2030ಕ್ಕೆ ಭಾರತ 'ರಿಫೈನರಿ ಹಬ್': ಮೊಯ್ಲಿ ವಿಶ್ವಾಸ
ಮಂಗಳೂರು: ತೈಲ ಕ್ಷೇತ್ರದಲ್ಲಿ 2030ರ ವೇಳೆಗೆ ಭಾರತ ಸ್ವಾವಲಂಬನೆ ಸಾಧಿಸಲಿದ್ದು, ಆಗ ವಿಶ್ವದಲ್ಲೇ ಭಾರತ 'ರಿಫೈನರಿ ಹಬ್' ಎನಿಸಲಿದೆ. ಈ ನಿಟ್ಟಿನಲ್ಲಿ ವಿಜಯ ಕೇಳ್ಕರ್ ನೇತೃತ್ವದ ಸಮಿತಿ ದೇಶದಲ್ಲಿ ತೈಲ ನಿಕ್ಷೇಪಗಳ ಪತ್ತೆಗೆ ಕಾರ್ಯಯೋಜನೆ ಹಾಕಿಕೊಂಡಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಡಾ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟೀಲ್, ಕಲ್ಲಿದ್ದಲು ಆಧಾರಿತ ಅನಿಲ ಹಾಗ ತೈಲ ನಿಕ್ಷೇಪಗಳ ಪತ್ತೆ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ. 2020 ವೇಳೆಗೆ ಭಾರತದ ತೈಲ ಆಮದು ಶೇ.50, 2025 ವೇಳೆಗೆ ಈ ಆಮದು ಪ್ರಮಾಣ ಶೇ.75 ಹಾಗೂ 2030ಕ್ಕೆ ಆಮದು ಶೂನ್ಯವಾಗಿ ತೈಲ ಸ್ವಾವಲಂಬಿಯಾಗಲಿದೆ. ಆಯಿಲ್ ಇಂಡಿಯಾ, ಒಎನ್‌ಜಿಸಿ, ಒಎಂಸಿ ಕಂಪನಿಗಳು ತೈಲ ಸ್ವಾವಲಂಬನ ದೃಷ್ಟಿಯಲ್ಲಿ ಪೂರಕ ಯೋಜನೆಗಳನ್ನು ಹಾಕಿಕೊಂಡಿವೆ ಎಂದರು.
ಭಾರತದಿಂದ ತೈಲ ರಫ್ತು: ಈಗ ದೇಶದ ರಿಫೈನರಿ ಸಾಮರ್ಥ್ಯ 219 ಮಿಲಿಯನ್ ಮೆಟ್ರಿಕ್ ಟನ್. 2015ಕ್ಕೆ ಇದನ್ನು 260 ಮಿಲಿಯನ್ ಮೆಟ್ರಿಕ್ ಟನ್‌ಗೆ ಹೆಚ್ಚಿಸಲಾಗುವುದು. ಅಂದರೆ 60 ಬಿಲಿಯನ್ ಡಾಲರ್ ವಹಿವಾಟು ನಡೆಯಲಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಸಿಂಗಾಪುರ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಭಾರತದಿಂದ ರಫ್ತು ಮಾಡಲಾಗುತ್ತಿದೆ. ಎಂಆರ್‌ಪಿಎಲ್ ಕಳೆದ ವರ್ಷ ರು. 30 ಸಾವಿರ ಕೋಟಿ ವರೆಗಿನ 15 ಮಿಲಿಯನ್ ಮೆಟ್ರಿಕ್ ಟನ್ ತೈಲೋತ್ಪನ್ನ ವಿದೇಶಕ್ಕೆ ರಫ್ತು ಮಾಡಿದೆ ಎಂದರು.
ಪ್ರಸಕ್ತ ಭಾರತಕ್ಕೆ ಮೊಸಾಂಬಿಕ್, ವೆನಿಜುವೆಲಾ, ಬ್ರೆಜಿಲ್, ಮ್ಯಾನ್ಮಾರ್, ಬಾಂಗ್ಲಾ, ಇರಾನ್, ಇರಾಕ್ ರಾಷ್ಟ್ರಗಳಿಂದ ತೈಲ ಪೂರೈಕೆಯಾಗುತ್ತಿದೆ. ಭಾರತದಲ್ಲಿ ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ, ಅರುಣಾಚಲ ಪ್ರದೇಶಗಳಲ್ಲಿ ತೈಲ ನಿಕ್ಷೇಪಗಳನ್ನು ಗುರುತಿಸಲಾಗಿದೆ. ದೇಶದ ಬಾಂಬೆ ಹೈ, ಗುಜರಾತಿನ ಜಾಮ್ ನಗರ, ಒಎನ್‌ಜಿಸಿ ಸ್ಟೀಲ್ ನಿಕ್ಷೇಪ, ಅಸ್ಸಾಂಗಳ ತೈಲ ನಿಕ್ಷೇಪ ಸ್ಥಾವರಗಳಿಗೆ ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ ಎಂದರು.
