮಡೆಸ್ನಾನ ಮತ್ತು ಪಂಕ್ತಿಬೇಧ ವಿರೋಧಿಸಿ ಶನಿವಾರ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯೆದುರು ಧರಣಿ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಇದು ಅಪಮಾನ: ಪುರೋಹಿತಶಾಹಿಗಳು, ಜಾತಿವಾದಿಗಳು ತಮ್ಮ ತೀಟೆ ತೀರಿಸಿಕೊಳ್ಳಲು ಮಡೆಸ್ನಾನ ನಡೆಸಿಕೊಂಡು ಬರುತ್ತಿದ್ದಾರೆ. ಇದು ಮಾನವ ಜನಾಂಗಕ್ಕೆ ಮಾಡುತ್ತಿರುವ ಅವಮಾನ. ಆದ್ದರಿಂದ ಇಂಥ ಅಪಮಾನಕಾರಿ ಪದ್ಧತಿ ಹೋಗಲಾಡಿಸಲು ಸುಪ್ರೀಂ ಕೋರ್ಟ್ ಸುಗ್ರೀವಾಜ್ಞೆ ತರಬೇಕು. ಅಲ್ಲದೆ ಇದಕ್ಕೆ ಪ್ರೋತ್ಸಾಹಿಸುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಗುಡುಗಿದರು.
ವೇದಿಕೆ ರಾಜ್ಯಾಧ್ಯಕ್ಷ ಶಿವರಾಂ, ಮೈಸೂರು ಬೆಟ್ಟದಪುರ ಶಾಖಾಮಠದ ಷ.ಬ್ರ. ರಾಚೋಟಿ ಶಿವಾಚಾರ್ಯ ಸ್ವಾಮೀಜಿ, ಮುನೀರ್ ಕಾಟಿಪಳ್ಳ, ಜಯಾನಂದ ದೇವಾಡಿಗ ಇದ್ದರು.