21 ಮಿ. ಟನ್‌ಗೆ ಹೆಚ್ಚಳ: ಎಂಆರ್‌ಪಿಎಲ್ ವಾರ್ಷಿಕ ತೈಲ ಉತ್ಪಾದನೆಯನ್ನು 9ರಿಂದ 15 ಮಿಲಿಯನ್ ಮೆಟ್ರಿಕ್ ಟನ್‌ಗೆ ಹೆಚ್ಚಿಸಿದೆ. ಈ ಯೋಜನೆಗೆ ರು. 12,160 ಕೋಟಿ ಹೂಡಿಕೆ ಮಾಡಲಾಗಿದೆ. 2014 ಏಪ್ರೀಲ್‌ನಲ್ಲಿ ಈ ಯೋಜನೆ ಕಾರ್ಯಗತಗೊಳ್ಳುವುದು ಎಂದು ಅವರು ಹೇಳಿದರು.
2018ಕ್ಕೆ 18 ಮಿಲಿಯನ್ ಟನ್, 2021ಕ್ಕೆ ಈ ಸಾಮರ್ಥ್ಯ 21 ಮಿಲಿಯನ್ ಟನ್ ತಲುಪಲಿದೆ. ಇದಕ್ಕಾಗಿ ರು. 8,500 ಕೋಟಿ ಹೂಡಿಕೆ ಮಾಡಲಾಗುವುದು. ಇದರಲ್ಲಿ ಯೂರೋ 5 ಇಂಧನವನ್ನು ಉತ್ಪಾದಿಸುತ್ತಿದ್ದು, ಇದಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. 2014 ಆಗಸ್ಟ್‌ಗೆ ಪೆರ್ಮುದೆ ಮತ್ತು ಪಾದೂರಿನಲ್ಲಿ ಎರಡು ಭೂಗತ ತೈಲ ಸಂಗ್ರಹಣಾ ಯೋಜನೆಯೂ ಕಾರ್ಯಾರಂಭವಾಗಲಿದೆ. 900 ಟನ್ ಸಾಮರ್ಥ್ಯದ ಒಎಂಪಿಎಲ್ ಸ್ಥಾವರಕ್ಕೆ ರು. 5,760 ಕೋಟಿ ಹೂಡಿಕೆ ಮಾಡಲಾಗಿದ್ದು, ಇನ್ನೆರಡು ತಿಂಗಳಲ್ಲಿ ಕಾರ್ಯಾಚರಿಸಲಿದೆ ಎಂದು ಹೇಳಿದರು.
ಎಂಆರ್‌ಪಿಎಲ್ ಸಮುಚ್ಛಯದಲ್ಲಿ ರು. 25 ಸಾವಿರ ಕೋಟಿ ವೆಚ್ಚದಲ್ಲಿ ತೈಲೋತ್ಪನ್ನ ಕಾಂಪ್ಲೆಕ್ಸ್ ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲದೆ ಮಂಗಳೂರಿನಲ್ಲಿ ಎಲ್‌ಎಜಿ ಟರ್ಮಿನಲ್ ನಿರ್ಮಾಣ ಕಾರ್ಯ ನಡೆಯಲಿದೆ. ಇದಕ್ಕೆ ಕೇಂದ್ರ ತೈಲ ಸುರಕ್ಷತಾ ಸಮಿತಿ ಭೇಟಿ ನೀಡಿ ತೃಪ್ತಿ ವ್ಯಕ್ತಪಡಿಸಿದೆ. ಬಾಂಬೆ-ದಾಭೋಲ್ ಪೈಪ್‌ಲೈನ್ ದಾವಣಗೆರೆ ತಲುಪಲಿದ್ದು, ವಯಾ ಆಗುಂಬೆ ಮಾರ್ಗವಾಗಿ ಸಾಗಲಿದೆ ಎಂದು ನುಡಿದರು.
ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಪಿ.ಉಪಾಧ್ಯ, ಐಎಸ್‌ಪಿಆರ್‌ಎಲ್ ನಿರ್ದೇಶಕ ಪಿಳ್ಳೈ, ಎಂಎಸ್‌ಇಝಡ್ ನಿರ್ದೇಶಕ ರಾಜೀವ್‌ಭಂಗ, ಒಎಂಪಿಎಲ್ ನಿರ್ದೇಶಕ ರಾಮಚಂದ್ರನ್ ಹಾಜರಿದ್ದರು.